ಲಂಡನ್: ಕೊರೊನಾ ಸೋಂಕು ಹರಡುವ ಆತಂಕದಿಂದಾಗಿ ಐರ್ಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳ ನಡುವಣ ಕ್ರಿಕೆಟ್ ಸರಣಿಗಳನ್ನು ಮುಂದೂಡಲಾಗಿದೆ.
ಉಭಯ ತಂಡಗಳ ನಡುವೆ ಮೇ ತಿಂಗಳಿನಲ್ಲಿ ಮೂರು ಪಂದ್ಯಗಳ ಏಕದಿನ ಹಾಗೂ ನಾಲ್ಕು ಪಂದ್ಯಗಳ ಟ್ವೆಂಟಿ–20 ಸರಣಿಗಳು ನಡೆಯಬೇಕಿತ್ತು.
‘ಕೊರೊನಾ ಪಿಡುಗು ಜಗತ್ತಿನಾದ್ಯಂತ ವ್ಯಾಪಿಸುತ್ತಿದೆ. ಇಂತಹ ಸಮಯದಲ್ಲಿ ಆಟಗಾರರು, ನೆರವು ಸಿಬ್ಬಂದಿ, ಕೋಚ್‌ಗಳು ಹಾಗೂ ಪ್ರೇಕ್ಷಕರ ಸುರಕ್ಷತೆಗೆ ಒತ್ತು ನೀಡುವುದು ನಮ್ಮ ಜವಾಬ್ದಾರಿ. ಇದನ್ನು ಗಮನ ದಲ್ಲಿಟ್ಟುಕೊಂಡು ಸರಣಿಗಳನ್ನು ಮುಂದಕ್ಕೆ ಹಾಕುತ್ತಿದ್ದೇವೆ’ ಎಂದು ಐರ್ಲೆಂಡ್ ಕ್ರಿಕೆಟ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ವಾರೆನ್ ಡ್ಯುಟ್ರೊಮ್ ತಿಳಿಸಿದ್ದಾರೆ.
‘ನಿಗದಿತ ಕ್ರಿಕೆಟ್ ಸರಣಿಗಳನ್ನು ಮುಂದೂಡಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯೂ (ಬಿಸಿಬಿ) ಒಪ್ಪಿದೆ. ಬಿಸಿಬಿಯ ಸಹಕಾರಕ್ಕೆ ನಾವು ಆಭಾರಿಯಾಗಿದ್ದೇವೆ. ಪರಿಸ್ಥಿತಿ ಸುಧಾರಿಸಿದ ಬಳಿಕ ಆ ಮಂಡಳಿಯ ಜೊತೆ ಚರ್ಚಿಸಿ ಹೊಸ ದಿನಾಂಕವನ್ನು ನಿಗದಿಮಾಡುತ್ತೇವೆ’ ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.