ADVERTISEMENT

IPL Players Retention: ಆರ್‌ಸಿಬಿಯಲ್ಲಿ ಉಳಿದ ವಿರಾಟ್, ರಜತ್

ಐಪಿಎಲ್‌ ಆಟಗಾರರ ಉಳಿಕೆ ಪ್ರಕ್ರಿಯೆ: ನಾಲ್ವರು ನಾಯಕರಿಗೆ ಕೊಕ್; ಕ್ಲಾಸನ್‌ಗೆ ಹೆಚ್ಚು ಮೌಲ್ಯ

ಪಿಟಿಐ
Published 31 ಅಕ್ಟೋಬರ್ 2024, 16:42 IST
Last Updated 31 ಅಕ್ಟೋಬರ್ 2024, 16:42 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ವಿರಾಟ್ ಕೊಹ್ಲಿ, ರಜತ್ ಪಾಟೀದಾರ್ ಮತ್ತು ಯಶ್ ದಯಾಳ್ ಅವರನ್ನು ಮುಂದಿನ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಅಡುವ ತಂಡದಲ್ಲಿ ಉಳಿಸಿಕೊಂಡಿದೆ. 

ವಿರಾಟ್ ಅವರಿಗೆ ₹ 21 ಕೋಟಿ ಮೌಲ್ಯ ನೀಡಿ ಉಳಿಸಿಕೊಂಡಿದೆ. ರಜತ್ ಮತ್ತು ಯಶ್ ಕ್ರಮವಾಗಿ ₹ 11 ಕೋಟಿ ಮತ್ತು ₹ 5 ಕೋಟಿ ಪಡೆದಿದ್ದಾರೆ. 

ಐಪಿಎಲ್ ತಂಡಗಳು ತಮ್ಮ  ಆಟಗಾರರನ್ನು ಉಳಿಸಿಕೊಳ್ಳುವ ಪ್ರಕ್ರಿಯೆಯನ್ನು ಗುರುವಾರ ಅಂತಿಮಗೊಳಿಸಿವೆ. ಈ ಬಾರಿ ಅಪಾರ ಕುತೂಹಲ ಕೆರಳಿಸಿದ್ದ ರಿಟೇನಿಂಗ್ ಪ್ರಕ್ರಿಯೆಯಲ್ಲಿ ಐದು ತಂಡಗಳ ನಾಯಕರು ಹೊರಬಿದ್ದಿದ್ದಾರೆ. ಹಲವು ಪ್ರಮುಖರೂ ತಂಡದಿಂದ ಬಿಡುಗಡೆ ಹೊಂದಿದ್ದು ಮುಂಬರುವ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಆಯ್ಕೆಯಾಗಲು ಸಿದ್ಧರಾಗಿದ್ದಾರೆ. 

ADVERTISEMENT

ನಾಲ್ವರು ನಾಯಕರು ಬಿಡುಗಡೆ

ಈ ಬಾರಿ ನಾಲ್ವರು ನಾಯಕರನ್ನು ತಂಡಗಳು ಬಿಡುಗಡೆಗೊಳಿಸಿವೆ. ಅದರಲ್ಲಿ ಆರ್‌ಸಿಬಿಯ ಫಫ್ ಡುಪ್ಲೆಸಿ, ಒಂಬತ್ತು ವರ್ಷಗಳಿಂದ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿದ್ದ ರಿಷಭ್ ಪಂತ್, ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಶ್ರೇಯಸ್ ಅಯ್ಯರ್ ಮತ್ತು ಲಖನೌ ಸೂಪರ್ ಜೈಂಟ್ಸ್ ತಂಡದ ಕೆ.ಎಲ್. ರಾಹುಲ್ ಅವರನ್ನು ಬಿಡುಗಡೆಗೊಳಿಸಲಾಗಿದೆ. 

ವಿರಾಟ್ ಹಿಂದಿಕ್ಕಿದ ಕ್ಲಾಸನ್

ಆರ್‌ಸಿಬಿ ತಂಡವು ವಿರಾಟ್ ಅವರನ್ನು ₹ 21 ಕೋಟಿ ಕೊಟ್ಟು ಉಳಿಸಿಕೊಂಡಿದೆ. ಆದರೆ ರಿಟೇನಿಂಗ್ ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಮೌಲ್ಯ ಪಡೆದ ಭಾರತೀಯ ಆಟಗಾರನಾಗಿದ್ದಾರೆ. ಆದರೆ, ದಕ್ಷಿಣ ಆಫ್ರಿಕಾದ ಬ್ಯಾಟರ್ ಹೆನ್ರಿಚ್ ಕ್ಲಾಸನ್ (ಕೋಲ್ಕತ್ತ ನೈಟ್ ರೈಡರ್ಸ್‌)  ₹23 ಕೋಟಿ ಗಿಟ್ಟಿಸುವ ಮೂಲಕ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ಇಡೀ ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಮೌಲ್ಯ ಪಡೆದ ಆಟಗಾರನಾಗಿದ್ದಾರೆ. 

