ADVERTISEMENT

ಐಪಿಎಲ್‌ ಪ್ರಸಾರ ಹಕ್ಕು; ಬಿಸಿಸಿಐಗೆ ಬಂಪರ್; ₹46 ಸಾವಿರ ಕೋಟಿ ಗಳಿಕೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 20:30 IST
Last Updated 13 ಜೂನ್ 2022, 20:30 IST
   

ನವದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಟಿ.ವಿ. ಮತ್ತು ಡಿಜಿಟಲ್ ಪ್ರಸಾರ ಹಕ್ಕುಗಳ ಹರಾಜು ಪ್ರಕ್ರಿಯೆ ಮೂರನೇ ದಿನಕ್ಕೆ ಮುಂದುವರಿದಿದೆ. ಮೊದಲ ಎರಡು ದಿನಗಳಲ್ಲಿ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ₹ 46 ಸಾವಿರ ಕೋಟಿ ಗಳಿಕೆ ಮಾಡಿದೆ.

ಎರಡನೇ ದಿನವಾದ ಸೋಮವಾರ ಟಿ.ವಿ ಪ್ರಸಾರ ಹಕ್ಕು (ಪ್ಯಾಕೇಜ್‌ ಎ) ಮತ್ತುಡಿಜಿಟಲ್‌ ಹಕ್ಕು (ಪ್ಯಾಕೇಜ್‌ ಬಿ) ಹರಾಜು ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಎರಡು ಪ್ಯಾಕೇಜ್‌ಗಳಿಗೆ ಒಟ್ಟು ₹ 44,075 ಕೋಟಿ ಬಿಡ್‌ ವ್ಯಕ್ತವಾಗಿದೆ.

ಪ್ಯಾಕೇಜ್ ಸಿ (ಪ್ರತಿ ಋತುವಿನಲ್ಲಿ ಆಯ್ದ 18 ಪಂದ್ಯಗಳ ಹಕ್ಕು) ಹರಾಜು ಪ್ರಕ್ರಿಯೆ ಮಂಗಳವಾರ ಮುಂದುವರಿಯಲಿದೆ. ಸೋಮವಾರದ ಅಂತ್ಯಕ್ಕೆ ಈ ಪ್ಯಾಕೇಜ್‌ಗೆ ₹ 2 ಸಾವಿರ ಕೋಟಿ ಬಿಡ್‌ ವ್ಯಕ್ತವಾಗಿದೆ. ಆದ್ದರಿಂದ ಒಟ್ಟಾರೆಯಾಗಿ ಬಿಸಿಸಿಐ ಗಳಿಕೆ ₹ 46 ಸಾವಿರ ಕೋಟಿ ತಲುಪಿದೆ.

ADVERTISEMENT

2018 ರಲ್ಲಿ ನಡೆಸಿದ್ದ ಹರಾಜು ಪ್ರಕ್ರಿಯೆ ಮಂಡಳಿಗೆ ₹ 16,347 ಕೋಟಿ ತಂದುಕೊಟ್ಟಿತ್ತು. ಅದಕ್ಕೆ ಹೋಲಿಸಿದರೆ, ಈ ಬಾರಿ ಮೂರು ಪಟ್ಟು ಅಧಿಕ ಹಣ ದೊರೆತಿದೆ.

’ಎರಡನೇ ದಿನದ ಇ–ಹರಾಜು ಪ್ರಕ್ರಿಯೆಯನ್ನು ಸೋಮವಾರ ಸಂಜೆ 6ಕ್ಕೆ ನಿಲ್ಲಿಸಲಾಯಿತು. ಈ ವೇಳೆ ಪ್ಯಾಕೇಜ್‌ ಸಿ ಹರಾಜು ಪ್ರಕ್ರಿಯೆ ಚಾಲ್ತಿಯಲ್ಲಿತ್ತು. ಪ್ಲೇ ಆಫ್‌, ಫೈನಲ್‌ ಒಳಗೊಂಡಂತೆ ಆಯ್ದ 98 ಪಂದ್ಯಗಳ ಹಕ್ಕುಗಳು ಇದರಲ್ಲಿ ಸೇರಿವೆ. ಸಿ ಪ್ಯಾಕೇಜ್‌ ಪೂರ್ಣಗೊಂಡ ಬಳಿಕ, ಡಿ ಪ್ಯಾಕೇಜ್‌ ಹರಾಜು ನಡೆಯಲಿದೆ. ಆ ಬಳಿಕ ಸ್ಪಷ್ಟ ಚಿತ್ರಣ ಹೊರಬೀಳಲಿದೆ‘ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಮೊದಲ ಎರಡು ಪ್ಯಾಕೇಜ್‌ಗಳು ಯಾವ ಕಂಪನಿಯ ತೆಕ್ಕೆಗೆ ಬಿದ್ದಿವೆ ಎಂಬುದನ್ನು ಬಿಸಿಸಿಐ ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಎರಡೂ ಪ್ಯಾಕೇಜ್‌ ಗಳು ಪ್ರತ್ಯೇಕ ಕಂಪನಿಗಳ ಪಾಲಾಗಿವೆ ಎಂದು ಮೂಲಗಳು ಹೇಳಿವೆ.

ಟಿ.ವಿ ಪ್ರಸಾರ ಹಕ್ಕು ಪಡೆಯಲು ಸೋನಿ ಮತ್ತು ವಾಲ್ಟ್‌ ಡಿಸ್ನಿ (ಸ್ಟಾರ್‌) ನಡುವೆ ಪೈಪೋಟಿ ನಡೆದಿದೆ. ಡಿಜಿಟಲ್‌ ಹಕ್ಕು ತನ್ನದಾಗಿಸಿಕೊಳ್ಳಲು ವಯಾಕಾಮ್ 18–ಉದಯಶಂಕರ್ ಕಾನ್‌ಸೊರ್ಟಿಯಂ ಪೈಪೋಟಿ ನಡೆಸಿದೆ ಎಂದು ತಿಳಿಸಿವೆ.

ಡಿಜಿಟಲ್‌; ಪಂದ್ಯಕ್ಕೆ ₹ 50 ಕೋಟಿ

ಟಿ.ವಿ ಹಕ್ಕು ಪ್ರತಿ ಪಂದ್ಯಕ್ಕೆ ₹ 57.5 ಕೋಟಿ ತಂದುಕೊಟ್ಟರೆ, ಡಿಜಿಟಲ್‌ ಹಕ್ಕು ₹ 50 ಕೋಟಿಗೆ ಮಾರಾಟ ಆಗಿದೆ. ಡಿಜಿಟಲ್‌ನಲ್ಲಿ ನಿರೀಕ್ಷೆಗೂ ಮೀರಿದ ಮೌಲ್ಯ ದೊರೆತಿದೆ.

’ಡಿಜಿಟಲ್‌ನಲ್ಲಿ ಪ್ರತಿ ಪಂದ್ಯಕ್ಕೆ ₹ 33 ಕೋಟಿ ಮೂಲಬೆಲೆ ನಿಗದಿಪಡಿಸಲಾಗಿತ್ತು. ಇದು ಅಚ್ಚರಿಯ ರೀತಿಯಲ್ಲಿ ₹ 50 ಕೋಟಿಗೆ ಹೆಚ್ಚಿತು. ಅಂದರೆ ನಮ್ಮ ನಿರೀಕ್ಷೆಗಿಂತ ಶೇ 51 ರಷ್ಟು ಅಧಿಕ ಮೊತ್ತಕ್ಕೆ ಮಾರಾಟವಾಗಿದೆ‘ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.