ADVERTISEMENT

IPL Auction 2022– ಐಪಿಎಲ್ ಮೆಗಾ ಹರಾಜು: ಯುವ ಪ್ರತಿಭೆಗಳದ್ದೇ ಪಾರಮ್ಯ

ಐಪಿಎಲ್ ಮೆಗಾ ಹರಾಜು: ಇಶಾನ್‌ ಕಿಶನ್‌, ಹರ್ಷಲ್, ದೀಪಕ್‌ಗೆ ಡಬಲ್‌ ಸಂಭ್ರಮ lಡೆಲ್ಲಿಗೆ ವಾರ್ನರ್‌

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2022, 20:34 IST
Last Updated 12 ಫೆಬ್ರುವರಿ 2022, 20:34 IST
ಹರ್ಷಲ್ ಪಟೇಲ್ 
ಹರ್ಷಲ್ ಪಟೇಲ್    

ಬೆಂಗಳೂರು: ಜಾರ್ಖಂಡ್ ಹುಡುಗ ಇಶಾನ್ ಕಿಶನ್‌ಗೆ ಶನಿವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೆಗಾ ಹರಾಜಿನಲ್ಲಿ ಡಬಲ್ ಸಂಭ್ರಮ.

₹ 15.25 ಕೋಟಿ ಮೌಲ್ಯ ಗಿಟ್ಟಿಸಿದ ವಿಕೆಟ್‌ಕೀಪರ್, ಎಡಗೈ ಬ್ಯಾಟರ್ ಇಶಾನ್ ದಿನದ ಲಿಲಾವು ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಮೌಲ್ಯ ಗಳಿಸಿದ ಆಟಗಾರನಾದರು. ಅಲ್ಲದೇ ತಾವು ಈ ಹಿಂದೆ ಆಡುತ್ತಿದ್ದ ಮುಂಬೈ ಇಂಡಿಯನ್ಸ್‌ ತಂಡದಲ್ಲಿಯೇ ಉಳಿದರು.

‘ಮುಂಬೈ ತಂಡಕ್ಕೆ ಮರಳುತ್ತಿರುವುದು ಬಹಳ ಸಂತಸವಾಗುತ್ತಿದೆ. ತಂಡದ ಪರ ಆಡಲು ತವಕಗೊಂಡಿದ್ದೇನೆ. ಆ ತಂಡದಲ್ಲಿರುವ ಎಲ್ಲರೂ ನನ್ನನ್ನು ಕುಟುಂಬದ ಸದಸ್ಯನಂತೆಯೇ ಪ್ರೀತಿಸಿದ್ದಾರೆ. ಉತ್ತಮ ಕಾಣಿಕೆ ನೀಡುವುದನ್ನು ಮುಂದುವರಿಸುತ್ತೇನೆ’ ಎಂದು 23 ವರ್ಷದ ಇಶಾನ್ ಪ್ರತಿಕ್ರಿಯಿಸಿದರು.

ADVERTISEMENT

ಚೆನ್ನೈ ಸೂಪರ್ ಕಿಂಗ್ಸ್ ತಂಡವೂ ಮುಂಬೈನ ಹಾದಿಯಲ್ಲಿಯೇ ನಡೆಯಿತು. ತನ್ನ ಪ್ರಮುಖ ಆಲ್‌ರೌಂಡರ್ ದೀಪಕ್ ಚಾಹರ್ ಅವರಿಗೆ ₹ 14 ಕೋಟಿ ಕೊಟ್ಟು ಉಳಿಸಿಕೊಂಡಿತು.

ಬೆಳಗಿನ ಅವಧಿಯಲ್ಲಿ ಮುಂಬೈನ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರನ್ನು ಕೋಲ್ಕತ್ತ ನೈಟ್ ರೈಡರ್ಸ್‌ ₹12.25 ಕೋಟಿಗೆ ಖರೀದಿಸಿತ್ತು. ಮಧ್ಯಾಹ್ನದವರೆಗೂ ಅವರೇ ಅಗ್ರಸ್ಥಾನದಲ್ಲಿದ್ದರು. ಅವರ ದಾಖಲೆಯನ್ನು ಇಶಾನ್ ಮತ್ತು ದೀಪಕ್ ಮೀರಿದರು.

ತಮ್ಮ ತಂಡಗಳನ್ನು ಬಲಿಷ್ಠವಾಗಿ ಕಟ್ಟುವತ್ತ ಚಿತ್ತ ನೆಟ್ಟ ಫ್ರ್ಯಾಂಚೈಸಿ ಮಾಲೀಕರು ಆಟಗಾರರ ಖರೀದಿಗೆ ತುರುಸಿನ ಪೈಪೋಟಿಯೊಡ್ಡಿದರು. ಇದರಿಂದಾಗಿ ಕಳೆದ ಒಂದೂವರೆ ವರ್ಷದಲ್ಲಿ ವಿವಿಧ ಮಾದರಿಗಳಲ್ಲಿ ಮಿಂಚಿದ್ದ ಆಲ್‌ರೌಂಡರ್‌ಗಳು, ಅನುಭವಿ ಆಟಗಾರರು ದೊಡ್ಡ ಮೊತ್ತ ಪಡೆಯುವಂತಾಯಿತು. 30 ವರ್ಷದೊಳಗಿನ ಆಟಗಾರರ ಆಯ್ಕೆಗೆ ಹೆಚ್ಚು ಮಹತ್ವ ನೀಡಿದರು. ಇದರಿಂದಾಗಿ ಕೆಲವು ಫ್ರ್ಯಾಂಚೈಸಿಗಳು ತಾವು ಈಚೆಗೆ ಬಿಡುಗಡೆ ಮಾಡಿದ್ದ ಆಟಗಾರರನ್ನು ಖರೀದಿಸಲು ಒತ್ತು ನೀಡಿದವು.

