ADVERTISEMENT

ಜಯದತ್ತ ವಿರಾಟ್ ಬಳಗದ ದಾಪುಗಾಲು

ಇಂಗ್ಲೆಂಡ್ ಎದುರಿನ ಪಂದ್ಯ: ಭಾರತ ತಂಡಕ್ಕೆ 194 ರನ್‌ಗಳ ಗೆಲುವಿನ ಗುರಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2018, 19:50 IST
Last Updated 3 ಆಗಸ್ಟ್ 2018, 19:50 IST
ಬೆನ್ ಸ್ಟೋಕ್ಸ್ ವಿಕೆಟ್ ಕಬಳಿಸಿದ ಇಶಾಂತ್ ಶರ್ಮಾ ಅವರನ್ನು ರವಿಚಂದ್ರನ್ ಅಶ್ವಿನ್ ಅಭಿನಂದಿಸಿದರು –ರಾಯಿಟರ್ಸ್ ಚಿತ್ರ
ಬೆನ್ ಸ್ಟೋಕ್ಸ್ ವಿಕೆಟ್ ಕಬಳಿಸಿದ ಇಶಾಂತ್ ಶರ್ಮಾ ಅವರನ್ನು ರವಿಚಂದ್ರನ್ ಅಶ್ವಿನ್ ಅಭಿನಂದಿಸಿದರು –ರಾಯಿಟರ್ಸ್ ಚಿತ್ರ   

ಬರ್ಮಿಂಗ್‌ಹ್ಯಾಂ:ಏಳು–ಬೀಳುಗಳ ಕೊನೆಯಲ್ಲಿ ವಿರಾಟ್ ಕೊಹ್ಲಿ ಬಳಗ ಕೊನೆಗೂ ನಿಟ್ಟುಸಿರು ಬಿಟ್ಟಿತು. ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ತಂಡ ಜಯದತ್ತ ದಾಪುಗಾಲು ಹಾಕಿದೆ.

ವೇಗಿ ಇಶಾಂತ್ ಶರ್ಮಾ ಮತ್ತು ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಪರಿಣಾಮಕಾರಿ ದಾಳಿಯ ನೆರವಿನಿಂದ ಭಾರತ ಆತಿಥೇಯರನ್ನು ಎರಡನೇ ಇನಿಂಗ್ಸ್‌ನಲ್ಲಿ ಕಡಿಮೆ ಮೊತ್ತಕ್ಕೆ ನಿಯಂತ್ರಿಸಿತು. 194 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ತಂಡ ಆರಂಭದಲ್ಲಿ ಆಘಾತ ಅನುಭವಿಸಿತು. ಆದರೆ ವಿರಾಟ್ ಕೊಹ್ಲಿ ಮತ್ತು ದಿನೇಶ್ ಕಾರ್ತಿಕ್ ದಿಟ್ಟ ಆಟವಾಡಿ ತಂಡಕ್ಕೆ ಆಸರೆಯಾದರು. ಪಂದ್ಯದಲ್ಲಿ ಇನ್ನೂ ಎರಡು ದಿನಗಳು ಉಳಿದಿದ್ದು ಭಾರತದ ಜಯಕ್ಕೆ 84 ರನ್‌ಗಳ ಅಗತ್ಯವಿದೆ. ಐದು ವಿಕೆಟ್‌ಗಳು ಭದ್ರವಾಗಿವೆ.

ದಿನದ ಮೊದಲ ಅವಧಿಯ ಆಟದಲ್ಲಿ ಇಶಾಂತ್ ಶರ್ಮಾ ಮತ್ತು ಆಫ್‌ ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್‌ ಅವರ ದಾಳಿಗೆ ಬೆಚ್ಚಿದ ಆತಿಥೇಯ ತಂಡದಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ಭೋಜನ ವಿರಾಮದ ನಂತರ ಸ್ಯಾಮ್ ಕರನ್‌ ಸ್ಫೋಟಕ ಬ್ಯಾಟಿಂಗ್ ಮೂಲಕ ಮಿಂಚು ಹರಿಸಿದರು. ಆದರೆ ಚಹಾ ವಿರಾಮದ ನಂತರ ಮತ್ತೊಮ್ಮೆ ಮೇಲುಗೈ ಸಾಧಿಸಿದ ಭಾರತದ ಬೌಲರ್‌ಗಳು ಇಂಗ್ಲೆಂಡ್ ತಂಡವನ್ನು ಆಲ್ ಔಟ್ ಮಾಡುವಲ್ಲಿ ಯಶಸ್ವಿಯಾದರು.

