ADVERTISEMENT

IPL Auctions: ರಿಷಭ್ ಪಂತ್, ಕನ್ನಡಿಗ ಕೆ.ಎಲ್. ರಾಹುಲ್‌ಗೆ ಬೇಡಿಕೆ?

ದೊಡ್ಡ ಮೌಲ್ಯದ ರೇಸ್‌ನಲ್ಲಿ ಶ್ರೇಯಸ್, ಸಿರಾಜ್, ವಾಷಿಂಗ್ಟನ್

ಪಿಟಿಐ
Published 1 ನವೆಂಬರ್ 2024, 23:30 IST
Last Updated 1 ನವೆಂಬರ್ 2024, 23:30 IST
ರಿಷಭ್ ಪಂತ್ ಮತ್ತು ಕೆ.ಎಲ್. ರಾಹುಲ್
ರಿಷಭ್ ಪಂತ್ ಮತ್ತು ಕೆ.ಎಲ್. ರಾಹುಲ್   

ನವದೆಹಲಿ: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಮೆಗಾ ಹರಾಜಿನಲ್ಲಿ  ವಿಕೆಟ್‌ಕೀಪರ್ ರಿಷಭ್ ಪಂತ್ ಮತ್ತು ಕನ್ನಡಿಗ ಕೆ.ಎಲ್. ರಾಹುಲ್ ಅವರನ್ನು ಖರೀದಿಸಲು ಅಪಾರ ಪೈಪೋಟಿ ಏರ್ಪಡುವ ನಿರೀಕ್ಷೆ ಗರಿಗೆದರಿದೆ. 

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಮತ್ತು ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸಿದ್ದ ರಾಹುಲ್ ಅವರಿಬ್ಬರನ್ನೂ ತಂಡಗಳು ಬಿಡುಗಡೆ ಮಾಡಿವೆ. ಅದರಿಂದಾಗಿ ಅವರಿಬ್ಬರೂ ಈಗ ಬಿಡ್ ಪ್ರಕ್ರಿಯೆಯಲ್ಲಿ ಲಭ್ಯರಾಗಲಿದ್ದಾರೆ. ಇಬ್ಬರೂ ಆಟಗಾರರು ನಾಯಕತ್ವ, ವಿಕೆಟ್‌ಕೀಪಿಂಗ್ ಮತ್ತು ಬ್ಯಾಟಿಂಗ್‌ಗಳಲ್ಲಿ ನುರಿತವರಾಗಿರುವುದರಿಂದ ತಂಡಗಳು ಖರೀದಿಸಲು ಮುಗಿಬೀಳುವ ಸಾಧ್ಯತೆ ಇದೆ. 

ಇವರಷ್ಟೇ ಅಲ್ಲ; ಶ್ರೇಯಸ್ ಅಯ್ಯರ್, ಎಡಗೈ ವೇಗಿಗಳಾದ ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಮತ್ತು ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರಿಗೂ ಬೇಡಿಕೆ ಕುದುರುವ ನಿರೀಕ್ಷೆ ಇದೆ. 

ADVERTISEMENT

ಡಿಸೆಂಬರ್‌ ತಿಂಗಳಿನ ಮೂರನೇ ವಾರದಲ್ಲಿ ಎರಡು ದಿನಗಳ ಬಿಡ್ ಪ್ರಕ್ರಿಯೆ ನಡೆಯಲಿದೆ. ಈ ಬಾರಿ ವಿದೇಶದಲ್ಲಿ ಪ್ರಕ್ರಿಯೆ ನಡೆಯಲಿದೆ. 

ಅಂತರರಾಷ್ಟ್ರೀಯ ಆಟಗಾರರ ಮೇಲೆ  ₹ 75 ಕೋಟಿ ರಿಟೆನ್ಷನ್ ಮೊತ್ತ ನಿಗದಿಯಾಗಿರುವುದು ಮತ್ತು ರೈಟ್‌ ಟು ಮ್ಯಾಚ್ ಕಾರ್ಡ್‌ ನಿಯಮಗಳು  ಇರುವುದರಿಂದ ಬಿಡ್ ಕೂತೂಹಲ ಮೂಡಿಸಿದೆ. ಕೆಲವು ಫ್ರ್ಯಾಂಚೈಸಿಗಳು ತಮ್ಮ ರಿಟೆನ್ಸನ್ ಕೋಟಾದ ಬಹುತೇಕ ಭಾಗವನ್ನು ಖಾಲಿ ಮಾಡಿಕೊಂಡಿದೆ. ಪ್ರತಿ ತಂಡವೂ 15  ಆಟಗಾರರನ್ನು ಕಡಿಮೆ ಮೊತ್ತದಲ್ಲಿ ಪಡೆಯಬೇಕಿದೆ. 

ಆದರೆ  ಪಂಜಾಬ್ ಕಿಂಗ್ಸ್ (₹ 110.5 ಕೋಟಿ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (₹83 ಕೋಟಿ) ತಂಡಗಳ ಬಳಿ ಹೆಚ್ಚು ಹಣ ಪರ್ಸ್‌ನಲ್ಲಿ ಉಳಿದುಕೊಂಡಿದೆ. ಅದರಿಂದಾಗಿ ಈ ತಂಡಗಳು ದೊಡ್ಡ ಮೊತ್ತವನ್ನು ವಿನಿಯೋಗಿಸುವ ಸಾಧ್ಯತೆ ಹೆಚ್ಚಿದೆ. 

ಪಂತ್ ಅವರು  ಡೆಲ್ಲಿ ತಂಡದ ಸಹ ಮಾಲೀಕರ ಧೋರಣೆಗೆ ಅಸಮಾಧಾನಗೊಂಡು ಹೊರನಡೆದಿದ್ದಾರೆನ್ನಲಾಗಿದೆ. ಅದರಲ್ಲೂ ಹೆಮಂಗ್ ಬದಾನಿ ಮತ್ತು ವೈ. ವೇಣುಗೋಪಾಲ್ ಅವರನ್ನು ಕ್ರಮವಾಗಿ ಮುಖ್ಯ ಕೋಚ್ ಮತ್ತು ನಿರ್ದೇಶಕರಾಗಿ ನೇಮಕ ಮಾಡಿದ್ದರ ಬಗ್ಗೆ ಪಂತ್ ಅವರಿಗೆ ಅತೃಪ್ತಿ ಇತ್ತು ಎನ್ನಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.