ಅಬುಧಾಬಿ: ಲುಂಗಿ ಗಿಡಿ ಅವರ ಪ್ರಬಲ ಬೌಲಿಂಗ್ ದಾಳಿ ಮತ್ತು ಋತುರಾಜ್ ಗಾಯಕವಾಡ್ ಅವರ ಅಮೋಘ ಬ್ಯಾಟಿಂಗ್ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಕಂಗೆಡಿಸಿತು. ಒಂಬತ್ತು ವಿಕೆಟ್‌ಗಳ ಭರ್ಜರಿ ಜಯ ಗಳಿಸಿದ ಕಳೆದ ಬಾರಿಯ ರನ್ನರ್ ಅಪ್ ಚೆನ್ನೈ ಸೂಪರ್ ಕಿಂಗ್ಸ್ 13ನೇ ಆವೃತ್ತಿಯ ಅಭಿಯಾನ ಮುಕ್ತಾಯಗೊಳಿಸಿತು. ಜೊತೆಗೆ ಪಂಜಾಬ್ ತಂಡದ ಪ್ಲೇ ಆಫ್ ಆಸೆಗೆ ತಣ್ಣೀರೆರಚಿತು.
ಭಾನುವಾರ ಸಂಜೆ ನಡೆದ ಪಂದ್ಯದಲ್ಲಿ 154 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ನಿರಾಯಾಸವಾಗಿ ಬ್ಯಾಟಿಂಗ್ ಮಾಡಿತು. ಸತತ ಮೂರನೇ ಅರ್ಧಶತಕ ಗಳಿಸಿದ ಋತುರಾಜ್ ಗಾಯಕವಾಡ್ (ಔಟಾಗದೆ 62; 49 ಎಸೆತ, 6 ಬೌಂಡರಿ, 1 ಸಿಕ್ಸರ್) ಮೊದಲ ವಿಕೆಟ್‌ಗೆ ಫಾಫ್ ಡು ಪ್ಲೆಸಿ ಜೊತೆ 82 ರನ್ ಸೇರಿಸಿದರು. ಅರ್ಧಶತಕದತ್ ಹೆಜ್ಜೆ ಹಾಕಿದ್ದ ಪ್ಲೆಸಿ (48; 34 ಎ, 4 ಬೌಂ, 2 ಸಿ) 10ನೇ ಓವರ್‌ನಲ್ಲಿ ಕ್ರಿಸ್ ಜೋರ್ಡಾನ್ ಔಟ್ ಮಾಡುವುದರೊಂದಿಗೆ ಭರವಸೆ ಮೂಡಿಸಿದರು. ಆದರೆ ನಂತರ ಬಂದ ಅಂಬಟಿ ರಾಯುಡು (30; 30ಎ, 2 ಬೌಂ) ತಾಳ್ಮೆಯಿಂದ ಬ್ಯಾಟ್ ಬೀಸಿ ಋತುರಾಜ್‌ಗೆ ಉತ್ತಮ ಬೆಂಬಲ ನೀಡಿದರು. ಹೀಗಾಗಿ ಪಂಜಾಬ್ ಆಸೆ ಕಮರಿತು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ ಬೌಲರ್‌ಗಳಿಗೆ ಕೆ.ಎಲ್.ರಾಹುಲ್ ಮತ್ತು ಮಯಂಕ್ ಅಗರವಾಲ್ ಆರಂಭದಲ್ಲೇ ಬಿಸಿ ಮುಟ್ಟಿಸಿದರು. ಮೊದಲ ವಿಕೆಟ್‌ಗೆ ಇಬ್ಬರೂ 48 ರನ್ ಸೇರಿಸಿದರು. ಗಾಯಗೊಂಡು ಹಿಂದಿನ ಕೆಲವು ಪಂದ್ಯಗಳಲ್ಲಿ ಆಡದೇ ಇದ್ದ ಮಯಂಕ್ ಅಗರವಾಲ್ ಇನಿಂಗ್ಸ್‌ನ ಮೊದಲ ಓವರ್‌ನಲ್ಲೇ ದೀಪಕ್ ಚಾಹರ್ ಅವರನ್ನು ಎರಡು ಬಾರಿ ಬೌಂಡರಿಗೆ ಅಟ್ಟಿದರು. ಟೂರ್ನಿಯುದ್ದಕ್ಕೂ ಅತ್ಯುತ್ತಮ ಬ್ಯಾಟಿಂಗ್ ಮಾಡಿರುವ ರಾಹುಲ್ ಅವರು ಚಾಹಲ್ ಓವರ್‌ನಲ್ಲಿ ಇನಿಂಗ್ಸ್‌ನ ಮೊದಲ ಸಿಕ್ಸರ್ ಸಿಡಿಸಿದರು. ಶಾರ್ದೂಲ್ ಠಾಕೂರ್ ಓವರ್‌ನಲ್ಲಿ ಸತತ ಎರಡು ಬೌಂಡರಿಗಳನ್ನೂ ಚಚ್ಚಿದರು.
ಲುಂಗಿ ಗಿಡಿ ಓವರ್‌ನ ಮೊದಲ ಎಸೆತವನ್ನು ಡ್ರೈವ್ ಮಾಡಿ ಬೌಂಡರಿಗೆ ಅಟ್ಟಿದ ಮಯಂಕ್ ಅಗರವಾಲ್ ಮುಂದಿನ ಎಸೆತವನ್ನು ಕಟ್ ಮಾಡಲು ಪ್ರಯತ್ನಿಸಿದರು. ಆದರೆ ಬ್ಯಾಟಿನ ಅಂಚಿಗೆ ಸೋಕಿದ ಚೆಂಡು ಸ್ಟಂಪ್‌ಗೆ ಬಿದ್ದಿತು. ಲುಂಗಿ ಗಿಡಿ ತಮ್ಮ ಮುಂದಿನ ಓವರ್‌ನಲ್ಲಿ ನಿಧಾನಗತಿಯ ಎಸೆತ ಹಾಕಿ ರಾಹುಲ್ ವಿಕೆಟ್ ಉರುಳಿಸಿದರು. ಭರವಸೆಯ ಆಟಗಾರ ನಿಕೋಲಸ್ ಪೂರನ್ ಮತ್ತು ಸ್ಫೋಟಕ ಶೈಲಿಯ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಕೂಡ ಬೇಗನೇ ಮರಳುವುದರೊಂದಿಗೆ ಪಂಜಾಬ್ ತೀವ್ರ ಸಂಕಷ್ಟಕ್ಕೆ ಒಳಗಾಯಿತು. ಆರನೇ ಕ್ರಮಾಂಕದ ದೀಪಕ್ ಹೂಡಾ (ಔಟಾಗದೆ 62; 30 ಎ, 3 ಬೌಂ, 4 ಸಿ) ಏಕಾಂಗಿ ಹೋರಾಟ ನಡೆಸಿದರು. ಹೀಗಾಗಿ ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.