ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಚೀನಾ ಉತ್ಪನ್ನಗಳ ಪ್ರಾಯೋಜಕತ್ವವನ್ನು ಕೈಬಿಡಲು ಮುಂದಾಗಬೇಕು ಎಂದು ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಸಹಮಾಲೀಕ ನೆಸ್ ವಾಡಿಯಾ ಹೇಳಿದ್ದಾರೆ.
ಭಾರತ ಮತ್ತು ಚೀನಾ ಗಡಿಯಲ್ಲಿ ನಡೆದ ಸಂಘರ್ಷದ ಹಿನ್ನೆಲೆಯಲ್ಲಿ ದೇಶದಲ್ಲಿ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂಬ ಅಭಿಯಾನ ಆರಂಭವಾಗಿದೆ. ಐಪಿಎಲ್‌ಗೆ ಚೀನಾದ ವಿವೊ ಮೊಬೈಲ್ ಫೋನ್ ಕಂಪೆನಿಯು ಪ್ರಾಯೋಜಕತ್ವ ನೀಡುತ್ತಿದೆ. ಐದು ವರ್ಷಗಳ ಒಪ್ಪಂದ ಮಾಡಿಕೊಂಡಿರುವ ಬಿಸಿಸಿಐ ವಾರ್ಷಿಕ #440 ಕೋಟಿ ಪಡೆಯುತ್ತಿದೆ. ‘ಈ ವರ್ಷವೂ ಪ್ರಾಯೋಜಕತ್ವ ಮುಂದುವರಿಸಿ, ಮುಂದಿನ ವರ್ಷ ಕೈಬಿಡುವ ಬಗ್ಗೆ ಯೋಚಿಸಲಾಗುವುದು’ಎಂದು ಈಚೆಗೆ ಖಜಾಂಚಿ ಅರುಣ್ ಧುಮಾಲ್ ಹೇಳಿದ್ದರು.
ಸೋಮವಾರ ಭಾರತ ಸರ್ಕಾರವು ಚೀನಾದ 59 ಆ್ಯಪ್‌ಗಳನ್ನು ನಿಷೇಧಿಸಿದೆ.
ಈ ಕುರಿತು ಮಾತನಾಡಿರುವ ನೆಸ್ ವಾಡಿಯಾ, ’ದೇಶದ ಸಲುವಾಗಿ ನಾವು ಈ ಕ್ರಮ ಕೈಗೊಳ್ಳಲೇಬೇಕು. ರಾಷ್ಟ್ರ ಮೊದಲು, ಆಮೇಲೆ ಹಣ. ಅಷ್ಟಕ್ಕೂ ಇದು ಇಂಡಿಯನ್ ಪ್ರೀಮಿಯರ್ ಲೀಗ್. ಚೈನಿಸ್ ಪ್ರೀಮಿಯರ್ ಲೀಗ್ ಅಲ್ಲ. ದಿಟ್ಟ ನಿರ್ಧಾರದ ಮೂಲಕ ಬೇರೆಯವರಿಗೆ ನಿದರ್ಶನ ರೂಪಿಸಿಕೊಡಬೇಕು‘ ಎಂದಿದ್ದಾರೆ.
‘ಆರಂಭದಲ್ಲಿ ಹೊಸ ಪ್ರಾಯೋಜಕರನ್ನು ಕಂಡುಕೊಳ್ಳುವುದು ತುಸು ಸವಾಲಿನ ಕೆಲಸ. ಆದರೆ ಭಾರತೀಯ ಮೂಲದ ಪ್ರಾಯೋಜಕರು ಖಂಡಿತವಾಗಿಯೂ ಮುಂದೆ ಬರುತ್ತಾರೆ. ದೇಶ ಮತ್ತು ಸರ್ಕಾರಕ್ಕೆ ನಾವು ಗೌರವ ಸಲ್ಲಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಹುತ್ಮಾತರಾದ ಸೈನಿಕರಿಗಾಗಿಯಾದರೂ ಮಾಡಬೇಕು’ಎಂದು ವಾಡಿಯಾ ಹೇಳಿದರು.
‘ಫ್ರ್ಯಾಂಚೈಸ್‌ಗಳು ತಮ್ಮ ಚೈನೀಸ್ ಪ್ರಾಯೋಜಕರನ್ನು ಕೈಬಿಡಲು ಸಮಯ ನೀಡಬೇಕು. ಒಟ್ಟಿನಲ್ಲಿ ಚೀನಾ ಪ್ರಾಯೋಜಕತ್ವದ ಸಂಬಂಧಗಳನ್ನು ಹಂತಹಂತವಾಗಿಯಾದರೂ ಮುಂದಿನ ವರ್ಷದವರೆಗೆ ಸಂಪೂರ್ಣ ಕೈಬಿಡಬೇಕು’ಎಂದು ಉದ್ಯಮಿಯೂ ಆಗಿರುವ ವಾಡಿಯಾ ಸಲಹೆ ನೀಡಿದ್ದಾರೆ.
‘ಆರಂಭದಲ್ಲಿ ಬದಲೀ ಪ್ರಾಯೋಜಕರನ್ನು ಪಡೆಯುವುದು ಕಷ್ಟ. ಆದರೆ, ದೇಶದ ಪ್ರಶ್ನೆ ಬಂದಾಗ ಬೇರೆಲ್ಲ ಯೋಚನೆಗಳನ್ನು ಪಕ್ಕಕ್ಕಿಡಬೇಕು. ಕಠಿಣ ಕ್ರಮಕ್ಕೆ ಮುಂದಾಗಬೇಕು’ಎಂದು ಚೆನ್ನೈ ಸೂಪರ್ ಕಿಂಗ್ಸ್ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.