ನವದೆಹಲಿ: ಕ್ರಿಕೆಟ್‌ನಲ್ಲಿನ ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತಾ ಸದಾ ಸುದ್ದಿಯಲ್ಲಿರುವ ಆದಿತ್ಯ ವರ್ಮಾ ಪಾಲಿಗೆ ಮಂಗಳವಾರ ಶುಭ ದಿನವಾಗಿ ಪರಿಣಮಿಸಿತು.
ಅವರ ಮಗ ಲಖನ್ ರಾಜಾ, ಮಿಜೋರಾಂ ಎದುರಿನ ರಣಜಿ ಪಂದ್ಯಕ್ಕೆ ಪ್ರಕಟವಾಗಿರುವ ಬಿಹಾರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಆದಿತ್ಯ ಅವರು 2013ರಲ್ಲಿ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಸಂಬಂಧ ದೂರು ನೀಡಿ ಆಗ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷರಾಗಿದ್ದ ಎನ್.ಶ್ರೀನಿವಾಸನ್, ಕೋರ್ಟ್ ಮೆಟ್ಟಿಲೇರುವಂತೆ ಮಾಡಿದ್ದರು.
‘ನನ್ನ ಮಗನಿಗೆ ಸ್ಥಾನ ಸಿಕ್ಕಿರುವುದಕ್ಕೆ ಖುಷಿಯಾಗಿದೆ. ಮಿಜೋರಾಂ ಎದುರು ಆತ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಲಿದ್ದು, ಆ ಪಂದ್ಯದಲ್ಲಿ ಉತ್ತಮ ಸಾಮರ್ಥ್ಯ ತೋರಿ ತಂಡದಲ್ಲಿ ಸ್ಥಾನ ಗಟ್ಟಿಮಾಡಿಕೊಳ್ಳಲಿದ್ದಾನೆ’ ಎಂದು ಆದಿತ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆದಿತ್ಯ ಅವರು ಈ ಹಿಂದೆ ಬಿಹಾರ ಕ್ರಿಕೆಟ್ ಸಂಸ್ಥೆಯ (ಸಿಎಬಿ) ಕಾರ್ಯದರ್ಶಿಯಾಗಿದ್ದರು. ಶ್ರೀನಿವಾಸನ್ ಅವರನ್ನು ಸದಾ ಟೀಕಿಸುತ್ತಲೇ ಬಂದಿದ್ದ ಅವರು ನವದೆಹಲಿಯಲ್ಲಿ ನಡೆದಿದ್ದ ಬಿಸಿಸಿಐ ಸಭೆಯ ವೇಳೆ ವರಸೆ ಬದಲಿಸಿದ್ದರು. ಶ್ರೀನಿವಾಸನ್ ಬಳಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಲ್ಲದೇ ಅವರನ್ನು ಉತ್ತಮ ಆಡಳಿತಗಾರ ಎಂದೂ ಹೊಗಳಿದ್ದರು.
ಇದಾದ ಬಳಿಕ ಅವರ ಮಗ ಲಖನ್‌ಗೆ ಶ್ರೀನಿವಾಸನ್ ಒಡೆತನದ ಇಂಡಿಯಾ ಸಿಮೆಂಟ್ಸ್‌ನಲ್ಲಿ ಕೆಲಸ ಸಿಕ್ಕಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.