ಲಂಡನ್: ವೇಗದ ಬೌಲರ್ ಲಿಯಾಮ್ ಪ್ಲಂಕೆಟ್ ಅವರೊಡನೆ ಸಂವಹನ ನಡೆಸುವಲ್ಲಿ ಇಂಗ್ಲೆಂಡ್ ತಂಡದ ಚಿಂತಕರ ಚಾವಡಿ ಎಡವಿದೆ ಎಂದು ಆ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ತಂಡದಿಂದ ಕೈಬಿಟ್ಟಿರುವುದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ಲಂಕೆಟ್ ತಿಳಿದುಕೊಳ್ಳುವಂತಾಗಿದ್ದು ಅತ್ಯಂತ ನಾಚಿಕೆಗೇಡಿನ ವಿಷಯ ಎಂದು ಹೇಳಿದ್ದಾರೆ.
ಕಳೆದ ವರ್ಷ ತವರಿನಲ್ಲಿ ಇಂಗ್ಲೆಂಡ್ ತಂಡ ಏಕದಿನ ವಿಶ್ವಕಪ್ ಗೆಲ್ಲಲು ನೆರವಾದ ನಂತರ ಪ್ಲಂಕೆಟ್, ರಾಷ್ಟ್ರೀಯ ತಂಡದಲ್ಲಿ ಆಡಿಲ್ಲ. ಇತ್ತೀಚೆಗೆ ತರಬೇತಿಗೆ ಹಾಜರಾಗುವಂತೆ ಇಂಗ್ಲೆಂಡ್ ತಂಡ ಸೂಚಿಸಿದ್ದ 55 ಆಟಗಾರರ ಪಟ್ಟಿಯಲ್ಲಿ 35 ವರ್ಷದ ಪ್ಲಂಕೆಟ್ ಹೆಸರು ಇರಲಿಲ್ಲ. ತಮ್ಮನ್ನು ಕೈಬಿಟ್ಟ ವಿಷಯಪ್ಲಂಕೆಟ್ ಅವರಿಗೆ ಟ್ವಿಟರ್ ಮೂಲಕ ಗೊತ್ಗಾಗಿತ್ತು.
ವಿಶ್ವಕಪ್ ನಂತರ ಒಬ್ಬನೇ ಒಬ್ಬ ವ್ಯಕ್ತಿ ಕೂಡ ಅವರಿಗೆ ಕರೆ ಮಾಡಿ ಮಾತನಾಡಿಲ್ಲ ಎಂದು ಮಾಜಿ ಎಡಗೈ ಸ್ಪಿನ್ನರ್ ಫಿಲ್ ಟಫ್ನೆಲ್ ಅವರೊಡನೆ ಪಾಡ್‌ಕಾಸ್ಟ್ ಮಾತುಕತೆಯಲ್ಲಿ ವಾನ್ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ಲಂಕೆಟ್ ಪತ್ನಿ ಅಮೆರಿಕದವರು. ಅವಕಾಶ ದೊರೆತಲ್ಲಿ ಅಮೆರಿಕ ತಂಡಕ್ಕೆ ಆಡಲು ಮುಕ್ತ ಮನಸ್ಸು ಹೊಂದಿರುವುದಾಗಿ ಪ್ಲಂಕೆಟ್ ಹೇಳಿದ್ದಾರೆ. ಆದರೆ ಅಮೆರಿಕ ತಂಡಕ್ಕೆ ಆಡುವ ಅರ್ಹತೆ ಪಡೆಯಬೇಕಾದರೆ ಅವರು ಮೂರು ವರ್ಷಗಳ ಕಾಲ ಅಲ್ಲಿ ನೆಲೆಸಿರಬೇಕಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.