ಜೆದ್ದಾ, ಸೌದಿ ಅರೇಬಿಯಾ: ಭಾನುವಾರ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಮೆಗಾ ಹರಾಜಿನಲ್ಲಿ ಫ್ರ್ಯಾಂಚೈಸಿಗಳು ವಿಕೆಟ್ ಕೀಪರ್ ರಿಷಭ್ ಪಂತ್ ಮತ್ತು ‘ಚಾಂಪಿಯನ್’ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಅವರಿಬ್ಬರ ಖರೀದಿಗೆ ಜಿದ್ದಾಜಿದ್ದಿ ನಡೆಸಿದವು.
ಈ ಪೈಪೋಟಿಯಲ್ಲಿ ರಿಷಭ್ ಅವರನ್ನು ₹ 27 ಕೋಟಿಗೆ ಲಖನೌ ಸೂಪರ್ ಜೈಂಟ್ಸ್‌ಖರೀದಿಸಿದರೆ. ರಿಷಭ್‌ಗಿಂತ ಕೇವಲ ₹ 25 ಲಕ್ಷ ಕಡಿಮೆ ಮೊತಕ್ಕೆ ಶ್ರೇಯಸ್ ಅಯ್ಯರ್ ಅವರನ್ನು ಪಂಜಾಬ್ ಕಿಂಗ್ಸ್ ತಂಡವು ಸೆಳೆದುಕೊಂಡಿತು. ಐಪಿಎಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಮೌಲ್ಯ ಪಡೆದ ಆಟಗಾರನೆಂಬ ಹೆಗ್ಗಳಿಕೆಗೆ ರಿಷಭ್ ಪಾತ್ರರಾದರು. ಇದೇ ಸಾಲಿನಲ್ಲಿ ಎರಡನೇ ಸ್ಥಾನವನ್ನು ಶ್ರೇಯಸ್ (₹26.75 ಕೋಟಿ) ಪಡೆದುಕೊಂಡರು. ಹೋದ ವರ್ಷ ₹24.75 ಕೋಟಿ ಗಳಿಸಿದ್ದ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ದಾಖಲೆಯನ್ನು ಈ ಇಬ್ಬರೂ ಭಾರತೀಯ ಆಟಗಾರರು ನುಚ್ಚುನೂರು ಮಾಡಿದರು. ಈ ಬಾರಿ ಸ್ಟಾರ್ಕ್ ಅವರು ಕೇವಲ ₹ 11.75 ಕೋಟಿ ಗಳಿಸಿ ಡೆಲ್ಲಿ ತಂಡ ಸೇರಿಕೊಂಡರು.
ಕಳೆದ ಐಪಿಎಲ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ತಂಡವು ಶ್ರೇಯಸ್ ನಾಯಕತ್ವದಲ್ಲಿ ಚಾಂಪಿಯನ್ ಆಗಿತ್ತು. ಅದರಿಂದಾಗಿ ಅವರ ಖರೀದಿಗೆ ಅಪಾರ ಪೈಪೋಟಿ ಏರ್ಪಟ್ಟಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದ ರಿಷಭ್ ಅವರು ಕೂಡ ತಂಡದಿಂದ ಬಿಡುಗಡೆ ಗೊಂಡಿದ್ದರು. ಬಿಡ್‌ನಲ್ಲಿ ಅವರು ₹25 ಕೋಟಿ ಪಡೆಯುತ್ತಾರೆಂದು ಹಲವು ಮಾಜಿ ಕ್ರಿಕೆಟಿಗರು ನಿರೀಕ್ಷೆ ವ್ಯಕ್ತಪಡಿಸಿದ್ದರು. ಇದೀಗ ಶ್ರೇಯಸ್ ಮತ್ತು ರಿಷಭ್ ಅವರು ನಿರೀಕ್ಷೆಗೂ ಮೀರಿದ ಮೊತ್ತ ಗಳಿಸಿದ್ದಾರೆ.
ರಿಷಭ್ ಅವರ ಬಿಡ್ ₹ 20.75 ಕೋಟಿಗೆ ಮುಟ್ಟಿದಾಗ ಡೆಲ್ಲಿ ತಂಡವು ರೈಟ್ ಟು ಮ್ಯಾಚ್ (ಆರ್‌ಟಿಎಂ) ಕಾರ್ಡ್ ಬಳಸಿತು. ಆದರೆ ಲಖನೌ ಹಿಮ್ಮೆಟ್ಟಲಿಲ್ಲ. 27 ಕೋಟಿಯವರೆಗೂ ಬಿಡ್ ಮಾಡಿತು.
