ADVERTISEMENT

IPL Auction | ಆರ್‌ಸಿಬಿಗೆ ಮರಳಿದ ದೇವದತ್ತ: ಭುವನೇಶ್ವರ್‌, ಕೃಣಾಲ್‌ಗೆ ಮಣೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 0:45 IST
Last Updated 26 ನವೆಂಬರ್ 2024, 0:45 IST
<div class="paragraphs"><p>ದೇವದತ್ತ ಪಡಿಕ್ಕಲ್</p></div>

ದೇವದತ್ತ ಪಡಿಕ್ಕಲ್

   

–ಐಪಿಎಲ್ ವೆಬ್‌ಸೈಟ್ ಚಿತ್ರ

ಬೆಂಗಳೂರು: ಕರ್ನಾಟಕದ ಬ್ಯಾಟರ್ ದೇವದತ್ತ ಪಡಿಕ್ಕಲ್ ಮತ್ತು ಆಲ್‌ರೌಂಡರ್ ಮನೋಜ್  ಭಾಂಡಗೆ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮರಳಿದರು. 

ADVERTISEMENT

ಸೌದಿ ಅರೇಬಿಯಾದ ಜೆದ್ದಾನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಮೆಗಾ ಬಿಡ್‌ ಪ್ರಕ್ರಿಯೆಯ ಎರಡನೇ ದಿನವಾದ ಸೋಮವಾರ ಆರ್‌ಸಿಬಿ ತಂಡವು ದೇವದತ್ತ ಅವರನ್ನು (ಮೂಲಬೆಲೆ; ₹2 ಕೋಟಿ) ಖರೀದಿಸಿತು. ಮನೋಜ್ ಅವರನ್ನೂ ಮೂಲಬೆಲೆ ₹ 30 ಲಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿತು. ಹರಾಜು ಪ್ರಕ್ರಿಯೆಯ ಮೊದಲ ದಿನವಾದ ಭಾನುವಾರ ಯಾವುದೇ ಕನ್ನಡಿಗ ಆಟಗಾರನನ್ನು ಆರ್‌ಸಿಬಿ ತೆಗೆದುಕೊಂಡಿರಲಿಲ್ಲ. ಆದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳಿಂದ ಟೀಕೆಗಳಿಗೆ ಗುರಿಯಾಗಿತ್ತು. 

ಪ್ರಮುಖ ಆಟಗಾರರಾದ ಕೆ.ಎಲ್. ರಾಹುಲ್, ಪ್ರಸಿದ್ಧ ಕೃಷ್ಣ, ಕರುಣ್ ನಾಯರ್ ಅವರನ್ನು ಬೇರೆ ಬೇರೆ ತಂಡಗಳು ಖರೀದಿಸಿದ್ದವು. ಆದರೆ ಆರ್‌ಸಿಬಿ ಬಿಡ್ ಮಾಡಿರಲಿಲ್ಲ. ಮೊದಲ ದಿನದಂದು ದೇವದತ್ತ ಅವರು ‘ಅನ್‌ಸೋಲ್ಡ್‌’ ಆಗಿದ್ದರು. ಸೋಮವಾರ ರಾತ್ರಿ ಎರಡನೇ ಸುತ್ತಿನಲ್ಲಿ ಅವರ ಹೆಸರನ್ನು ಎತ್ತಲಾಯಿತು. ಆಗ ಆರ್‌ಸಿಬಿಯು ಖರೀದಿಸಿತು. 

ಬೆಂಗಳೂರಿನ ದೇವದತ್ತ ಅವರು ಐಪಿಎಲ್‌ಗೆ ಆರ್‌ಸಿಬಿ ಮೂಲಕವೇ 2020ರಲ್ಲಿ ಪದಾರ್ಪಣೆ ಮಾಡಿದ್ದರು. ಎಡಗೈ ಬ್ಯಾಟರ್ ಮೊದಲ ಆವೃತ್ತಿಯಲ್ಲಿಯೇ 470 ರನ್ ಪೇರಿಸಿದ್ದರು. ಉದಯೋನ್ಮುಖ ಆಟಗಾರ ಪ್ರಶಸ್ತಿ ಗಳಿಸಿದ್ದರು.  2021ರ ಆವೃತ್ತಿಯಲ್ಲಿಯಲ್ಲಿಯೂ 52 ಎಸೆತಗಳಲ್ಲಿ ಶತಕ ದಾಖಲಿಸಿದ್ದರು. ಒಟ್ಟು 411 ರನ್ ಕಲೆಹಾಕಿದ್ದರು. ನಂತರದ ವರ್ಷದಲ್ಲಿ ಆರ್‌ಸಿಬಿಯು ಅವರನ್ನು ಬಿಡುಗಡೆ ಮಾಡಿತ್ತು. 2022ರ ಮೆಗಾ ಬಿಡ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಪಡಿಕ್ಕಲ್ ಅವರನ್ನು ಖರೀದಿಸಿತ್ತು. ಕಳೆದ ಆವೃತ್ತಿಯವರೆಗೂ ಅವರು ಅದೇ ತಂಡದಲ್ಲಿದ್ದರು. ಇದೀಗ ಮತ್ತೆ ‘ತವರು’ ತಂಡಕ್ಕೆ ಮರಳಿದ್ದಾರೆ.

