ADVERTISEMENT

IPL 2025 | ಮೆಗಾ ಹರಾಜು: ಐಪಿಎಲ್ ಫ್ರಾಂಚೈಸಿಗಳ ಭಿನ್ನ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 22:54 IST
Last Updated 1 ಆಗಸ್ಟ್ 2024, 22:54 IST
ಜಯ್ ಶಾ
ಜಯ್ ಶಾ   

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೆಗಾ ಹರಾಜು ಪ್ರಕ್ರಿಯೆ ಮತ್ತು ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಕುರಿತು ಫ್ರಾಂಚೈಸಿಗಳ ಮಾಲೀಕರಿಂದ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. 

ಬುಧವಾರ ಬಿಸಿಸಿಐ  ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಫ್ರಾಂಚೈಸಿ ಮಾಲೀಕರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಮುಂದಿನ ವರ್ಷ ನಡೆಯಲಿರುವ 18ನೇ ಐಪಿಎಲ್ ಆವೃತ್ತಿಯ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಕುರಿತು ಈಗ ಚರ್ಚೆ ಆರಂಭವಾಗಿದೆ. 

‘ಬುಧವಾರ ಐಪಿಎಲ್ ಟೂರ್ನಿಯ 10 ಫ್ರಾಂಚೈಸಿಗಳ ಮಾಲೀಕರೊಂದಿಗೆ ಮಾತುಕತೆ ನಡೆಸಲಾಯಿತು. ಮುಂಬರುವ ಆವೃತ್ತಿಗಳ ಕುರಿತು ವಿವಿಧ ವಿಷಯಗಳ ಕುರಿತ ಚರ್ಚೆ ನಡೆಯಿತು’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ADVERTISEMENT

‘ಆಟಗಾರರನ್ನು ಉಳಿಸಿಕೊಳ್ಳುವ ಕುರಿತು ಮತ್ತು ವಾಣಿಜ್ಯಕ ವಿಷಯಗಳ ಕುರಿತು ಮಾಲೀಕರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಉತ್ಪನ್ನಗಳ ಕೇಂದ್ರಿಕೃತ ಮಾರಾಟ ವ್ಯವಸ್ಥೆ, ಲೈಸೆನ್ಸಿಂಗ್ ಮತ್ತು ಗೇಮಿಂಗ್ ಕುರಿತು ಚರ್ಚಿಸಲಾಯಿತು’ ಎಂದೂ ಹೇಳಿದ್ದಾರೆ.

ಸಭೆಯಲ್ಲಿ ಶಾರೂಕ್ ಖಾನ್ (ಕೆಕೆಆರ್), ಕಾವ್ಯ ಮಾರನ್ (ಸನ್‌ರೈಸರ್ಸ್ ಹೈದರಾಬಾದ್), ನೆಸ್ ವಾಡಿಯಾ (ಪಂಜಾಬ್ ಕಿಂಗ್ಸ್), ಸಂಜೀವ ಗೊಯೆಂಕಾ ಮತ್ತು ಅವರ ಮಗ ಶಾಶ್ವತ್ (ಲಖನೌ ಸೂಪರ್ ಜೈಂಟ್ಸ್‌), ಕೆಕೆ ಗ್ರ್ಯಾಂಡ್ ಮತ್ತು ಪಾರ್ಥ್‌ ಜಿಂದಾಲ್ (ಡೆಲ್ಲಿ ಕ್ಯಾಪಿಟಲ್ಸ್‌) ಅವರು ಖುದ್ದಾಗಿ ಹಾಜರಿದ್ದರು. 

ಮನೋಜ್ ಬದಾಳೆ ಮತ್ತು ರಂಜಿತ್ ಭರ್ತಾಕುರ್ (ಆರ್‌ಆರ್), ಪ್ರಥಮೇಶ್ ಮಿಶ್ರಾ (ಆರ್‌ಸಿಬಿ), ಕಾಶಿ ವಿಶ್ವನಾಥ್ ಮತ್ತು ರೂಪಾ ಗುರುನಾಥ್ (ಸಿಎಸ್‌ಕೆ), ಸಮಿತ್ ಸೋನಿ (ಜಿ.ಟಿ) ಮತ್ತು ಮುಂಬೈ ಇಂಡಿಯನ್ಸ್‌ ಮಾಲೀಕರು ಆನ್‌ಲೈನ್ ಮೂಲಕ ಸಭೆಗೆ ಹಾಜರಾದರು.

ಮೆಗಾ ಹರಾಜು ಪ್ರಕ್ರಿಯೆ ಇರಬೇಕೋ ಬೇಡವೋ ಎಂಬ ಬಗ್ಗೆ ನಿರ್ಧಾರಿಸಬೇಕು ಎಂದು ಶಾರೂಕ್ ಖಾನ್ ಮತ್ತು ವಾಡಿಯಾ ಅವರ ನಡುವಿನ ಚರ್ಚೆ ಬಿಸಿಯೇರಿತು. 

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಲೀಕರು ಇಂಪ್ಯಾಕ್ಟ್ ಪ್ಲೇಯರ್ ನಿಯಮದ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.