ಎರಡು ವರ್ಷಗಳ ಹಿಂದೆ ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡು ‘ಪುನರ್ಜನ್ಮ’ ಪಡೆದು ಬಂದಿರುವ ರಿಷಭ್ ಹೋದ ವರ್ಷದ ಐಪಿಎಲ್‌ನಲ್ಲಿ ಕ್ರಿಕೆಟ್‌ಗೆ ಮರಳಿದ್ದರು. ಟಿ20 ವಿಶ್ವಕಪ್ ಟೂರ್ನಿ ಸೇರಿದಂತೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚಿದ್ದರು. ಅದರಿಂದಾಗಿ ಅವರನ್ನು ಸೆಳೆದುಕೊಳ್ಳಲು ಫ್ರ್ಯಾಂಚೈಸಿಗಳು ಅಪಾರ ಪೈಪೋಟಿಗಿಳಿದವು.
ಆದರೆ ಈ ಬಿಡ್‌ನಲ್ಲಿ ಅಚ್ಚರಿಯ ಸಂಗತಿಯೆಂದರೆ ವೆಂಕಟೇಶ್ ಅಯ್ಯರ್ ಅವರು ₹ 23.75 ಕೊಟಿ ಗಳಿಸಿದ್ದರು. ಕಳೆದ ಋತುಗಳಲ್ಲಿ ಕೆಕೆಆರ್ ತಂಡದ ಆಲ್‌ರೌಂಡರ್ ಆಗಿ ಮಿಂಚಿದ್ದರು. ಈಚೆಗೆ ಅವರನ್ನು ಬಿಡುಗಡೆ ಮಾಡಿದ್ದ ಕೆಕೆಆರ್ ತಂಡವೇ ಅವರನ್ನು ಖರೀದಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವೆಂಕಟೇಶ್ ಅವರನ್ನು ಖರೀದಿಸಲು ಕೆಕೆಆರ್‌ಗೆ ತೀವ್ರ ಪೈಪೋಟಿಯೊಡ್ಡಿತು.
ಕನ್ನಡಿಗ ಕೆ.ಎಲ್. ರಾಹುಲ್ ಅವರು ಕಳೆದ ಋತುಗಳಲ್ಲಿ ಲಖನೌ ತಂಡದ ನಾಯಕರಾಗಿದ್ದರು. ಈ ಬಾರಿ ಅವರು ಡೆಲ್ಲಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅನುಭವಿ ಆಟಗಾರ ರಾಹುಲ್ ಅವರನ್ನು ₹ 14 ಕೋಟಿ ನೀಡಿದ ಡೆಲ್ಲಿ ತನ್ನ ತೆಕ್ಕೆಗೆಳೆದುಕೊಂಡಿತು. ಡೆಲ್ಲಿಯಲ್ಲಿದ್ದ ಪಂತ್ ಲಖನೌಗೆ ಮತ್ತು ಅಲ್ಲಿದ್ದ ರಾಹುಲ್ ಡೆಲ್ಲಿಗೆ ಬಂದಿದ್ದು ಕಾಕತಾಳೀಯವೆಂಬಂತಾಗಿದೆ.
ಅನುಭವಿ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಅವರು ತಮ್ಮ ತವರು ತಮಿಳುನಾಡಿನ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮರಳಿದ್ದಾರೆ. ಅಶ್ವಿನ್ ಅವರಿಗೆ ₹ 9.75 ಕೋಟಿ ಲಭಿಸಿತು.
ಡೆವೊನ್ ಕಾನ್ವೆ ಮತ್ತು ರಚಿನ್ ರವೀಂದ್ರ ಅವರನ್ನು ಚೆನ್ನೈ ತಂಡವು ಮರಳಿ ಖರೀದಿಸಿತು. ಕ್ರಮವಾಗಿ ₹ 6.55 ಕೋಟಿ ಮತ್ತು ₹ 4 ಕೋಟಿ ನೀಡುವ ಮೂಲಕ ಉತ್ತಮ ಲಾಭ ಪಡೆದುಕೊಂಡಿತು.
