ಲಖನೌ: ಕನ್ನಡಿಗ ಕೆ.ಎಲ್. ರಾಹುಲ್ ನಾಯಕತ್ವದ ಲಖನೌ ಸೂಪರ್‌ಜೈಂಟ್ಸ್ ತಂಡವು ಭಾನುವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಬಲಿಷ್ಠ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಕಣಕ್ಕಿಳಿಯಲಿದೆ.
ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಕೋಲ್ಕತ್ತ ಖಾತೆಯಲ್ಲಿ ಈಗ 14 ಅಂಕಗಳು ಇವೆ. ಶುಕ್ರವಾರದ ಪಂದ್ಯದಲ್ಲಿ ಕೋಲ್ಕತ್ತ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಜಯಿಸಿತ್ತು. ಇದರೊಂದಿಗೆ ಎರಡನೇ ಸ್ಥಾನಕ್ಕೇರಿತ್ತು. ಬ್ಯಾಟಿಂಗ್ ಅಥವಾ ಬೌಲಿಂಗ್ ವಿಭಾಗದಲ್ಲಿ ಕೋಲ್ಕತ್ತ ತಂಡವನ್ನು ಸೋಲಿನ ದವಡೆಯಿಂದ ತಪ್ಪಿಸಿ ಗೆಲುವಿನತ್ತ ಮುನ್ನಡೆಸುವ ಆಟಗಾರರು ಇದ್ದಾರೆ.
ಅದರಿಂದಾಗಿ ಮುಂಬೈ ಎದುರಿನ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ತಂಡವು ಬೌಲಿಂಗ್‌ನಲ್ಲಿ ಮಿಂಚಿತ್ತು. ಮಿಚೆಲ್ ಸ್ಟಾರ್ಕ್, ಸುನಿಲ್ ನಾರಾಯಣ್, ವರುಣ ಚಕ್ರವರ್ತಿ ಅವರು ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿಹಾಕಿ ತಮ್ಮ ತಂಡವು ಗಳಿಸಿದ್ದ ಸಾಧಾರಣ ಮೊತ್ತವನ್ನೂ ರಕ್ಷಿಸಿಕೊಂಡಿದ್ದರು.
ಅವರ ಎದುರು ಈಗ ಲಖನೌ ತಂಡದಲ್ಲಿರುವ ಸ್ಪೋಟಕ ಶೈಲಿಯ ಬ್ಯಾಟರ್‌ಗಳನ್ನು ಕಟ್ಟಿಹಾಕುವ ಸವಾಲು ಇದೆ. ಅದರಲ್ಲೂ ಕ್ವಿಂಟನ್ ಡಿಕಾಕ್, ಮಾರ್ಕಸ್ ಸ್ಟೊಯಿನಿಸ್, ನಿಕೊಲಸ್ ಪೂರನ್ ಮತ್ತು ಕೆ.ಎಲ್. ರಾಹುಲ್ ಅವರನ್ನು ನಿಯಂತ್ರಿಸಬೇಕಿದೆ. ಕೋಲ್ಕತ್ತ ತಂಡದ ಬ್ಯಾಟಿಂಗ್ ಕೂಡ ಬಲಿಷ್ಟವಾಗಿದೆ. ಕಳೆದ ಪಂದ್ಯದಲ್ಲಿ ತಂಡವು 57 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿತ್ತು. ಆ ಹಂತದಲ್ಲಿ ಮನೀಷ್ ಪಾಂಡೆ, ವೆಂಕಟೇಶ್ ಅಯ್ಯರ್ ಅವರು ಮಿಂಚಿದ್ದರು. ಹೋರಾಟದ ಮೊತ್ತ ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಆದರೆ ತಂಡದಲ್ಲಿರುವ ಆ್ಯಂಡ್ರೆ ರಸೆಲ್, ರಮಣದೀಪ್ ಸಿಂಗ್, ಫಿಲ್ ಸಾಲ್ಟ್ ಹಾಗೂ ಯುವ ಆಟಗಾರ ಅಂಗಕ್ರಿಷ್ ರಘುವಂಶಿ ಅವರು ರನ್‌ಗಳ ಹೊಳೆ ಹರಿಸುವ ಸಮರ್ಥರಾಗಿದ್ದಾರೆ.
ಒಂದೊಮ್ಮೆ ಈ ಪಂದ್ಯದಲ್ಲಿ ಗೆದ್ದರೆ, ಲಖನೌ ತಂಡವು ಎರಡನೇ ಸ್ಥಾನಕ್ಕೆರಿ, ಕೋಲ್ಕತ್ತ ಮೂರಕ್ಕಿಳಿಯುವ ಸಾಧ್ಯತೆ ಇದೆ. ಒಂದೊಮ್ಮೆ ಲಖನೌ ಸೋತರೆ, ಶ್ರೇಯಸ್ ಅಯ್ಯರ್ ಬಳಗಕ್ಕೆ ಪ್ಲೇ ಆಫ್ ಸ್ಥಾನ ಬಹುತೇಕ ಖಚಿತವಾಗಲಿದೆ. ಉಭಯ ತಂಡಗಳಿಗೂ ತಲಾ ನಾಲ್ಕು ಪಂದ್ಯಗಳು ಬಾಕಿ ಇವೆ.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಜಿಯೊ ಸಿನಿಮಾ ಆ್ಯಪ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.