ADVERTISEMENT

IPL-2020: ಮುಂಬೈ ಮುಡಿಗೆ ಕಿರೀಟ; ಐದನೇ ಸಲ ಪ್ರಶಸ್ತಿ ಗೆದ್ದ ರೋಹಿತ್ ಬಳಗ

ಶ್ರೇಯಸ್, ರಿಷಭ್ ಹೋರಾಟಕ್ಕೆ ಒಲಿಯದ ಜಯ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2020, 22:20 IST
Last Updated 10 ನವೆಂಬರ್ 2020, 22:20 IST
ಮುಂಬೈ ಇಂಡಿಯನ್ಸ್ ತಂಡ
ಮುಂಬೈ ಇಂಡಿಯನ್ಸ್ ತಂಡ   
""
""

ದುಬೈ: ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವು ಐದನೇ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಗೆದ್ದಿತು.ಮಂಗಳವಾರ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಮುಂಬೈ ತಂಡವು 5 ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿತು.

ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 156 ರನ್ ಗಳಿಸಿತು. ಅದಕ್ಕುತ್ತರವಾಗಿ ಮುಂಬೈ ತಂಡವು ನಾಯಕ ರೋಹಿತ್ ಶರ್ಮಾ (68;51ಎಸೆತ, 5ಬೌಂಡರಿ, 4 ಸಿಕ್ಸರ್) ಅರ್ಧಶತಕ ಬಾರಿಸಿ, ತಮ್ಮ 200ನೇ ಐಪಿಎಲ್ ಪಂದ್ಯವನ್ನು ಅವಿಸ್ಮರಣೀಯಗೊಳಿಸಿಕೊಂಡರು.ಮುಂಬೈ18.4 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 157 ರನ್ ಗಳಿಸಿತು.2013, 2015, 2017 ಮತ್ತು 2019ರಲ್ಲಿ ಮುಂಬೈ ಪ್ರಶಸ್ತಿ ಗೆದ್ದಿತ್ತು.

ಆದರೆ ಇದೇ ಮೊದಲ ಸಲ ಫೈನಲ್ ಪ್ರವೇಶಿಸಿದ್ದ ಡೆಲ್ಲಿ ತಂಡದ ಪ್ರಶಸ್ತಿ ಜಯದ ಕನಸು ಕಮರಿತು. ನಾಯಕ ಶ್ರೇಯಸ್ ಅಯ್ಯರ್ (ಔಟಾಗದೆ 65; 50ಎ, 6ಬೌಂ, 2ಸಿ) ಮತ್ತು ರಿಷಭ್ ಪಂತ್ (56; 38ಎ, 4ಬೌಂ, 2ಸಿ) ಅವರ ಅರ್ಧಶತಕಗಳು ವ್ಯರ್ಥವಾದವು.

ADVERTISEMENT

ಇವರಿಬ್ಬರೂ 96 ರನ್‌ಗಳ ಜೊತೆಯಾಟವಾಡುವ ಮುನ್ನ ಡೆಲ್ಲಿ ತಂಡವು ಸಂಕಷ್ಟದಲ್ಲಿತ್ತು. ಪಂದ್ಯದ ಮೊದಲ ಎಸೆತದಿಂದಲೇ ಮುಂಬೈ ತಂಡವು ತನ್ನ ಪಾರಮ್ಯ ಮೆರೆಯಿತು. ಎಡಗೈ ವೇಗಿ ಟ್ರೆಂಟ್ ಬೌಲ್ಟ್‌ ಬಿರುಗಾಳಿ ವೇಗದ ಬೌಲಿಂಗ್‌ನಿಂದಾಗಿ ಮತ್ತು ಜಯಂತ್ ಯಾದವ್ ಸ್ಪಿನ್ ಮೋಡಿಗೆ ಡೆಲ್ಲಿ ತಂಡವು 22 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಇನಿಂಗ್ಸ್‌ನ ಮೊದಲ ಎಸೆತದಲ್ಲಿಯೇ ಮಾರ್ಕಸ್ ಸ್ಟೋಯಿನಿಸ್ ವಿಕೆಟ್ ಕಬಳಿಸಿದ ಟ್ರೆಂಟ್ ತಮ್ಮ ತಂಡದ ಆಟಗಾರರಲ್ಲಿ ಹುರುಪು ತುಂಬಿದರು. ಔಟಾದರು. ತಮ್ಮ ನಂತರದ ಓವರ್‌ನಲ್ಲಿ ಅಜಿಂಕ್ಯ ರಹಾನೆ ಮತ್ತು ಶಿಮ್ರೊನ್ ಹೆಟ್ಮೆಯರ್ ವಿಕೆಟ್ ಕೂಡ ಪಡೆದರು.

ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಶಿಖರ್ ಧವನ್ ಕೇವಲ 15 ರನ್ ಗಳಿಸಿ ಔಟಾದರು.

ಸಾಧಾರಣ ಮೊತ್ತವನ್ನು ಬೆನ್ನತ್ತಿದ ಮುಂಬೈಗೆ ಆರಂಭದಲ್ಲಿಯೇ ಡೆಲ್ಲಿಯ ಸ್ಟೋಯಿನಿಸ್ ಪೆಟ್ಟು ಕೊಟ್ಟರು. ಕ್ವಿಂಟನ್ ಡಿ ಕಾಕ್ (20 ರನ್) ಅವರ ವಿಕೆಟ್ ಪಡೆದರು. ಇನ್ನೊಂದು ಬದಿಯಲ್ಲಿದ್ದ ರೋಹಿತ್ ಶರ್ಮಾ ರನ್‌ ಗಳಿಕೆಯ ವೇಗವನ್ನು ಕಡಿಮೆ ಮಾಡಲಿಲ್ಲ. ಸೂರ್ಯಕುಮಾರ್ ರನ್‌ಔಟ್ ಆದರು. ಆಗ ರೋಹಿತ್ ಜೊತೆಗೂಡಿದ ಇಶಾನ್ ಕಿಶನ್ (ಔಟಾಗದೆ 33 19ಎ) ತಂಡದ ಗೆಲುವನ್ನು ಖಚಿತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.