ADVERTISEMENT

ಇರಾನಿ ಕಪ್ ಕ್ರಿಕೆಟ್ | ಯಶಸ್ವಿ ದ್ವಿಶತಕ, ಅಭಿಮನ್ಯು ಶತಕ

ಮೊದಲ ದಿನ ರನ್‌ಗಳ ಹೊಳೆ

ಪಿಟಿಐ
Published 1 ಮಾರ್ಚ್ 2023, 16:10 IST
Last Updated 1 ಮಾರ್ಚ್ 2023, 16:10 IST
ಯಶಸ್ವಿ ಜೈಸ್ವಾಲ್ 
ಯಶಸ್ವಿ ಜೈಸ್ವಾಲ್    

ಗ್ವಾಲಿಯರ್: ಯಶಸ್ವಿ ಜೈಸ್ವಾಲ್ ಮತ್ತು ಅಭಿಮನ್ಯು ಈಶ್ವರನ್ ಅವರ ಅಬ್ಬರದ ಬ್ಯಾಟಿಂಗ್‌ನಿಂದಾಗಿ ರೆಸ್ಟ್ ಆಫ್ ಇಂಡಿಯಾ ತಂಡವು ಬುಧವಾರ ಆರಂಭವಾದ ಇರಾನಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ದೊಡ್ಡ ಮೊತ್ತ ಪೇರಿಸಿತು.

ಯಶಸ್ವಿ ದ್ವಿಶತಕ (213; 259ಎ, 4X30, 6X3) ಹಾಗೂ ಅಭಿಮನ್ಯು (154; 240ಎ, 4X17, 6X2) ಅವರಿಬ್ಬರ ಎರಡನೇ ವಿಕೆಟ್ ಜೊತೆಯಾಟದಲ್ಲಿ 371 ರನ್ ಸೇರಿಸಿದರು. ಇದರಿಂದಾಗಿ ತಂಡವು ಮೊದಲ ದಿನದಾಟದ ಮುಕ್ತಾಯಕ್ಕೆ 87 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 381 ರನ್ ಗಳಿಸಿತು. ಸೌರಭ್ ಕುಮಾರ್ ಹಾಗೂ ಬಾಬಾ ಇಂದ್ರಜೀತ್ ಕ್ರೀಸ್‌ನಲ್ಲಿದ್ದಾರೆ.

ಟಾಸ್ ಗೆದ್ದ ರೆಸ್ಟ್ ಆಫ್ ಇಂಡಿಯಾದ ನಾಯಕ ಮಯಂಕ್ ಅಗರವಾಲ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಈಶ್ವರನ್ ಜೊತೆಗೆ ಇನಿಂಗ್ಸ್ ಆರಂಭಿಸಿದ ಮಯಂಕ್ ಮೂರನೇ ಓವರ್‌ನಲ್ಲಿಯೇ ಆವೇಶ್ ಖಾನ್ ಎಸೆತದಲ್ಲಿ ಹಿಮಾಂಶುಗೆ ಕ್ಯಾಚಿತ್ತರು.

ADVERTISEMENT

ಅಭಿಮನ್ಯುವಿನೊಂದಿಗೆ ಸೇರಿಕೊಂಡ ಯಶಸ್ವಿ, ಬೌಲರ್‌ಗಳ ಬೆವರಿಳಿಸಿದರು. ಟಿ20 ಕ್ರಿಕೆಟ್ ಮಾದರಿಯ ಬ್ಯಾಟಿಂಗ್ ಮಾಡಿದರು. ಇದರಿಂದಾಗಿ ಬೌಂಡರಿಗಳು ದಾಖಲಾದವು. 82.24ರ ಸ್ಟ್ರೈಕ್‌ರೇಟ್‌ನಲ್ಲಿ ದ್ವಿಶತಕ ಗಳಿಸಿದರು. ಹೋದ ವರ್ಷದ ರಣಜಿ ಋತುವಿನಲ್ಲಿಯೂ ಅವರು ರನ್‌ಗಳನ್ನು ಸೂರೆ ಮಾಡಿದ್ದರು.

ಇನ್ನೊಂದೆಡೆ ಅಭಿಮನ್ಯು ಕೂಡ ಕಲಾತ್ಮಕ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ದಿನದಾಟದ ಮುಕ್ತಾಯಕ್ಕೆ ಸ್ವಲ್ಪ ಹೊತ್ತಿಗೆ ಮುನ್ನ ಆವೇಶ್ ಖಾನ್ ಅವರ ಒಂದೇ ಓವರ್‌ನಲ್ಲಿ ಯಶಸ್ವಿ ಹಾಗೂ ಅಭಿಮನ್ಯು ಔಟಾದರು.

ಸಂಕ್ಷಿಪ್ತ ಸ್ಕೋರು: ರೆಸ್ಟ್ ಆಫ್ ಇಂಡಿಯಾ: 87 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 381 (ಯಶಸ್ವಿ ಜೈಸ್ವಾಲ್ 213, ಅಭಿಮನ್ಯು ಈಶ್ವರನ್ 154, ಆವೇಶ್ ಖಾನ್ 51ಕ್ಕೆ2) ವಿರುದ್ಧ ಮಧ್ಯಪ್ರದೇಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.