ಎರಡನೇ ಇನಿಂಗ್ಸ್ ಆರಂಭಿಸಿದ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಮುರಳಿ ವಿಜಯ್ ಆರು ರನ್ ಗಳಿಸಿ ಸ್ಟುವರ್ಟ್ ಬ್ರಾಡ್‌ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರೆ, ಅವರ ಜೋಡಿ ಶಿಖರ್ ಧವನ್‌ ಕೂಡ ಬ್ರಾಡ್‌ಗೆ ವಿಕೆಟ್ ಒಪ್ಪಿಸಿದರು. ಕೆ.ಎಲ್‌.ರಾಹುಲ್, ಅಜಿಂಕ್ಯ ರಹಾನೆ ಮತ್ತು ಅಶ್ವಿನ್ ಕೂಡ ಬೇಗನೇ ಪೆವಿಲಿಯನ್‌ಗೆ ಮರಳಿದರು. 78 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿದ್ದಾಗ ಜೊತೆಯಾದ ಕೊಹ್ಲಿ ಮತ್ತು ಕಾರ್ತಿಕ್‌ ಇನಿಂಗ್ಸ್ ಮುನ್ನಡೆಸಿದರು.

ADVERTISEMENT

ಇಶಾಂತ್‌, ಅಶ್ವಿನ್ ಮೋಡಿ: ಮೊದಲ ಇನಿಂಗ್ಸ್‌ನಲ್ಲಿ ಕೇವಲ 13 ರನ್‌ ಮುನ್ನಡೆ ಪಡೆದಿದ್ದ ಇಂಗ್ಲೆಂಡ್‌ ಎರಡನೇ ದಿನವಾದ ಗುರುವಾರ ಆಟದ ಮುಕ್ತಾಯಕ್ಕೆ ಒಂದು ವಿಕೆಟ್ ಕಳೆದುಕೊಂಡು ಒಂಬತ್ತು ರನ್ ಗಳಿಸಿತ್ತು. ಶುಕ್ರವಾರ ಆಟ ಮುಂದುವರಿಸಿದ ತಂಡಕ್ಕೆ ಇಶಾಂತ್ ಶರ್ಮಾ ಮತ್ತು ಅಶ್ವಿನ್ ಆಘಾತ ನೀಡಿದರು. ಭೋಜನ ವಿರಾಮದ ವೇಳೆ ಇಂಗ್ಲೆಂಡ್‌ 30.4 ಓವರ್‌ಗಳಲ್ಲಿ 80 ರನ್‌ಗಳಿಗೆ ಆರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಭೋಜನದ ನಂತರ ಎರಡನೇ ಎಸೆತದಲ್ಲೇ ಜೋಸ್ ಬಟ್ಲರ್‌, ಇಶಾಂತ್ ಶರ್ಮಾಗೆ ವಿಕೆಟ್ ಒಪ್ಪಿಸಿದರು. ಕರನ್ ಮತ್ತು ರಶೀದ್‌ ಎಂಟನೇ ವಿಕೆಟ್‌ಗೆ 48 ರನ್‌ ಸೇರಿಸಿದರು. ಚಹಾ ವಿರಾಮಕ್ಕೆ ಮೊದಲು ರಶೀದ್ ವಿಕೆಟ್ ಕಬಳಿಸಿ ವೇಗಿ ಉಮೇಶ್ ಯಾದವ್‌