ಪ್ರಮುಖರನ್ನು ಉಳಿಸಿಕೊಂಡ ಕೋಲ್ಕತ್ತ

ಕಳೆದ ಬಾರಿ ಚಾಂಪಿಯನ್ ಕೋಲ್ಕತ್ತ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರು (₹ 12.25 ಕೋಟಿ) ರಿಟೇನ್ ಆಗಲು ಬಯಸದೇ ಹೊರನಡೆದಿದ್ದಾರೆನ್ನಲಾಗಿದೆ. ತಮ್ಮ ನಾಯಕತ್ವದ ತಂಡವು  ಚಾಂಪಿಯನ್ ಆದ ನಂತರ ಬಹುಶಃ ತಮ್ಮ ಮೌಲ್ಯ ಹೆಚ್ಚಿಸಿಕೊಳ್ಳುವ  ಇಂಗಿತ ಅವರದ್ದಾಗಿರಬಹುದು.  ತಂಡವು ತನ್ನ ಪ್ರಮುಖ ಆಟಗಾರರಾದ ರಿಂಕು ಸಿಂಗ್, ಸುನಿಲ್ ನಾರಾಯಣ, ಆ್ಯಂಡ್ರೆ ರಸೆಲ್, ಹರ್ಷಿತ್ ರಾಣಾ ಮತ್ತು ವರುಣ್ ಚಕ್ರವರ್ತಿ ಅವರನ್ನು ಉಳಿಸಿಕೊಂಡಿತು. 

ಧೋನಿಗೆ ₹ 4 ಕೋಟಿ

ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಾಯಕ ಋತುರಾಜ್ ಗಾಯಕವಾಡ್ ಸೇರಿದಂತೆ ಐವರನ್ನು ಉಳಿಸಿಕೊಂಡಿದೆ. ಅದರಲ್ಲಿ ಮಹೇಂದ್ರಸಿಂಗ್ ಧೋನಿ ಅವರು ₹ 4 ಕೋಟಿಗೆ ರಿಟೇನ್ ಆಗಿದ್ದಾರೆ. 

ಬಟ್ಲರ್, ಅಶ್ವಿನ್ ಔಟ್

ರಾಜಸ್ಥಾನ ರಾಯಲ್ಸ್ ತಂಡವು ತನ್ನ ಸ್ಪಿನ್ ಜೋಡಿ ಆರ್. ಅಶ್ವಿನ್, ಯಜುವೇಂದ್ರ ಚಾಹಲ್ ಮತ್ತು ಬ್ಯಾಟರ್ ಜೋಸ್ ಬಟ್ಲರ್ ಅವರನ್ನು ಕೈಬಿಟ್ಟಿದೆ. ನಾಯಕ ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್ ಅವರನ್ನು ಉಳಿಸಿಕೊಂಡಿದೆ. 

ರಶೀದ್‌ಗೆ ಹೆಚ್ಚು ಮೌಲ್ಯ

ಗುಜರಾತ್ ಟೈಟನ್ಸ್ ತಂಡವು ಅಫ್ಗಾನಿಸ್ತಾನ ಸ್ಪಿನ್ನರ್‌ ರಶೀದ್ ಖಾನ್ ಅವರಿಗೆ ₹ 18 ಕೋಟಿ ನೀಡಿ ಉಳಿಸಿಕೊಂಡಿದೆ.  ಅವರು ತಮ್ಮ ತಂಡದ ನಾಯಕ ಶುಭಮನ್ ಗಿಲ್ (₹ 16.5 ಕೋಟಿ) ಅವರಿಗಿಂತ ಹೆಚ್ಚು ಮೌಲ್ಯ ಪಡೆದಿದ್ದಾರೆ.

ಹೆನ್ರಿಚ್ ಕ್ಲಾಸೆನ್
ರಿಷಭ್ ಪಂತ್
ಕೆ.ಎಲ್. ರಾಹುಲ್ 
ಮಹೇಂದ್ರಸಿಂಗ್ ಧೋನಿ

ಕರ್ನಾಟಕದ ಆಟಗಾರರು ಬಿಡ್‌ಗೆ

ವಿವಿಧ ತಂಡಗಳಲ್ಲಿದ್ದ ಕರ್ನಾಟಕದ ಎಲ್ಲ ಆಟಗಾರರೂ  ಬಿಡುಗಡೆಯಾಗಿದ್ದಾರೆ. ರಾಹುಲ್ ಮನೀಷ್ ಪಾಂಡೆ ಮಯಂಕ್ ಅಗರವಾಲ್ ಕೆ.ಗೌತಮ್ ಅಭಿನವ್ ಮನೋಹರ್ ಅದರಲ್ಲಿ ಪ್ರಮುಖರಾಗಿದ್ದಾರೆ.  ಇವರೆಲ್ಲರೂ ಈಗ ಬಿಡ್‌ನಲ್ಲಿ ಭಾಗವಹಿಸುವರು.  ಈ ಬಾರಿಯ ಬಿಡ್‌ನಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಅವರನ್ನು ಆರ್‌ಸಿಬಿ ತಂಡವು ಸೇರ್ಪಡೆ ಮಾಡಿಕೊಳ್ಳಲಿದೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹಾಕುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.