ಬೆಂಗಳೂರು: ಐಪಿಎಲ್ ಟೂರ್ನಿಯಲ್ಲಿ ಬಹಳದ ದೊಡ್ಡ ಅಭಿಮಾನಿಗಳ ಬಳಗವನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿ ಎಂತಹ ತಂಡ ಕಟ್ಟಲಿದೆ ಎಂಬ ಕುತೂಹಲ ಗರಿಗೆದರಿದೆ. ಈ ಸಲವಾದರೂ ಕನ್ನಡನಾಡಿನ ಆಟಗಾರರಿಗೆ ಮಣೆ ಹಾಕುವುದೇ ಎಂಬ ಚರ್ಚೆಗಳೂ ನಡೆಯುತ್ತಿವೆ.
ವಿರಾಟ್ ಕೊಹ್ಲಿ, ರಜತ್ ಪಾಟೀದಾರ್ ಮತ್ತು ಯಶ್ ದಯಾಳ್ ಅವರನ್ನು ಬಿಟ್ಟು ಉಳಿದೆಲ್ಲ ಆಟಗಾರರನ್ನೂ ತಂಡವು ಈಚೆಗೆ ಬಿಡುಗಡೆ ಮಾಡಿತ್ತು. ಅದರಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್, ವೇಗಿ ಮೊಹಮ್ಮದ್ ಸಿರಾಜ್ ಅವರನ್ನೂ ಕೈಬಿಟ್ಟಿದೆ. ಕೊಹ್ಲಿ ಅವರು ಕಳೆದ ಮೂರು ಆವೃತ್ತಿಗಳಲ್ಲಿ ನಾಯಕತ್ವ ವಹಿಸಿಲ್ಲ. ದಕ್ಷಿಣ ಆಫ್ರಿಕಾದ ಫಫ್ ಡು ಪ್ಲೆಸಿ ಅವರು ನಾಯಕರಾಗಿದ್ದರು. ಆದ್ದರಿಂದ ಈ ಬಾರಿ ಬಿಡ್‌ನಲ್ಲಿ ನಾಯಕತ್ವ ವಹಿಸುವ ಆಟಗಾರನ ಹುಡುಕಾಟದಲ್ಲಿ ತಂಡವಿದೆ ಎನ್ನಲಾಗಿದೆ.
ಆದ್ದರಿಂದ ಕನ್ನಡಿಗ ಕೆ.ಎಲ್.ರಾಹುಲ್, ಮುಂಬೈನ ಶ್ರೇಯಸ್ ಅಯ್ಯರ್, ದೆಹಲಿಯ ರಿಷಭ್ ಪಂತ್ ಅಥವಾ ಇಂಗ್ಲೆಂಡ್‌ನ ಜೋಸ್ ಬಟ್ಲರ್ ಅವರಲ್ಲೊಬ್ಬರನ್ನು ಖರೀದಿಸುವ ಸಾಧ್ಯತೆ ದಟ್ಟವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಬೆಂಗಳೂರು ತಂಡವು ಕನ್ನಡಿಗರಿಗೆ ಹೆಚ್ಚು ಆದ್ಯತೆ ನೀಡಬೇಕು. ಆದ್ದರಿಂದ ರಾಹುಲ್, ಮಯಂಕ್ ಅಗರವಾಲ್, ದೇವದತ್ತ ಪಡಿಕ್ಕಲ್ ಅವರಂತಹ ಆಟಗಾರರಿಗೆ ಮಣೆ ಹಾಕಬೇಕು ಎಂಬ ಒತ್ತಾಯವೂ ಜೋರಾಗಿದೆ. 2008ರಲ್ಲಿ ನಡೆದ ಮೊದಲ ಆವೃತ್ತಿಯ ಟೂರ್ನಿಯಿಂದ ಇಲ್ಲಿಯವರೆಗೆ ಇರುವ ತಂಡಗಳಲ್ಲಿ ಆರ್‌ಸಿಬಿಯೂ ಒಂದು. ಆದರೆ ಇದುವರೆಗೆ ಒಂದು ಬಾರಿಯೂ ಚಾಂಪಿಯನ್ ಆಗಿಲ್ಲ. ಅಲ್ಲದೇ ಕಳೆದ ಕೆಲವು ವರ್ಷಗಳಿಂದ ಕನ್ನಡಿಗ ಆಟಗಾರರಿಗೂ ಆದ್ಯತೆ ಕೊಟ್ಟಿಲ್ಲವೆಂಬ ಆಕ್ಷೇಪವೂ ಈ ತಂಡದ ಬಗ್ಗೆ ಇದೆ. ಆದ್ದರಿಂದ ಈ ಬಾರಿ ₹ 83 ಕೋಟಿ ಪರ್ಸ್ ಹೊಂದಿರುವ ತಂಡವು ಸ್ಥಳೀಯ ಆಟಗಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಬೇಕು ಎಂಬ ಒತ್ತಾಯ ಹೆಚ್ಚಿದೆ
‘ಬಲಿಷ್ಠ ತಂಡವನ್ನು ಕಟ್ಟುವತ್ತ ಮ್ಯಾನೇಜ್‌ಮೆಂಟ್ ಚಿತ್ತ ನೆಟ್ಟಿದೆ. ಬ್ಯಾಟಿಂಗ್‌ನಲ್ಲಿ ವಿರಾಟ್, ರಜತ್ ಈಗಾಗಲೇ ತಂಡದಲ್ಲಿದ್ದಾರೆ. ಉಳಿದಂತೆ ಇನ್ನೂ 2–3 ಪರಿಣತ ಬ್ಯಾಟರ್‌ಗಳು, 3 ಆಲ್‌ರೌಂಡರ್‌ಗಳು, 3 ವೇಗಿಗಳು ಮತ್ತು ಕನಿಷ್ಠ ಇಬ್ಬರು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ’ ಎಂದು ತಂಡದ ಮೂಲಗಳು ಹೇಳಿವೆ.
ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್, ಗ್ಲೆನ್ ಮ್ಯಾಕ್ಸ್‌ವೆಲ್, ಶೇನ್ ವಾಟ್ಸನ್ ಅವರಂತಹ ಖ್ಯಾತನಾಮ ಆಟಗಾರರು ಈ ತಂಡವನ್ನು ಹಿಂದೆ ಪ್ರತಿನಿಧಿಸಿದ್ದಾರೆ. ಈಗಲೂ ತಾರಾ ವರ್ಚಸ್ಸಿನ ಆಟಗಾರರನ್ನು ಖರೀದಿಸಲು ತಂಡವು ಚಿತ್ತ ಹರಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.