ಚೆನ್ನೈ ಸೂಪರ್ ಕಿಂಗ್ಸ್ ತಂಡವು ವಿಂಡೀಸ್ ಆಟಗಾರ ಡ್ವೇನ್ ಬ್ರಾವೊ, ಅನುಭವಿ ಅಂಬಟಿ ರಾಯುಡು ಮತ್ತು ಕನ್ನಡಿಗ ರಾಬಿನ್ ಉತ್ತಪ್ಪ (₹ 2 ಕೋಟಿ, ಮೂಲಬೆಲೆ) ಅವರನ್ನು ಮರಳಿ ಪಡೆದುಕೊಂಡಿತು.

ಪಂಜಾಬ್ ಸೇರಿದ ಶಿಖರ್

ಭಾರತ ತಂಡದ ಆರಂಭಿಕ ಬ್ಯಾಟರ್ ಶಿಖರ್ ಧವನ್ ಅವರನ್ನು ಪಂಜಾಬ್ ಕಿಂಗ್ಸ್ ತಂಡವು ₹ 8.25 ಕೋಟಿ ಕೊಟ್ಟು ಖರೀದಿಸಿತು. ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಮತ್ತಿತರರ ನಿಯೋಗವು ಎಚ್ಚರಿಕೆಯಿಂದ ಆಟಗಾರರನ್ನು ಆಯ್ಕೆ ಮಾಡಿಕೊಂಡರು. ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ, ಇಂಗ್ಲೆಂಡ್ ಬ್ಯಾಟರ್ ಜಾನಿ ಬೆಸ್ಟೊ ಮತ್ತು ಭಾರತದ ಯುವ ಆಲ್‌ರೌಂಡರ್ ರಾಹುಲ್ ಚಾಹರ್ ಅವರನ್ನು ಖರೀದಿಸಿದರು.

ಲಖನೌ ತೆಕ್ಕೆಗೆ ಹೋಲ್ಡರ್

ವೆಸ್ಟ್ ಇಂಡೀಸ್ ತಂಡದ ಆಲ್‌ರೌಂಡರ್ ಜೇಸನ್ ಹೋಲ್ಡರ್ ಅವರನ್ನು ಪಡೆಯುವಲ್ಲಿ ಹೊಸ ತಂಡ ಲಖನೌ ಸೂಪರ್ ಜೈಂಟ್ಸ್‌ ಯಶಸ್ವಿಯಾಯಿತು. ಈ ತಂಡವು ಯುವ ಮತ್ತು ಅನುಭವಿ ಆಟಗಾರರನ್ನು ಸಮಸಂಖ್ಯೆಯಲ್ಲಿ ಖರೀದಿಸುವತ್ತ ಚಿತ್ತ ನೆಟ್ಟಿತು. ಇದರಿಂದಾಗಿ ಕೃಣಾಲ್ ಪಾಂಡ್ಯ, ದೀಪಕ್ ಹೂಡಾ ಉತ್ತಮ ಬೆಲೆ ಪಡೆದರು.

ಕರ್ನಾಟಕದ ಮನೀಷ್ ಪಾಂಡೆಗೂ ಈ ತಂಡದಲ್ಲಿ ಸ್ಥಾನ ಲಭಿಸಿತು. ಈ ಹಿಂದೆ ಅವರು ಸನ್‌ರೈಸರ್ಸ್‌ ಹೈದರಾಬಾದ್ ತಂಡದಲ್ಲಿದ್ದರು.

ರಾಯಲ್ಸ್‌ಗೆ ಅಶ್ವಿನ್

ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ಕನ್ನಡಿಗ ದೇವದತ್ತ ಪಡಿಕ್ಕಲ್ ಅವರನ್ನು ರಾಜಸ್ಥಾನ್ ರಾಯಲ್ಸ್‌ ತಂಡವು ದಿನದ ಆರಂಭದಲ್ಲಿಯೇ ತನ್ನ ತೆಕ್ಕೆಗೆ ಎಳೆದುಕೊಂಡಿತು. ಅನುಭವಿ ಅಶ್ವಿನ್ ಐದು ಕೋಟಿ ಮತ್ತು ಪಡಿಕ್ಕಲ್ 7.75 ಕೋಟಿ ರೂಪಾಯಿ ಜೇಬಿಗಿಳಿಸಿದರು.

ಹೋದ ಆವೃತ್ತಿಯಲ್ಲಿ ದೇವದತ್ತ ಆರ್‌ಸಿಬಿಯಲ್ಲಿ ಅಮೋಘ ಆಟವಾಡಿದ್ದರು.

ನಿಕೋಲಸ್‌ಗೆ ಬಂಪರ್

ವಿಂಡೀಸ್‌ನ ವಿಕೆಟ್‌ಕೀಪರ್‌–ಬ್ಯಾಟರ್ ನಿಕೋಲಸ್ ಪೂರನ್ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಪಾಲಾದರು. ₹10.75 ಕೋಟಿ ಮೌಲ್ಯ ಗಳಿಸುವ ಮೂಲಕ ಈ ಹರಾಜಿನಲ್ಲಿ ಅತಿ ಹೆಚ್ಚು ಮೌಲ್ಯ ಪಡೆದ ವಿದೇಶಿ ಆಟಗಾರನಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.