ನವದೆಹಲಿ: ಐಪಿಎಲ್ ಹರಾಜಿನಲ್ಲಿ ತಾವು ₹24.75 ಕೋಟಿಗೆ ಖರೀದಿಯಾಗಬಹುದೆಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ ಎಂದು ಹೇಳಿರುವ ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರು ‘ಇಷ್ಟೊಂದು ದೊಡ್ಡ ಮೊತ್ತ ತಮ್ಮ ಮೇಲೆ ಕೆಲಮಟ್ಟಿಗೆ ಒತ್ತಡ ಉಂಟುಮಾಡಲಿದೆ’ ಎಂಬುದನ್ನೂ ಒಪ್ಪಿಕೊಂಡಿದ್ದಾರೆ.
ಸ್ಟಾರ್ಕ್ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಎನಿಸಿದ್ದಾರೆ. ಬೆಂಗಳೂರಿನ ಜೊತೆ ಪೈಪೋಟಿಗೆ ಬಿದ್ದ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಅಂತಿಮವಾಗಿ 33 ವರ್ಷದ ಎಡಗೈ ವೇಗಿಯನ್ನು ತನ್ನದಾಗಿಸಿಕೊಂಡಿತು.
‘ನಿಜ, ಇದು ನನಗೆ ಅಚ್ಚರಿ (ಶಾಕ್). ಕನಸಿನಲ್ಲೂ ಊಹಿಸಿರಲಿಲ್ಲ. ಆದರೆ ನನ್ನ ಮೇಲೆ ಇದು ಒತ್ತಡ ತರುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಹಿಂದಿನ ಐಪಿಎಲ್ ಅನುಭವ ನೆರವಿಗೆ ಬರಲಿದೆ’ ಎಂದು ಸ್ಟಾರ್ಕ್ ‘ಜಿಯೊ ಸಿನಿಮಾ’ಕ್ಕೆ ತಿಳಿಸಿದರು.
ಈಗ ತಾವು ಮತ್ತು ಕಮಿನ್ಸ್ ಆಸ್ಟ್ರೇಲಿಯಾದ ಆಟಗಾರರಿಗೆ ಪಾರ್ಟಿ ನೀಡಬೇಕಾಗುತ್ತದೆ ಎಂದು ಸ್ಟಾರ್ಕ್ ಚಟಾಕಿ ಹಾರಿಸಿದರು.
‘ನನ್ನ ಪತ್ನಿ ಅಲಿಸಾ (ಹೀಲಿ) ಆಸ್ಟ್ರೇಲಿಯಾ ಮಹಿಳಾ ತಂಡದ ಜೊತೆ ಭಾರತದಲ್ಲಿದ್ದಾರೆ. ಅವರಿಗೆ ನನಗಿಂತ ಬೇಗ ಸುದ್ದಿ ಸಿಗುತ್ತದೆ’ ಎಂದು ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.