ADVERTISEMENT

ಇಶಾನ್ ಕಿಶನ್ ಆಯ್ಕೆ ಗೊಂದಲ ತಪ್ಪಿಸಬಹುದಿತ್ತೇ?

ಪಿಟಿಐ
Published 11 ಜನವರಿ 2024, 14:29 IST
Last Updated 11 ಜನವರಿ 2024, 14:29 IST
ಇಶಾನ್ ಕಿಶನ್
ಇಶಾನ್ ಕಿಶನ್    

ಜಿಕ್ಯುಬೆರಾ, ದಕ್ಷಿಣ ಆಫ್ರಿಕಾ: ಇದೇ ವರ್ಷ ನಡೆಯಲಿರುವ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಆಟಗಾರರ ದೊಡ್ಡ ಸಾಲು ಇದೆ. ಆ ಸಾಲಿನ ಅತ್ಯಂತ ಕೊನೆಯಲ್ಲಿ ವಿಕೆಟ್‌ಕೀಪರ್ ಇಶಾನ್ ಕೀಶನ್ ಇದ್ದಾರೆ. 

ಅಫ್ಗಾನಿಸ್ತಾನ ಎದುರಿನ ಟಿ20 ಸರಣಿಯಲ್ಲಿ ಆಡುವ ತಂಡಕ್ಕೆ ಅವರು ಆಯ್ಕೆಯಾಗಿಲ್ಲ. ಅದರ ಬೆನ್ನಲ್ಲಿಯೇ ಅವರ   ‘ಅಶಿಸ್ತು’ ಕುರಿತ ಹೇಳಿಕೆಗಳು ಹರಿದಾಡುತ್ತಿವೆ. ಆದರೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು 14 ತಿಂಗಳುಗಳ ನಂತರ ಟಿ20 ತಂಡಕ್ಕೆ ಮರಳಿದ್ದರಿಂದಲೂ ಅಗ್ರಕ್ರಮಾಂಕದ ಬ್ಯಾಟರ್ ಕೂಡ ಆಗಿರುವ ಇಶಾನ್‌ಗೆ ಅವಕಾಶ ಲಭಿಸಿಲ್ಲವೆಂದೂ ಹೇಳಲಾಗುತ್ತಿದೆ.  

ಆದರೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು, ಇಶಾನ್ ಆಯ್ಕೆಯಾಗದಿರುವುದಕ್ಕೂ ಅಶಿಸ್ತು ಕ್ರಮಕ್ಕೂ ಸಂಬಂ‌ಧವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಸ್ವತಃ ಇಶಾನ್ ಅವರೇ ವಿಶ್ರಾಂತಿಗೆ ಮನವಿ ಮಾಡಿದ್ದರು ಎಂದೂ ಹೇಳಿದ್ದರು.

ADVERTISEMENT

ಇದಲ್ಲದೇ, ಇಶಾನ್‌ಗೆ ರಾಷ್ಟ್ರೀಯ ತಂಡಕ್ಕೆ ಮರಳುವ ಹಾದಿ ಸಂಪೂರ್ಣ ಮುಚ್ಚಿಲ್ಲ. ದೇಶಿ ಟೂರ್ನಿಗಳಲ್ಲಿ ಉತ್ತಮವಾಗಿ ಆಡಬೇಕು ಎಂದೂ ದ್ರಾವಿಡ್ ಹೇಳಿದ್ದರು.

ಇದರೊಂದಿಗೆ ಮುಂಬರಲಿರುವ ಭಾರತ ಮತ್ತು ಇಂಗ್ಲೆಂಡ್ ಸರಣಿಗೂ  ಇಶಾನ್ ಅವಕಾಶ ಪಡೆಯುವುದು ಅನುಮಾನವಾಗಿದೆ. ಟೆಸ್ಟ್ ಸರಣಿಯಲ್ಲಿ ಕೋನಾ ಭರತ್ ಅವಕಾಶ ಪಡೆಯುವ ಸಾಧ್ಯತೆ ಹೆಚ್ಚಿದೆ.

