ADVERTISEMENT

IPL-2020 | KXIP vs RR: ಅಬ್ಬರಿಸಿದ ರಾಜಸ್ಥಾನ ರಾಯಲ್ಸ್‌ಗೆ ಏಳು ವಿಕೆಟ್‌ಗಳ ಜಯ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 20:03 IST
Last Updated 30 ಅಕ್ಟೋಬರ್ 2020, 20:03 IST
ರಾಜಸ್ಥಾನ ರಾಯಲ್ಸ್‌ ತಂಡದ ಆಟಗಾರರಾದ ಸಂಜು ಸ್ಯಾಮ್ಸನ್‌ ಮತ್ತು ಸ್ಟೀವ್‌ ಸ್ಮಿತ್‌
ರಾಜಸ್ಥಾನ ರಾಯಲ್ಸ್‌ ತಂಡದ ಆಟಗಾರರಾದ ಸಂಜು ಸ್ಯಾಮ್ಸನ್‌ ಮತ್ತು ಸ್ಟೀವ್‌ ಸ್ಮಿತ್‌   
""

ಅಬುಧಾಬಿ: ಇಲ್ಲಿನ ಶೇಖ್ ಝಯೇದ್ ಕ್ರೀಡಾಂಗಣದಲ್ಲಿ ಕಿಂಗ್‌ ಇಲೆವನ್‌ ಪಂಜಾಬ್‌ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ತಂಡವು ಏಳು ವಿಕೆಟ್‌ಗಳ ಜಯ ಸಾಧಿಸಿತು.

ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡ ರಾಜಸ್ಥಾನ ರಾಯಲ್ಸ್‌ಗೆ ಕಿಂಗ್‌ ಇಲೆವನ್‌ ಪಂಜಾಬ್‌ ತಂಡವು 186 ರನ್‌ಗಳ ಗುರಿ ನೀಡಿತು.

ಈ ಮೊತ್ತ ಬೆನ್ನತ್ತಿದ ರಾಯಲ್ಸ್‌ ತಂಡವು 17.3 ಓವರ್​ನಲ್ಲಿ 3 ವಿಕೆಟ್ ನಷ್ಟಕ್ಕೆ 186 ರನ್​ಗಳ ಗುರಿ ತಲುಪಿತು.

ADVERTISEMENT

ರಾಜಸ್ಥಾನ ರಾಯಲ್ಸ್‌ ತಂಡದ ಓಪನಿಂಗ್‌ ಬ್ಯಾಟ್ಸ್‌ಮನ್‌ಗಳಾದ ಬೆನ್ ಸ್ಟೋಕ್ಸ್ ಹಾಗೂ ರಾಬಿನ್‌ ಉತ್ತಪ್ಪ ಆರಂಭದಿಂದಿಲೇ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದರು. ಆ ಮೂಲಕ ರಾಯಲ್ಸ್‌ ತಂಡವು 5ನೇ ಓವರ್‌ಗೆ 53 ರನ್‌ ಗಳಿಸುವಲ್ಲಿ ಸಫಲವಾಯಿತು.

ಬಿನ್‌ ಸ್ಟೋಕ್ಸ್‌ ಅರ್ಧ ಶತಕ ಹೊಡೆದು ವಿಕೆಟ್‌ ಒಪ್ಪಿಸಿದ ನಂತರ ಬಂದ ಸಂಜು ಸ್ಯಾಮ್ಸನ್‌ ಅವರೂ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದರು.

ನಾಲ್ಕನೇ ವಿಕೆಟ್‌ಗೆ ಜೊತೆಯಾದ ನಾಯಕ ಸ್ಟೀವ್ ಸ್ಮಿತ್ ಹಾಗೂ ಜೋಸ್ ಬಟ್ಲರ್ ಅವರು ತಮ್ಮ ಅತ್ಯುತ್ತಮ ಜೊತೆಯಾಟದ ಮೂಲಕ ರಾಜಸ್ಥಾನ ರಾಯಲ್ಸ್‌ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಈ ಗೆಲುವಿನ ಮೂಲಕ ರಾಜಸ್ಥಾನ ರಾಯಲ್ಸ್‌ ತಂಡವು ಐಪಿಎಲ್‌ ಟೇಬಲ್‌ನಲ್ಲಿ ಐದನೇ ಸ್ಥಾನಕ್ಕೇರಿದೆ.

ಸಹಸ್ರ ಸಿಕ್ಸರ್‌ ಸರದಾರ 'ಕ್ರಿಸ್ ಗೇಲ್'

ಇಂಡಿಯನ್ ಪ್ರೀಮಿಯರ್ ಲೀಗ್‌ ಕ್ರಿಕೆಟ್ ಟೂರ್ನಿಯಲ್ಲಿ ಒಂದು ಸಾವಿರ ಸಿಕ್ಸರ್‌ ಗಳಿಸಿದ ದಾಖಲೆ ಮಾಡಿದ ಕ್ರಿಸ್ ಗೇಲ್ ಶುಕ್ರವಾರ ಕೇವಲ ಒಂದು ರನ್ ಅಂತರದಿಂದ ಶತಕ ದಾಖಲಿಸುವುದನ್ನು ತಪ್ಪಿಸಿಕೊಂಡರು.