ಕಳೆದ ತಿಂಗಳು ಅವರು  ಆಸ್ಟ್ರೇಲಿಯಾ ಎ ತಂಡದ ಎದುರು ಆಡಿದ ಭಾರತ ಎ ತಂಡದಲ್ಲಿದ್ದರು. ಸೋಮವಾರ ಮುಕ್ತಾಯವಾದ ಆಸ್ಟ್ರೇಲಿಯಾ ಎದುರಿನ ಪರ್ತ್‌ ಟೆಸ್ಟ್‌ನಲ್ಲಿಯೂ ಅವರು ಆಡಿದ್ದರು. 24 ವರ್ಷದ ಎಡಗೈ ಬ್ಯಾಟರ್ ದೇವದತ್ತ ಮೂರು ಮಾದರಿಗಳಲ್ಲಿಯೂ ಉತ್ತಮ ದಾಖಲೆ ಹೊಂದಿದ್ದಾರೆ. 

ರಾಯಚೂರಿನ 26 ವರ್ಷ ವಯಸ್ಸಿನ ಮನೋಜ್ ಅವರು ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಛಾಪು ಮೂಡಿಸಿದ್ದಾರೆ. ಕಳೆದ ಎರಡು ಆವೃತ್ತಿಗಳಲ್ಲಿಯೂ ಅವರು ಆರ್‌ಸಿಬಿ ತಂಡದಲ್ಲಿದ್ದರು. ಆದರೆ ಯಾವುದೇ ಪಂದ್ಯದಲ್ಲಿಯೂ ಅವರಿಗೆ 11ರ ಬಳಗದಲ್ಲಿ ಆಡುವ ಅವಕಾಶ ಲಭಿಸಿರಲಿಲ್ಲ. 

ಬೆಂಗಳೂರಿಗೆ ಭುವಿ

ಸುಮಾರು ಎರಡು ವರ್ಷಗಳಿಂದ ಭಾರತ ತಂಡದಲ್ಲಿ ಸ್ಥಾನ ಪಡೆಯದ ಮಧ್ಯಮವೇಗಿ ಭುವನೇಶ್ವರ್ ಕುಮಾರ್ ಅವರಿಗೆ  ಮೆಗಾ ಹರಾಜಿನಲ್ಲಿ ಅದೃಷ್ಟ ಖುಲಾಯಿಸಿತು. ಉತ್ತರಪ್ರದೇಶದ ಭುವನೇಶ್ವರ್ ಅವರನ್ನು ಆರ್‌ಸಿಬಿಯು ₹ 10.75 ಕೋಟಿ ನೀಡಿ ಖರೀದಿಸಿತು. ಇದರೊಂದಿಗೆ ಅವರು ಈ ಬಾರಿಯ ಬಿಡ್‌ನಲ್ಲಿ ಅತಿ ಹೆಚ್ಚು ಮೌಲ್ಯ ಪಡೆದ ಭಾರತೀಯ ಮಧ್ಯಮವೇಗದ ಬೌಲರ್ ಆದರು.  ಈ ಹಿಂದೆ ಅವರು ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದರು. 

ಆರ್‌ಸಿಬಿ ತಂಡವು ಈಗಾಗಲೇ ಆಸ್ಟ್ರೇಲಿಯಾದ ವೇಗಿ ಜೋಷ್ ಹ್ಯಾಜಲ್‌ವುಡ್, ಶ್ರೀಲಂಕಾದ ಮಧ್ಯಮವೇಗಿ ನುವಾನ್ ತುಷಾರ ಹಾಗೂ ವಿಂಡೀಸ್ ವೇಗಿ ರೊಮೆರಿಯೊ ಶೇಫರ್ಡ್ ಅವರನ್ನೂ ಸೇರ್ಪಡೆ ಮಾಡಿಕೊಂಡಿದೆ. ಎಡಗೈ ವೇಗಿ ಯಶ್ ದಯಾಳ್ ಈಗಾಗಲೇ ತಂಡದಲ್ಲಿ ರಿಟೇನ್ ಆಗಿದ್ದಾರೆ. ಇದೀಗ ಭುವಿ ಸೇರ್ಪಡೆಯಿಂದ ವೇಗದ ಬೌಲಿಂಗ್ ವಿಭಾಗಕ್ಕೆ ಬಲ ಬಂದಂತಾಗಿದೆ. ಸ್ಪಿನ್ ಆಲ್‌ರೌಂಡರ್ ಕೃಣಾಲ್ ಪಾಂಡ್ಯ ಅವರೂ ಆರ್‌ಸಿಬಿ ಸೇರಿದ್ದಾರೆ. 

ಇಂಗ್ಲೆಂಡ್‌ನ 21 ವರ್ಷದ ಎಡಗೈ ಬ್ಯಾಟರ್ ಜೇಕಬ್ ಬೇಥಲ್ ಅವರನ್ನು ಆಯ್ಕೆ ಮಾಡಲಾಗಿದೆ. ಅವರು ಇಂಗ್ಲೆಂಡ್ ತಂಡದಲ್ಲಿ 7 ಅಂತರರಾಷ್ಟ್ರೀಯ ಟಿ20 ಮತ್ತು 8 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.