ಆದರೆ ಬಿಸಿಸಿಐನ ಮೂಲಗಳ ಪ್ರಕಾರ ಇಶಾನ್ ಕಿಶನ್ ಅವರು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೆಸ್ಟ್ ಸರಣಿ ಮುಗಿಯುವವರೆಗೂ ಕಾಯಬೇಕಿತ್ತು. ನಂತರ ಅವರು ವಿಶ್ರಾಂತಿ ಕೋರಿದ್ದರೆ ಇಷ್ಟು ದೊಡ್ಡಮಟ್ಟದ ಗೊಂದಲ  ಉಂಟಾಗುತ್ತಿರಲಿಲ್ಲ.

ಏಕೆಂದರೆ ಇವತ್ತಿನ ಕ್ರಿಕೆಟ್‌ನಲ್ಲಿ ಅಪಾರ ಪೈಪೋಟಿಯಿದೆ. ಖಾಲಿಯಾದ ಕುರ್ಚಿಯಲ್ಲಿ ಕುಳಿತುಕೊಳ್ಳಲು ಪ್ರತಿಭಾವಂತರು ಸಾಲುಗಟ್ಟಿದ್ದಾರೆ. ಅನುಭವಿ ಆಟಗಾರರಲ್ಲದೇ ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ತಿಲಕ್ ವರ್ಮಾ ಮತ್ತು ರಿಂಕು ಸಿಂಗ್ ಅವರೂ ತಂಡದಲ್ಲಿ ವಿಶ್ವಕಪ್‌ ನಲ್ಲಿ ಆಡುವ ಕನಸು ಕಾಣುತ್ತಿದ್ದಾರೆ.

‘ಇಶಾನ್ ವಿಶ್ರಾಂತಿಗಾಗಿ ಬಿಡುವು ಪಡೆದಿದ್ದು ತಪ್ಪಲ್ಲ. ಆದರೆ ಸಂದರ್ಭ ಸೂಕ್ತವಲ್ಲ. ಅವರು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೆಸ್ಟ್ ಸರಣಿ ಮುಗಿಯವವರೆಗೂ ಇರಬೇಕಿತ್ತು. ನಂತರ ನಿರ್ಧರಿಸಬೇಕಿತ್ತು’ ಎಂದೂ ಕೆಲವರು ಹೇಳಿದ್ದಾರೆ.

ಜಾರ್ಖಂಡ್ ಆಟಗಾರ ಇಶಾನ್ ಅವರು ನವೆಂಬರ್‌ನಲ್ಲಿ ಭಾರತದಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ ಉತ್ತಮವಾಗಿ ಆಡಿದ್ದರು. ಆದರೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಸರಣಿಯಲ್ಲಿ ಅವರಿಗೆ ಅಂತಿಮ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಇದರಿಂದಾಗಿ ಅವರು ಬೇಸರಗೊಂಡಿರಬಹುದು ಎಂದೂ ಹೇಳಲಾಗುತ್ತಿದೆ.

‘ಒಂದು ಬಿಸಿಸಿಐನಿಂದ ರಜೆ ಮಂಜೂರಾದರೆ ಆಯಿತು. ಅವರು ಆ ರಜೆಯನ್ನು ಹೇಗೆ, ಎಲ್ಲಿ ಕಳೆಯುತ್ತಾರೆಂಬ ಬಗ್ಗೆ ಯಾರೂ ಯೋಚಿಸುವುದಿಲ್ಲ’ ಎಂದೂ ಬಿಸಿಸಿಐ ಮೂಲಗಳು ಹೇಳಿವೆ.

‘ಭಾರತ ತಂಡಕ್ಕೆ ಮರಳಲು ಅವರಿಗೆ ಖಂಡಿತವಾಗಿಯೂ ಅವಕಾಶ ಇದೆ. ಆದರೆ ಅಗ್ರ ಮೂರರಲ್ಲಿ ಸ್ಥಾನ ತೆರವಾಗಬೇಕಷ್ಟೇ‘ ಎಂದೂ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.