ADVERTISEMENT

ಕೊಹ್ಲಿ, ರೋಹಿತ್ ಸ್ಥಾನ ತುಂಬಲು 2–3 ವರ್ಷ ಬೇಕಾಗುತ್ತದೆ: ರೋಜರ್ ಬಿನ್ನಿ

ಪಿಟಿಐ
Published 30 ಜೂನ್ 2024, 8:18 IST
Last Updated 30 ಜೂನ್ 2024, 8:18 IST
ರೋಜರ್ ಬಿನ್ನಿ
ರೋಜರ್ ಬಿನ್ನಿ   

ಬ್ರಿಡ್ಜ್‌ಟೌನ್(ಬಾರ್ಬಡೋಸ್): ಟೀಮ್ ಇಂಡಿಯಾದ ಶ್ರೇಷ್ಠ ಕ್ರಿಕೆಟಿಗರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯವರು ಟಿ–20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಕುರಿತಂತೆ ಪ್ರತಿಕ್ರಿಯಿಸಿರುವ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ತಂಡದಲ್ಲಿ ಅವರ ಜಾಗವನ್ನು ಭರ್ತಿ ಮಾಡಲು ಎರಡು ಮೂರು ವರ್ಷಗಳಾದರೂ ಬೇಕಾಗುತ್ತದೆ ಎಂದು ಹೇಳಿದ್ದಾರೆ.

2ನೇ ಟಿ–20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಳಿಕ ಟಿ–20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ 37 ವರ್ಷದ ರೋಹಿತ್ ಶರ್ಮಾ, 35 ವರ್ಷದ ವಿರಾಟ್ ಕೊಹ್ಲಿ ವಿದಾಯ ಹೇಳಿದ್ದಾರೆ. ಫೈನಲ್‌ನಲ್ಲಿ 7 ರನ್‌ಗಳಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿದ ಭಾರತ ತಂಡ, ಐಸಿಸಿ ಟ್ರೋಫಿಗಾಗಿ 11 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿತು.

'ಐಪಿಎಲ್‌ನಲ್ಲಿ ಸಾಕಷ್ಟು ಪ್ರತಿಭೆಗಳಿವೆ. ಬಹಳಷ್ಟು ಪ್ರತಿಭಾವಂತ ಕ್ರಿಕೆಟಿಗರು ಬರುತ್ತಿದ್ದಾರೆ. ಆದರೆ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿವೃತ್ತಿಯ ನಂತರ ಆ ನಿರ್ವಾತವನ್ನು ತುಂಬಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ’ ಎಂದು ಬಿನ್ನಿ ಮಾಧ್ಯಮಗಳಿಗೆ ತಿಳಿಸಿದರು.

ADVERTISEMENT

‘ಟಿ–20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಅವರು ಬಹಳಷ್ಟು ಕೊಡುಗೆ ನೀಡಿದ್ದಾರೆ. ಅವರ ಸ್ಥಾನ ತುಂಬುವುದಕ್ಕೆ ಸಮಯ ಹಿಡಿಯುತ್ತದೆ. ಮುಂದಿನ ಎರಡು ಮೂರು ವರ್ಷಗಳಲ್ಲಿ ಅವರ ಅನುಪಸ್ಥಿತಿಯಲ್ಲಿಯೂ ಆಡಬಲ್ಲ ಸಮರ್ಥ ತಂಡ ಕಟ್ಟಬಹುದು’ಎಂದು ಹೇಳಿದ್ಧಾರೆ.

159 ಟಿ–20 ಕ್ರಿಕೆಟ್ ಪಂದ್ಯಗಳನ್ನು ಆಡಿರುವ ರೋಹಿತ್ ಶರ್ಮಾ, 4231 ರನ್ ಕಲೆ ಹಾಕಿದ್ದಾರೆ. 5 ಶತಕ ಮತ್ತು 32 ಅರ್ಧಶತಕ ಸಿಡಿಸಿದ್ದಾರೆ.

125 ಟಿ–20 ಪಂದ್ಯಗಳನ್ನು ಆಡಿರುವ ಕೊಹ್ಲಿ 4188 ರನ್ ಗಳಿಸಿದ್ದಾರೆ. 48.69ರ ಸರಾಸರಿಯಲ್ಲಿ ಅವರು ರನ್ ಗಳಿಸಿದ್ದು, 122 ರನ್ ಅವರ ಅತ್ಯಧಿಕ ಮೊತ್ತವಾಗಿದೆ. ಏಕೈಕ ಶತಕ ದಾಖಲಿಸಿದ್ದಾರೆ.

ಈ ಇಬ್ಬರೂ ಕ್ರಿಕೆಟಿಗರು ಐಪಿಎಲ್, ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಆಟ ಮುಂದುವರಿಸಲಿದ್ದಾರೆ.

1983ರಲ್ಲಿ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದ ರೋಜರ್ ಬಿನ್ನಿ, ಅಂದು ನಮ್ಮನ್ನು ಕಪ್ ಗೆಲ್ಲುವ ತಂಡವೆಂದೇ ಪರಿಗಣಿಸುತ್ತಿರಲಿಲ್ಲ. ತೀರಾ ಕೆಳಮಟ್ಟದಲ್ಲಿ ನೋಡುತ್ತಿದ್ದರು. ನಾವು ಕಪ್ ಗೆದ್ದ ಬಳಿಕ ಆ ಹಣೆಪಟ್ಟಿ ಹೋಯಿತು. ಈಗ ಯಾವುದೇ ವಿಶ್ವಕಪ್ ಸರಣಿಯಲ್ಲೂ ಭಾರತ ಕಪ್ ಗೆಲ್ಲಬಹುದು ಎಂಬ ನಿರೀಕ್ಷೆ ಇರುತ್ತದೆ. ಯಾರೂ ನಮ್ಮನ್ನು ಕಡಿಮೆ ಎಂದು ಪರಿಗಣಿಸುವುದಿಲ್ಲ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.