ADVERTISEMENT

IPL-2020 | KKR vs KXIP: ಮನದೀಪ್-ಗೇಲ್ ಜೊತೆಯಾಟ; ಕಿಂಗ್ಸ್‌ಗೆ ಸತತ ಐದನೇ ಜಯ

ಏಜೆನ್ಸೀಸ್
Published 26 ಅಕ್ಟೋಬರ್ 2020, 18:36 IST
Last Updated 26 ಅಕ್ಟೋಬರ್ 2020, 18:36 IST
ಮನದೀಪ್ ಸಿಂಗ್ ಮತ್ತು ಕ್ರಿಸ್ ಗೇಲ್ (ಐಪಿಎಲ್‌ ಟ್ವಿಟರ್‌ ಚಿತ್ರ)
ಮನದೀಪ್ ಸಿಂಗ್ ಮತ್ತು ಕ್ರಿಸ್ ಗೇಲ್ (ಐಪಿಎಲ್‌ ಟ್ವಿಟರ್‌ ಚಿತ್ರ)   
""

ಶಾರ್ಜಾ: ಮೂರು ದಿನಗಳ ಹಿಂದೆಯಷ್ಟೇ ತಂದೆಯನ್ನು ಕಳೆದುಕೊಂಡರೂ ತಂಡದೊಂದಿಗೆ ಉಳಿಯಲು ನಿರ್ಧರಿಸಿದ ಮನದೀಪ್ ಸಿಂಗ್ ಮನಮೋಹಕ ಹೊಡೆತಗಳ ಮೂಲಕ ಬೆಳಗಿದರು. ಕ್ರಿಸ್ ಗೇಲ್ ಜೊತೆ ಎರಡನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ ಅವರು ಕಿಂಗ್ಸ್ ಇಲೆವನ್ ಪಂಜಾಬ್ ತಂಡಕ್ಕೆ ಎಂಟು ವಿಕೆಟ್‌ಗಳ ಜಯ ಗಳಿಸಿಕೊಟ್ಟರು.

ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್ರೈಡರ್ಸ್ ನೀಡಿದ 150 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಪಂಜಾಬ್ ಏಳು ಎಸೆತಗಳು ಉಳಿದಿರುವಾಗಲೇ ಎರಡು ವಿಕೆಟ್ ಕಳೆದುಕೊಂಡು ದಡ ಸೇರಿತು. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿತು. ಇದು ತಂಡದ ಸತತ ಐದನೇ ಜಯವಾಗಿದೆ.

ಮೊದಲ ವಿಕೆಟ್‌ಗೆ 47 ರನ್‌ಗಳ ಜೊತೆಯಾಟವಾಡಿದ ನಾಯಕ ಕೆ.ಎಲ್.ರಾಹುಲ್ ಯುವ ಬೌಲರ್ ವರುಣ್ ಚಕ್ರವರ್ತಿ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ನಂತರ ಮನದೀಪ್ (66; 56 ಎಸೆತ, 8 ಬೌಂಡರಿ, 2 ಸಿಕ್ಸರ್) ಮತ್ತು ಗೇಲ್ (51; 29 ಎ, 2 ಬೌಂ, 5 ಸಿ) ಆಟ ರಂಗೇರಿತು. ಗೆಲುವಿಗೆ ಮೂರು ರನ್‌ಗಳು ಬೇಕಾಗಿದ್ದಾಗ ಗೇಲ್ ಔಟಾದರು. ಆದರೆ ಮನದೀಪ್ ಸಿಂಗ್ ಅಜೇಯರಾಗಿ ಉಳಿದರು.

ADVERTISEMENT

ಮೊಹಮ್ಮದ್ ಶಮಿ ಪ್ರಬಲ ದಾಳಿ
ಟಾಸ್ ಗೆದ್ದ ಪಂಜಾಬ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊಹಮ್ಮದ್ ಶಮಿ ಮತ್ತು ಕ್ರಿಸ್ ಜೋರ್ಡಾನ್ ಅವರ ವೇಗದ ದಾಳಿ ಜೊತೆ ರವಿ ಬಿಷ್ಣೋಯಿ ಅವರ ಸ್ಪಿನ್ ಜಾಲ ಕೋಲ್ಕತ್ತ ನೈಟ್ ರೈಡರ್ಸ್ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸಿತು. ಆರಂಭಿಕ ಬ್ಯಾಟ್ಸ್‌ಮನ್‌ ಶುಭಮನ್ ಗಿಲ್ (57; 45 ಎ, 3 ಬೌಂ, 4 ಸಿ), ನಾಯಕ ಏಯಾನ್ ಮಾರ್ಗನ್ ಮತ್ತು ಒಂಬತ್ತನೇ ಕ್ರಮಾಂಕದ ಲಾಕಿ ಫರ್ಗ್ಯುಸನ್ ಮಾತ್ರ ಪ್ರತಿರೋಧ ಒಡ್ಡಿದರು.

ಮೊದಲ ಓವರ್‌ನ ಎರಡನೇ ಎಸೆತದಲ್ಲೇ ನಿತೀಶ್ ರಾಣಾ ಔಟಾದರು. ರಾಹುಲ್ ತ್ರಿಪಾಠಿ ಮತ್ತು ದಿನೇಶ್ ಕಾರ್ತಿಕ್ ಕೂಡ ಬೇಗ ವಾಪಸಾದರು. ಈ ಸಂದರ್ಭದಲ್ಲಿ ಗಿಲ್ ಜೊತೆಗೂಡಿದ ನಾಯಕ ಮಾರ್ಗನ್ (40; 25 ಎ, 5 ಬೌಂ, 2 ಸಿ) 81 ರನ್‌ಗಳನ್ನು ಸೇರಿಸಿದರು. ಮಾರ್ಗನ್ ವಿಕೆಟ್ ಬಿದ್ದ ನಂತರ ಯಾರಿಗೂ ಕ್ರೀಸ್‌ನಲ್ಲಿ ತಳವೂರಲು ಆಗಲಿಲ್ಲ. ಶುಭಮನ್ ನಿರಾಯಾಸವಾಗಿ ಬ್ಯಾಟ್ ಬೀಸಿ ಅರ್ಧಶತಕ ಪೂರೈಸಿದರು. 16ನೇ ಓವರ್‌ನಲ್ಲಿ ಕ್ರೀಸ್‌ಗೆ ಇಳಿದ ಲಾಕಿ ಫರ್ಗ್ಯುಸನ್ ಬೀಸು ಹೊಡೆತಗಳಿಗೆ ಮುಂದಾದರು. ಆದರೆ 19ನೇ ಓವರ್‌ನಲ್ಲಿ ಗಿಲ್‌ ವಿಕೆಟ್ ಪಡೆಯುವುದರೊಂದಿಗೆ ಶಮಿ ಮತ್ತೊಂದು ಪೆಟ್ಟು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.