ಶೇಖ್ ಝಯೇದ್ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ನಡೆದ ಪಂದ್ಯದಲ್ಲಿ ಎಂಟು ಸಿಕ್ಸರ್‌ಗಳನ್ನು ಸಿಡಿಸಿದ ಗೇಲ್ ಒಟ್ಟು 1000 ಸಿಕ್ಸರ್ ಸಿಡಿಸಿದ ಏಕೈಕ ಆಟಗಾರನಾದರು. ಕೇವಲ 63 ಎಸೆತಗಳಲ್ಲಿ 99 ರನ್ ಗಳಿಸಿದ ಅವರ ಬಲದಿಂದ ಕಿಂಗ್ಸ್ ಇಲೆವನ್ ಪಂಜಾಬ್ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 185 ರನ್‌ಗಳ ಮೊತ್ತ ಪೇರಿಸಿತು.

ರಾಯಲ್ಸ್‌ ವೇಗಿ ಜೋಫ್ರಾ ಆರ್ಚರ್ ಹಾಕಿದ ಕೊನೆಯ ಓವರ್‌ನ ನಾಲ್ಕನೇ ಎಸೆತ ಯಾರ್ಕರ್‌ಗೆ ಕ್ಲೀನ್ ಬೌಲ್ಡ್ ಆಗುವ ಮುನ್ನ ಕ್ರಿಸ್ ಗೇಲ್, 41ನೇ ವಯಸ್ಸಿನಲ್ಲಿಯೂ ತಾವು ’ಯುನಿವರ್ಸ್ ಬಾಸ್‘ ಎಂದು ತೋರಿಸಿಕೊಟ್ಟರು.

ಜೋಫ್ರಾ ಹಾಕಿದ ಮೊದಲ ಓವರ್‌ನಲ್ಲಿ ಮನದೀಪ್ ಸಿಂಗ್ ಔಟಾದಾಗ ಕ್ರೀಸ್‌ಗೆ ಬಂದ ಗೇಲ್, ನಾಯಕ ರಾಹುಲ್‌ ಜೊತೆಗೂಡಿ ಎರಡನೇ ವಿಕೆಟ್‌ಗೆ 120 ರನ್‌ ಸೇರಿಸಿದರು.

ಇದರಲ್ಲೂ ಗೇಲ್ ಅವರದ್ದೇ ಶರವೇಗದ ಆಟ. ರಾಹುಲ್ ಅವರದ್ದು ಶಾಂತಚಿತ್ತದ ಆಟ. 33 ಎಸೆತಗಳಲ್ಲಿ ಗೇಲ್ ಅರ್ಧಶತಕ ಪೂರೈಸಿದರು. ಅದರಲ್ಲಿ ನಾಲ್ಕು ಸಿಕ್ಸರ್ ಮತ್ತು ನಾಲ್ಕು ಬೌಂಡರಿಗಳಿದ್ದವು.

15ನೇ ಓವರ್‌ನಲ್ಲಿ ರಾಹುಲ್ (46; 41ಎ)ಬೀಸು ಹೊಡೆತವೊಂದರಲ್ಲಿ ರಾಹುಲ್ ತೆವಾಟಿಯಾಗೆ ಬೌಂಡರಿಗೆರೆಯ ಬಳಿ ಕ್ಯಾಚ್ ಆದರು. ಬೆನ್ ಸ್ಟೋಕ್ಸ್‌ ವಿಕೆಟ್ ಗಳಿಸಿ ಮುಗುಳ್ನಕ್ಕರು. ಕ್ರೀಸ್‌ಗೆ ಬಂದ ನಿಕೊಲಸ್ ಪೂರನ್ ತಮ್ಮ ತವರಿನ ಗೆಳೆಯ ಗೇಲ್ ಜೊತೆಗೆ ಪಟಪಟನೆ 41 ರನ್‌ಗಳನ್ನು ಸೇರಿಸಿದರು. ಆದರೆ 18ನೇ ಓವರ್‌ನಲ್ಲಿ ಅವರೂ ಸ್ಟೋಕ್ಸ್‌ಗೆ ವಿಕೆಟ್ ಕೊಟ್ಟರು.

ಆದರೆ ಕ್ರಿಸ್ ಗೇಲ್ ಸಿಡಿಲಬ್ಬರ ಮಾತ್ರ ನಿಂತಿರಲಿಲ್ಲ. ಐಪಿಎಲ್‌ನಲ್ಲಿ ಏಳನೇ ಶತಕ ದಾಖಲಿಸುವತ್ತ ದಾಪುಗಾಲಿಟ್ಟಿದ್ದರು. ಐಪಿಎಲ್‌ನಲ್ಲಿ ಎರಡು ಬಾರಿ 99 ರನ್‌ಗಳಿಸಿ ಔಟಾದ ಬ್ಯಾಟ್ಸ್‌ಮನ್ ಎಂಬ ದಾಖಲೆಯೂ ಅವರದ್ದಾಯಿತು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.