ADVERTISEMENT

ಮಹಿಗಾಗಿ ಮಳೆಯನ್ನೂ ಲೆಕ್ಕಿಸದ ಅಭಿಮಾನಿಗಳು

ಕ್ರೀಡಾಂಗಣದ ಅವ್ಯವಸ್ಥೆಗೆ ಪ್ರೇಕ್ಷಕರ ಅಸಮಾಧಾನ

ಪಿಟಿಐ
Published 29 ಮೇ 2023, 15:27 IST
Last Updated 29 ಮೇ 2023, 15:27 IST
ಚೆನ್ನೈ ಸೂಪರ್ ಕಿಂಗ್ಸ್ ಪೋಷಾಕಿನಲ್ಲಿ ಅಭಿಮಾನಿಗಳ ಸಂಭ್ರಮ  –ಪಿಟಿಐ ಚಿತ್ರ
ಚೆನ್ನೈ ಸೂಪರ್ ಕಿಂಗ್ಸ್ ಪೋಷಾಕಿನಲ್ಲಿ ಅಭಿಮಾನಿಗಳ ಸಂಭ್ರಮ  –ಪಿಟಿಐ ಚಿತ್ರ   

ಅಹಮದಾಬಾದ್: ದೇಶದ ಬೇರೆ ಬೇರೆ ನಗರಗಳಿಂದ ಮಹೇಂದ್ರಸಿಂಗ್ ಧೋನಿ ಆಟವನ್ನು ನೋಡಲೆಂದೆ ಸಾವಿರಾರು ಅಭಿಮಾನಿಗಳೂ ಇಲ್ಲಿಗೆ ಬಂದಿದ್ದಾರೆ.

ಆದರೆ ಫೈನಲ್ ಪಂದ್ಯ ನಡೆಯಲಿದ್ದ ಭಾನುವಾರ ರಭಸದ ಮಳೆ ಸುರಿಯಿತು. ಸೋಮವಾರಕ್ಕೆ ಪಂದ್ಯ ಮುಂದೂಡಲಾಯಿತು. ಆದರೂ ಅಭಿಮಾನಿಗಳ ಉತ್ಸಾಹ ಕುಂದಿಲ್ಲ. ಆದರೆ ಕ್ರೀಡಾಂಗಣದ ಅವ್ಯವಸ್ಥೆಗಳ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚೆನ್ನೈ, ಬೆಂಗಳೂರು, ಕೊಚ್ಚಿ, ದೆಹಲಿ, ಚಂಡೀಗಡ ಮತ್ತು ಮುಂಬೈ ನಗರಗಳಿಂದ ಬಂದು ಸೇರಿರುವ ಬಹುತೇಕ ಅಭಿಮಾನಿಗಳು ಭಾನುವಾರ ತಡರಾತ್ರಿ ಮತ್ತು ಸೋಮವಾರವೇ ತಮ್ಮ ಊರುಗಳಿಗೆ ಹಿಂದಿರುಗುವವರಿದ್ದರು. ಆದರೆ, ಪಂದ್ಯ ಮುಂದೂಡಿದ್ದರಿಂದ ತಮ್ಮ ವಿಮಾನಯಾನ ಟಿಕೆಟ್‌ಗಳನ್ನು ರದ್ದುಗೊಳಿಸಿದ್ದಾರೆ.

ADVERTISEMENT

ಮಂಗಳವಾರದ ಟಿಕೆಟ್‌ಗಳಿಗೆ ಹೆಚ್ಚು ಹಣ ಕೊಟ್ಟು ಖರೀದಿಸಿದ್ದಾರೆ. ಪಂದ್ಯ ವೀಕ್ಷಿಸಿಯೇ ಮರಳಲು ನಿರ್ಧರಿಸಿದ್ದಾರೆ. ಕೆಲವರು ತಮ್ಮ ಹೋಟೆಲ್ ಕೋಣೆಗಳನ್ನು ಒಂದು ಹೆಚ್ಚುವರಿ ದಿನಕ್ಕೆ ಉಳಿಸಿಕೊಂಡಿದ್ದಾರೆ. ಇನ್ನಷ್ಟು ಜನರು ರಾತ್ರಿಯನ್ನು ರೈಲ್ವೆ ನಿಲ್ದಾಣದಲ್ಲಿ ಕಳೆದಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.  ಆದರೆ ಕೆಲವು ಅಭಿಮಾನಿಗಳು ಅನಿವಾರ್ಯ ಕಾರಣಗಳಿಂದ ತಮ್ಮ ಊರುಗಳಿಗೆ ಮರಳಿದ್ದಾರೆ.

