ADVERTISEMENT

ಇಶಾಂತ್‌ ಈಗಲೂ ನನ್ನ ಸಹೋದರ ಇದ್ದಂತೆ: ಸಾಮಿ

ಪಿಟಿಐ
Published 19 ಆಗಸ್ಟ್ 2020, 12:25 IST
Last Updated 19 ಆಗಸ್ಟ್ 2020, 12:25 IST
ಇಶಾಂತ್‌ ಶರ್ಮಾ–ರಾಯಿಟರ್ಸ್‌ ಚಿತ್ರ
ಇಶಾಂತ್‌ ಶರ್ಮಾ–ರಾಯಿಟರ್ಸ್‌ ಚಿತ್ರ   

ನವದೆಹಲಿ: ‘ಭಾರತ ಕ್ರಿಕೆಟ್‌ ತಂಡದ ವೇಗಿ ಇಶಾಂತ್‌ ಶರ್ಮಾ ಅವರನ್ನು ಈಗಲೂ ನನ್ನ ಸಹೋದರ ಎಂದು ಪರಿಗಣಿಸುವೆ. ಜನಾಂಗೀಯ ನಿಂದನೆಯ ಅರ್ಥ ಬರುವ ಪದ ಬಳಸಿದ್ದಕ್ಕಾಗಿ ಅವರ ವಿರುದ್ಧ ದ್ವೇಷ ಬೆಳೆಸಿಕೊಂಡಿಲ್ಲ’ ಎಂದು ವೆಸ್ಟ್‌ ಇಂಡೀಸ್‌ ಆಟಗಾರ ಡರೆನ್‌ ಸಾಮಿ ಹೇಳಿದ್ದಾರೆ.

2014 ಹಾಗೂ 2015ರಲ್ಲಿ ಸಾಮಿ ಅವರು ಇಂಡಿಯನ್‌ ಪ್ರೀಮಿಯರ್‌‌ ಲೀಗ್‌ (ಐಪಿಎಲ್‌) ಕ್ರಿಕೆಟ್‌ ಟೂರ್ನಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಪರ ಆಡುತ್ತಿದ್ದರು. ಆ ಸಂದರ್ಭದಲ್ಲಿ ತಮ್ಮನ್ನು ವರ್ಣಭೇದ ಅರ್ಥವಿರುವ ‘ಕಾಲೂ‘ ಎಂಬ ಅಡ್ಡನಾಮದಿಂದ ಕರೆಯಲಾಗುತ್ತಿತ್ತು ಎಂದು ಸಾಮಿ ದೂರಿದ್ದರು.

2014ರಲ್ಲಿ ತಂಡದ ಬೌಲರ್ ಇಶಾಂತ್ ಶರ್ಮಾ ಅವರು ಇನ್ಸ್ಟಾಗ್ರಾಮ್‌ನಲ್ಲಿ ಹಾಕಿದ್ದ ಚಿತ್ರ ಮತ್ತು ಶೀರ್ಷಿಕೆಯಲ್ಲಿ ಸಾಮಿ ಅವರ ಹೆಸರನ್ನು ‘ಕಾಲೂ’ ಎಂದು ಬರೆದಿದ್ದರು. ಇದರಿಂದ ಸಾಮಿ ಮಾಡಿದ್ದ ಆರೋಪಕ್ಕೆ ಪುಷ್ಟಿ ದೊರೆತಿತ್ತು.

ADVERTISEMENT

ಸಾಮಿ ಅವರು ಈ ಕುರಿತು ಇಶಾಂತ್ ಕ್ಷಮೆ ಕೋರಬೇಕೆಂದುಮೊದಲು ಒತ್ತಾಯಿಸಿದ್ದರು. ಬಳಿಕ ತಮ್ಮ ನಿಲುವಿನಿಂದ ಹಿಂದೆ ಸರಿದಿದ್ದರು. ‘ತನ್ನನ್ನು ಅವರು ಸಲುಗೆಯ ನೆಲೆಯಲ್ಲಿ ಆ ರೀತಿ ಕರೆದಿದ್ದಾರೆ. ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುತ್ತೇನೆ‘ ಹೇಳಿದ್ದರು.

’ನನ್ನ ಮನಸ್ಸಲ್ಲಿ ದ್ವೇಷವಿಲ್ಲ. ಇಶಾಂತ್‌ ಅವರೊಂದಿಗೆ ಮಾತನಾಡಿದ್ದೇನೆ. ನಾನು ಈಗಲೂ ಅವನ್ನು ಸಹೋದರ ಎಂದು ಪರಿಗಣಿಸುತ್ತೇನೆ‘ ಎಂದು ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ತಂಡ ಸೇಂಟ್‌ ಲೂಸಿಯಾ ಜೌಕ್ಸ್‌ನಿಂದ ನಡೆದ ಸಂದರ್ಶನದಲ್ಲಿ ಸಾಮಿ ಹೇಳಿದರು.

‘ಆದರೆ ಯಾರಾದರೂ ಜನಾಂಗೀಯ ನಿಂದನೆಯ ಅರ್ಥ ಬರುವ ಪದಗಳನ್ನು ಬಳಸುವುದನ್ನು ಕಂಡರೆ ಯಾವುದೇ ಸಮಯದಲ್ಲಾದರೂ ಪ್ರಶ್ನಿಸುತ್ತೇನೆ. ಈಗಲೂ ನಾನು ಆ ಕಾರ್ಯ ಮಾಡುತ್ತಿದ್ದೇನೆ. ಆ ಬಗ್ಗೆ ನನಗೆ ವಿಷಾದವೂ ಇಲ್ಲ‘ ಎಂದು ಸಾಮಿ ನುಡಿದರು.

ಅಮೆರಿಕದಲ್ಲಿ ಆಫ್ರೊ–ಅಮೆರಿಕನ್‌ ಪ್ರಜೆ ಕಪ್ಪು ಜನಾಂಗದ ಜಾರ್ಜ್‌ ಫ್ಲಾಯ್ಡ್‌ ಅವರು ಪೊಲೀಸ್‌ ದೌರ್ಜನ್ಯದಿಂದ ಸಾವನ್ನಪ್ಪಿದ ಬಳಿಕ ವಿಶ್ವದಾದ್ಯಂತ ವರ್ಣಭೇದದ ವಿರುದ್ಧ ಪ್ರತಿಭಟನೆಗಳು ಭುಗಿಲೆದ್ದಿದ್ದವು. ವೆಸ್ಟ್‌ ಇಂಡೀಸ್‌ ತಂಡದ ಪರ 232 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಸಾಮಿ ಕೂಡ ಈ ಬಗ್ಗೆ ಧ್ವನಿಯೆತ್ತಿದ್ದರು. ತಮಗಾಗಿರುವ ಅನುಭವ ಹಂಚಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.