ಪಂದ್ಯವನ್ನು ಮತ್ತೆ ಭಾರತದ ಹಿಡಿತಕ್ಕೆ ತಂದರು. ನಂತರ ಎದುರಾಳಿಗಳು ಬೇಗನೇ ಆಲೌಟ್ ಆದರು.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್‌, ಮೊದಲ ಇನಿಂಗ್ಸ್‌: 89.4 ಓವರ್‌ಗಳಲ್ಲಿ 287; ಭಾರತ, ಮೊದಲ ಇನಿಂಗ್ಸ್‌: 76 ಓವರ್‌ಗಳಲ್ಲಿ 274; ಇಂಗ್ಲೆಂಡ್‌, ಎರಡನೇ ಇನಿಂಗ್ಸ್: 53 ಓವರ್‌ಗಳಲ್ಲಿ 180 (ಜೋ ರೂಟ್‌ 14, ಡೇವಿಡ್ ಮಲಾನ್‌ 20, ಜಾನಿ ಬೇಸ್ಟೊ 28, ಬೆನ್ ಸ್ಟೋಕ್ಸ್ 6, ಸ್ಯಾಮ್‌ ಕರನ್‌ 63, ಆದಿಲ್ ರಶೀದ್‌ 16, ಸ್ಟುವರ್ಟ್‌ ಬ್ರಾಡ್‌ 11; ರವಿಚಂದ್ರನ್ ಅಶ್ವಿನ್ 59ಕ್ಕೆ3, ಇಶಾಂತ್ ಶರ್ಮಾ 51ಕ್ಕೆ5, ಉಮೇಶ್ ಯಾದವ್‌ 20ಕ್ಕೆ2); ಭಾರತ, ಎರಡನೇ ಇನಿಂಗ್ಸ್‌: 36 ಓವರ್‌ಗಳಲ್ಲಿ 5ಕ್ಕೆ 110 (ಶಿಖರ್‌ ಧವನ್ 13, ಕೆ.ಎಲ್‌.ರಾಹುಲ್‌ 13, ವಿರಾಟ್ ಕೊಹ್ಲಿ ಔಟಾಗದೆ 43, ಅಜಿಂಕ್ಯ ರಹಾನೆ 2, ರವಿಚಂದ್ರನ್ ಅಶ್ವಿನ್‌ 13, ದಿನೇಶ್ ಕಾರ್ತಿಕ್‌ ಔಟಾಗದೆ 18, ಸ್ಟುವರ್ಟ್‌ ಬ್ರಾಡ್‌ 29ಕ್ಕೆ2).

ಅಡಿಲೇಡ್ ಇನಿಂಗ್ಸೇ ಶ್ರೇಷ್ಠ: ಕೊಹ್ಲಿ

ಇಂಗ್ಲೆಂಡ್ ಎದುರಿನ ಮೊದಲ ಟೆಸ್ಟ್‌ನ ಎರಡನೇ ದಿನ ನಾಯಕವಿರಾಟ್ ಕೊಹ್ಲಿ ಭಾರತ ತಂಡದ ಬ್ಯಾಟಿಂಗ್‌ಗೆ ಏಕಾಂಗಿಯಾಗಿ ಬಲ ತುಂಬಿದ್ದರು. ಈ ಮೂಲಕ ಕ್ರಿಕೆಟ್ ಜಗತ್ತಿನ ಮೆಚ್ಚುಗೆಗೆಪಾತ್ರವಾಗಿದ್ದರು.

ಆದರೆ ನಾಲ್ಕು ವರ್ಷಗಳ ಹಿಂದೆ ನಡೆದ ಅಡಿಲೇಡ್‌ ಟೆಸ್ಟ್‌ನ ಇನಿಂಗ್ಸ್‌ಗೆ ಇದು ಸರಿಸಾಟಿಯಲ್ಲ ಎಂದು ಕೊಹ್ಲಿ ಹೇಳಿದ್ದಾರೆ.

