ನವದೆಹಲಿ: ವೇಗದ ಬೌಲಿಂಗ್ ವಿಭಾಗದ ಹೊಸ ಪ್ರತಿಭೆ ಮಯಂಕ್ ಯಾದವ್ ಅವರಿಗೆ ಈಗ ‘ಮಿಲಿಯನ್ ಡಾಲರ್‘ ಮೌಲ್ಯ ಕುದುರಿದೆ. ಅದರಿಂದಾಗಿ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಅವರನ್ನು ತಮ್ಮ ತಂಡದಲ್ಲಿಯೇ ಉಳಿಸಿಕೊಳ್ಳಲು ಲಖನೌ ಸೂಪರ್ ಜೈಂಟ್ಸ್ ₹ 11 ಕೋಟಿ ನೀಡಲಿದೆ.
ಹೋದ ಸಲದ ಐಪಿಎಲ್‌ನಲ್ಲಿ ಪ್ರತಿ ಗಂಟೆಗೆ 150 ಕಿಲೋಮೀಟರ್‌ಗಿಂತಲೂ ಹೆಚ್ಚು ವೇಗದ ಎಸೆತಗಳನ್ನು ಹಾಕಿ ಗಮನ ಸೆಳೆದಿದ್ದರು. ಭಾನುವಾರ ಅವರು ಬಾಂಗ್ಲಾದೇಶ ಎದುರಿನ ಟಿ20 ಪಂದ್ಯದಲ್ಲಿ ಭಾರತ ತಂಡದಲ್ಲಿ ಪದಾರ್ಪಣೆ ಮಾಡಿದರು. ಅವರೊಂದಿಗೆ ಇದೇ ಪಂದ್ಯದಲ್ಲಿ ಆಡಿದ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರನ್ನೂ ಸನ್‌ರೈಸರ್ಸ್ ಹೈದರಾಬಾದ್ ತಂಡವೂ ₹ 11 ಕೋಟಿ ಮೌಲ್ಯವನ್ನು ನೀಡಿ ಉಳಿಸಿಕೊಂಡಿದೆ.
ಐಪಿಎಲ್ ತಂಡದಲ್ಲಿ ಇರುವ ಯಾವುದೇ ‘ಅನ್‌ಕ್ಯಾಪ್ಡ್ ಆಟಗಾರ’ ಪ್ರಸಕ್ತ ಸಾಲಿನ ಹರಾಜು ಪ್ರಕ್ರಿಯೆ ಮುಗಿಯುವ ಮುನ್ನ ಅಂತರರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿ ‘ಕ್ಯಾಪ್’ ಪಡೆದರೆ ಅವರ ಮೌಲ್ಯ ಹೆಚ್ಚಿಸಬೇಕು ಎಂಬ ನಿಯಮ ಇದೆ. ಸದ್ಯದ ನಿಯಮಾವಳಿಯ ಪ್ರಕಾರ ಅಂತರರಾಷ್ಟ್ರೀಯ ಪಂದ್ಯ ಆಡಿರುವ ಆಟಗಾರರನ್ನು ಉಳಿಸಿಕೊಳ್ಳಲು ₹ 18 ಕೋಟಿ (ನಂ 1), ₹ 14 ಕೋಟಿ (ನಂ. 2) ಮತ್ತು ₹ 11 ಕೋಟಿ (ನಂ. 3) ನೀಡಬೇಕು.
ತಂಡದಲ್ಲಿ ರಿಟೇನ್ (ಉಳಿಕೆ) ಮಾಡಿಕೊಳ್ಳುವ ಆಟಗಾರರ ಪಟ್ಟಿಯನ್ನು ಪ್ರಕಟಿಸಲು ತಂಡಗಳಿಗೆ ಅ. 31ರವರೆಗೆ ಗಡುವು ನೀಡಲಾಗಿದೆ. ಲಖನೌ ತಂಡವು ಮಯಂಕ್ ಅವರನ್ನು ತನ್ನ ಮೂರು ಪ್ರೀಮಿಯರ್ ಆಯ್ಕೆಗಳಲ್ಲಿ ಒಬ್ಬರೆಂದು ಪ್ರಕಟಿಸಿದೆ. ಇನ್ನುಳಿದವರಲ್ಲಿ ಕೆ.ಎಲ್. ರಾಹುಲ್, ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್, ವೆಸ್ಟ್ ಇಂಡೀಸ್‌ನ ನಿಕೊಲಸ್ ಪೂರನ್ ಮತ್ತು ಆಸ್ಟ್ರೇಲಿಯಾದ ಮಾರ್ಕಸ್ ಸ್ಟೋಯಿನಿಸ್ ಅವರಿದ್ದಾರೆ.
ಹೈದರಾಬಾದ್ ತಂಡವು ನಿತೀಶ್ ಅವರಲ್ಲದೇ ಪ್ಯಾಟ್ ಕಮಿನ್ಸ್, ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಅವರನ್ನೂ ಉಳಿಸಿಕೊಳ್ಳುವುದು ಖಚಿತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.