ತಮ್ಮ ನೆಚ್ಚಿನ ‘ಥಾಲಾ‘ ಧೋನಿಯವರ ವೃತ್ತಿಜೀವನದ ಕೊನೆಯ ಐಪಿಎಲ್ ಪಂದ್ಯ ಇದಾಗುವ ಸಾಧ್ಯತೆ ಇದೆ. ಮುಂದಿನ ವರ್ಷದ ಐಪಿಎಲ್‌ಗೂ ಮುನ್ನ ಅವರು ನಿವೃತ್ತಿ ಘೋಷಿಸಬಹುದು ಎನ್ನಲಾಗಿದೆ. ಆದ್ದರಿಂದಲೇ ಅವರ ಆಟವನ್ನು ಕಣ್ಮನ ತುಂಬಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.  7 ಅಂಕಿ ಇರುವ ಹಳದಿ ಬಣ್ಣದ ಪೋಷಾಕು ತೊಟ್ಟು ಕ್ರೀಡಾಂಗಣದಲ್ಲಿ ಸೇರಿದ್ದರು.

’ನನ್ನ ಹತ್ತು ವರ್ಷದ ಮಗನಿಗೆ ಧೋನಿಯೆಂದರೆ ಅಚ್ಚುಮೆಚ್ಚು. ಅದಕ್ಕಾಗಿಯೇ ಡಗ್‌ಔಟ್‌ ಪಕ್ಕದ ಗ್ಯಾಲರಿಯ ಟಿಕೆಟ್ ಖರೀದಿಸಿದ್ದೆ. ಆದರೆ ಮಳೆಯಿಂದಾಗಿ ಅಲ್ಲಿ ಕೂರಲು ಸಾಧ್ಯವಾಗಲಿಲ್ಲ. ಜನಸಂದಣಿ ಹೆಚ್ಚಿದ್ದ ಕಾರಣ ಗ್ಯಾಲರಿಯೊಳಗೆ ಇರುವುದು ಸುರಕ್ಷಿತವೂ ಆಗಿರಲಿಲ್ಲ. ಫೋನ್ ಸಂಪರ್ಕವೂ ಸಾಧ್ಯವಿರಲಿಲ್ಲ. ಆದ್ದರಿಂದ ಪತ್ನಿ, ಮಕ್ಕಳನ್ನು ಕರೆದುಕೊಂಡು ಹೊರಬೇಕಾಯಿತು‘ ಎಂದು ಅಭಿಮಾನಿ ಕೆಡಿಯಾ ಬೇಸರ ವ್ಯಕ್ತಪಡಿಸಿದರು.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 1.32 ಲಕ್ಷ  ಆಸನ ಸಾಮರ್ಥ್ಯವಿದೆ. ಆದರೆ ಭಾನುವಾರ ಮಳೆಯಿಂದಾಗಿ ನೀರು ಹರಿದು ಹೋಗುವ ವ್ಯವಸ್ಥೆ ಸರಿಯಿರದ ಕಾರಣ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.

’ನನಗೆ ಅಪಾರ ಬೇಸರವಾಗಿದೆ. ನನ್ನ ಪಾಲಿಗೆ ಕೆಟ್ಟ ಅನುಭವದ ದಿನ ಇದಾಗಿದೆ. ಗ್ಯಾಲರಿಯಲ್ಲಿ 30 ನಿಮಿಷ ಮಳೆಯಲ್ಲಿಯೇ ನಿಲ್ಲಬೇಕಾಯಿತು. ಚಾವಣಿ ಇದ್ದೆಡೆ ಜನರು ಮಳೆಯಿಂದ ತಪ್ಪಿಸಿಕೊಳ್ಳಲು ಕಿಕ್ಕಿರಿದು ನಿಂತಿದ್ದರು.  ಒಳಚರಂಡಿ ನೀರು ಕೂಡ ಅಲ್ಲಲ್ಲಿ ನುಗ್ಗುತ್ತಿತ್ತು. ಬಹಳಷ್ಟು ಜನರು ಜಾರಿ ಬಿದ್ದಿದ್ದನ್ನು ನೋಡಿದೆ. ನಾನು ಇಲ್ಲಿಯ ಬಿಜೆ. ಮೆಡಿಕಲ್ ಕಾಲೇಜಿನ ಹಳೆಯ ವಿದ್ಯಾರ್ಥಿನಿ. ಆದ್ದರಿಂದ ವಸತಿಗೆ ಸಮಸ್ಯೆಯಾಗಲಿಲ್ಲ. ವಿಮಾನದ ಟಿಕೆಟ್‌ಗಳನ್ನು ಮಂಗಳವಾರಕ್ಕೆ ಮುಂದೂಡಿದೆ‘ ಎಂದು  ಉತ್ತರಾಖಂಡದಿಂದ ಬಂದಿದ್ದ ಡಾ. ಅಭಿಲಾಷಾ ನೇಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.