ಪಂದ್ಯದ ಎರಡನೇ ದಿನದಾಟದ ನಂತರ ಬಿಸಿಸಿಐ ವೆಬ್‌ಸೈಟ್‌ನ ಪ್ರತಿನಿಧಿ ಜೊತೆ ಮಾತನಾಡಿದ ಅವರು ‘ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ಎದುರು ನಡೆದಿದ್ದ ಪಂದ್ಯದಲ್ಲಿ ಗಳಿಸಿದ 141 ರನ್‌ ನನ್ನ ಶ್ರೇಷ್ಠ ಇನಿಂಗ್ಸ್ ಆಗಿದೆ. ಯಾಕೆಂದರೆ ಆ ಪಂದ್ಯದಲ್ಲಿ ತಂಡ 364 ರನ್‌ಗಳ ಗುರಿ ಬೆನ್ನತ್ತಿತ್ತು’ ಎಂದು ಹೇಳಿದರು.

2014ರಲ್ಲಿ ಅಡಿಲೇಡ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಕೊಹ್ಲಿ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಸಿಡಿಸಿದ್ದರು. ಆದರೆ ಇತರ ಬ್ಯಾಟ್ಸ್‌ಮನ್‌ಗಳಿಂದ ಉತ್ತಮ ಸಹಕಾರ ಸಿಗದ ಕಾರಣ ತಂಡ 48 ರನ್‌ಗಳಿಂದ ಸೋತಿತ್ತು.

ಇಂಗ್ಲೆಂಡ್ ವಿರುದ್ಧದ ಪಂದ್ಯದ ಎರಡನೇ ದಿನ ಶತಕ ಗಳಿಸುವುದು ಮಾತ್ರ ತಮ್ಮ ಗುರಿಯಾಗಿರಲಿಲ್ಲ ಎಂದು ಹೇಳಿದ ಕೊಹ್ಲಿ ‘ಮೂರಂಕಿ ಮೊತ್ತದ ದಾಟಿದ ನಂತರವೂ ಇನಿಂಗ್ಸ್ ಮುಂದುವರಿಸುವ ಉದ್ದೇಶದಿಂದಲೇ ಬ್ಯಾಟಿಂಗ್ ಮಾಡಿದ್ದೆ, ಮೊದಲ ಇನಿಂಗ್ಸ್‌ನಲ್ಲಿ 10ರಿಂದ 15 ರನ್ ಮುನ್ನಡೆ ಗಳಿಸುವ ಸಾಧ್ಯತೆ ಇತ್ತು. ಆದರೆ ಅನಿರೀಕ್ಷಿತವಾಗಿ ವಿಕೆಟ್ ಕಳೆದುಕೊಂಡದ್ದು ಬೇಸರ ತಂದಿತ್ತು’ ಎಂದರು.

‘ಕೊಹ್ಲಿ ಇನಿಂಗ್ಸ್‌ ಯುವ ಆಟಗಾರರಿಗೆ ಪ್ರೇರಕ’

ನವದೆಹಲಿ: ಬರ್ಮಿಂಗ್‌ಹ್ಯಾಂನಲ್ಲಿ ಕೊಹ್ಲಿ ಗುರುವಾರ ಆಡಿದರೀತಿ ಯುವ ಆಟಗಾರರಿಗೆ ಪ್ರೇರಣೆಯಾಗಬಲ್ಲುದು ಎಂದು ವೆಸ್ಟ್ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್‌ ಅಭಿಪ್ರಾಯಪಟ್ಟರು.

‘ಪಂದ್ಯದ ವೇಳೆ ನಾನು ಚಿತ್ರೀಕರಣವೊಂದರಲ್ಲಿ ನಿರತನಾಗಿದ್ದೆ. ಆದ್ದರಿಂದ ಟಿ.ವಿಯಲ್ಲಿ ಮುಖ್ಯಾಂಶಗಳನ್ನು ಮಾತ್ರ ವೀಕ್ಷಿಸಿದೆ.ನಾಯಕನ ಆಟ ಆಡಿದ ಕೊಹ್ಲಿ ನಿಜಕ್ಕೂ ಮೆಚ್ಚುಗೆಗೆ ಅರ್ಹರು’ ಎಂದು ಗೇಲ್‌ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.