ಆಸ್ಟ್ರೇಲಿಯಾದ ಬಿರುಸಿನ ಬ್ಯಾಟರ್ ಜೇಕ್ ಫ್ರೆಸರ್ ಮಕ್‌ಗುರ್ಕ್ ಆರ್‌ಟಿಎಂ ಮೂಲಕ ಡೆಲ್ಲಿ ತಂಡಕ್ಕೆ ಮರಳಿದರು. ಅವರಿಗೆ ₹ 9 ಕೋಟಿ ಲಭಿಸಿತು.
ಐಪಿಎಲ್‌ನಲ್ಲಿ ಆಡಿದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿರುವ ಡೇವಿಡ್ ವಾರ್ನರ್ ಅವರನ್ನು ಯಾರೂ ಖರೀದಿಸಲಿಲ್ಲ. ಅವರಿಗೆ ₹ 2 ಕೋಟಿ ಮೂಲಬೆಲೆ ನಿಗದಿ ಪಡಿಸಲಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕನ್ನಡಿಗ ಕೆ.ಎಲ್. ರಾಹುಲ್ ಅವರನ್ನು ಬಿಡ್‌ನಲ್ಲಿ ಖರೀದಿಸಲಿಲ್ಲ. ಲಖನೌ ತಂಡದಿಂದ ರಾಹುಲ್ ಅವರು ಬಿಡುಗಡೆಯಾದ ನಂತರ ಆರ್‌ಸಿಬಿಗೆ ಬರಲಿದ್ದಾರೆಂಬ ಮಾತುಗಳು ಕೇಳಿಬಂದಿದ್ದವು. ಮೆಗಾ ಹರಾಜಿನಲ್ಲಿ ಅವರನ್ನು ಆರ್‌ಸಿಬಿ ಖರೀದಿಸಲಿ ಎಂದು ಹಲವು ಅಭಿಮಾನಿಗಳೂ ಒತ್ತಾಯಿಸಿದ್ದರು. ಆದರೆ ರಾಹುಲ್ ಡೆಲ್ಲಿ ತಂಡದ ಪಾಲಾದರು.
ಈಚೆಗೆ ಆರ್‌ಸಿಬಿಯು ವಿರಾಟ್ ಕೊಹ್ಲಿ ರಜತ್ ಪಾಟೀದಾರ್ ಮತ್ತು ಯಶ್ ದಯಾಳ್ ಅವರನ್ನು ಬಿಟ್ಟು ಉಳಿದೆಲ್ಲ ಆಟಗಾರರನ್ನು ಬಿಡುಗಡೆ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭಾನುವಾರ ಬಿಡ್‌ನಲ್ಲಿ ತರಾತುರಿ ತೋರಲಿಲ್ಲ. ಬಹಳ ಎಚ್ಚರಿಕೆಯ ನಡೆಯನ್ನು ಇಟ್ಟಿತು. ತನ್ನ ಪರ್ಸ್‌ನಲ್ಲಿ ₹ 83 ಕೋಟಿ ಇಟ್ಟುಕೊಂಡಿದ್ದ ಆರ್‌ಸಿಬಿಯು ಅಳೆದು ಸುರಿದು ಹೆಜ್ಜೆಯಿಟ್ಟಿತು.
ಶ್ರೇಯಸ್ ಅಯ್ಯರ್ ಮತ್ತು ವೆಂಕಟೇಶ್ ಅಯ್ಯರ್ ಅವರ ಬಿಡ್‌ನಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತ್ತು. ಆದರೆ ಒಂದು ಹಂತದ ನಂತರ ಹಿಂದೆ ಸರಿಯಿತು.
ಲಿಯಾಮ್ ಲಿವಿಂಗ್‌ಸ್ಟೋನ್ ಜಿತೇಶ್ ಶರ್ಮಾ ಮತ್ತು ಫಿಲ್ ಸಾಲ್ಟ್ ಅವರನ್ನು ಖರೀದಿಸಿತು. ಆಸ್ಟ್ರೇಲಿಯಾದ ಜೋಷ್ ಹ್ಯಾಜಲ್‌ವುಡ್ ಅವರನ್ನು ಖರೀದಿಸುವ ಮೂಲಕ ಬೌಲಿಂಗ್ ವಿಭಾಗವನ್ನು ಬಲಪಡಿಸಿಕೊಳ್ಳುವತ್ತ ಚಿತ್ತ ನೆಟ್ಟಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.