ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೌಲ್ಯವು ಶೇ 6.5ರಷ್ಟು ಏರಿಕೆಯಾಗಿದೆ.
2024ರ ಆವೃತ್ತಿಯ ನಂತರ ಮೌಲ್ಯವು ₹ 134,858 ಕೋಟಿಗೆ ಏರಿಕೆಯಾಗಿದೆ ಎಂದು ಅಮೆರಿಕನ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ ಹಾಲಿಹಾನ್ ಲೋಕೆ ವರದಿ ನೀಡಿದೆ.
ಈ ಶ್ರೀಮಂತ ಟೂರ್ನಿಯ ಬ್ರ್ಯಾಂಡ್ ಮೌಲ್ಯವು ಕೂಡ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಶೇ 6.3ರಷ್ಟು ಹಾಗೂ ₹ 28 ಸಾವಿರ ಕೋಟಿಗೆ ಏರಿದೆ.
ಟೂರ್ನಿಯ ಮೌಲ್ಯ ಹೆಚ್ಚಳದಿಂದಾಗಿ ಟೈಟಲ್ ಪ್ರಾಯೋಜಕತ್ವ ನೀಡಿರುವ ಟಾಟಾ ಸಮೂಹ ಮತ್ತೆ ಐದು ವರ್ಷಗಳವರೆಗೆ (2024 ರಿಂದ 2028) ₹ 2500 ಕೋಟಿಗೆ ಪಡೆಯಲು ಅನೂಕಲವಾಗಲಿದೆ. ಇದು ಕಳೆದ ವರ್ಷಕ್ಕಿಂತ (ವಾರ್ಷಿಕ ₹ 335 ಕೋಟಿ) ಅಂದಾಜು ಶೇ 50ರಷ್ಟು ಹೆಚ್ಚಳವಾದಂತಾಗಿದೆ.
‘ಹೂಡಿಕೆಯ ಹೆಚ್ಚಳದಿಂದಾಗಿ ಐಪಿಎಲ್ ಘನತೆಯು ಮತ್ತಷ್ಟು ಉನ್ನತ ಮಟ್ಟಕ್ಕೇರಿದೆ. ಪ್ರತಿಷ್ಠಿತ ಬ್ರ್ಯಾಂಡ್‌ಗಳಿಗೆ ಇದು ಅತ್ಯಂತ ಪ್ರಿಯವಾದ ವೇದಿಕೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಒಲಿಂಪಿಕ್ಸ್, ಫಿಫಾ ವಿಶ್ವಕಪ್ ಮತ್ತು ಕ್ರಿಕೆಟ್ ವಿಶ್ವಕಪ್ ಟೂರ್ನಿಗಳನ್ನು ಬಿಟ್ಟರೆ ನೂರು ಕೋಟಿಗೂ ಹೆಚ್ಚು ಜನರನ್ನು ತಲುಪುವ ಕ್ರೀಡಾ ಚಟುವಟಿಕೆ ಎಂಬ ಹೆಗ್ಗಳಿಕಗೆ ಐಪಿಎಲ್ ಪಾತ್ರವಾಗಿದೆ.
ಆರ್‌ಸಿಬಿಗೆ ಎರಡನೇ ಸ್ಥಾನ
ಐಪಿಎಲ್‌ನಲ್ಲಿ ಆಡುವ ಫ್ರ್ಯಾಂಚೈಸಿಗಳ ಬ್ರ್ಯಾಂಡ್ ಮೌಲ್ಯದಲ್ಲಿಯೂ ಹೆಚ್ಚಳ ದಾಖಲಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಸ್ಥಾನದಲ್ಲಿದೆ. ಕೋಲ್ಕತ್ತ ನೈಟ್ ರೈಡರ್ಸ್ ವಾರ್ಷಿಕ ಹೆಚ್ಚಳದ ಕಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬ್ರ್ಯಾಂಡ್ ಮೌಲ್ಯದಲ್ಲಿ ಎರಡನೇ ಸ್ಥಾನದಲ್ಲಿದೆ.
ಆರ್‌ಸಿಬಿಯು ಕತಾರ್ ಏರ್‌ವೇಸ್ (₹ 75 ಕೋಟಿ) ಜೊತೆಗೆ ಮೂರು ವರ್ಷಗಳ ಪ್ರಾಯೋಜಕತ್ವ ಒಪ್ಪಂದ ಮಾಡಿಕೊಂಡಿದೆ. ವ್ಯಾವಹಾರಿಕ ಮೌಲ್ಯವು 227 ಮಿಲಿಯನ್ ಡಾಲರ್ ಇದೆ. ಮುಂಬೈ ಇಂಡಿಯನ್ಸ್, ರಾಜಸ್ಥಾನ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ನಂತರದ ಸ್ಥಾನಗಳಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.