ಲೀಡ್ಸ್: ಆಸ್ಟ್ರೇಲಿಯಾ ವಿರುದ್ಧದ ಆ್ಯಷಸ್ ಕ್ರಿಕೆಟ್ ಟೆಸ್ಟ್ ಸರಣಿಯ ಮೂರನೇ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಮೂರು ಬದಲಾವಣೆಗಳನ್ನು ಮಾಡಿದ್ದು, ವೇಗದ ಬೌಲರ್ ಜೇಮ್ಸ್ ಆ್ಯಂಡರ್‌ಸನ್ ಅವರನ್ನು ಕೈಬಿಟ್ಟಿದೆ.
ಮೂರನೇ ಟೆಸ್ಟ್ ಇಲ್ಲಿನ ಹೆಡಿಂಗ್ಲೇ ಕ್ರೀಡಾಂಗಣದಲ್ಲಿ ನಡೆಯಲಿದೆ. ಐದು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ, 2–0 ರಲ್ಲಿ ಮುನ್ನಡೆ ಸಾಧಿಸಿದೆ. ಸರಣಿ ಗೆಲುವಿನ ಕನಸು ಜೀವಂತವಾಗಿರಿಸಿಕೊಳ್ಳಬೇಕಾದರೆ ಮೂರನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ಗೆ ಜಯ ಅನಿವಾರ್ಯ.
ಆ್ಯಂಡರ್‌ಸನ್ ಮತ್ತು ಜೋಶ್ ಟಂಗ್ ಅವರಿಗೆ ‘ವಿಶ್ರಾಂತಿ’ ನೀಡಲಾಗಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತಿಳಿಸಿದೆ. ಇವರ ಬದಲಿಗೆ ವೇಗದ ಬೌಲರ್ ಮಾರ್ಕ್ ವುಡ್ ಮತ್ತು ಆಲ್‌ರೌಂಡರ್ ಕ್ರಿಸ್ ವೋಕ್ಸ್ ಅವರಿಗೆ ಸ್ಥಾನ ನೀಡಲಾಗಿದೆ.
ಗಾಯಾಳು ಒಲಿ ಪೋಪ್ ಬದಲು, ಸ್ಪಿನ್ನರ್ ಮೊಯೀನ್ ಅಲಿ ತಂಡವನ್ನು ಸೇರಿಕೊಂಡಿದ್ದಾರೆ. ಕೈಬೆರಳಿನ ಗಾಯದಿಂದಾಗಿ ಮೊಯೀನ್, ಲಾರ್ಡ್ಸ್‌ನಲ್ಲಿ ನಡೆದಿದ್ದ ಎರಡನೇ ಟೆಸ್ಟ್‌ನಲ್ಲಿ ಆಡಿರಲಿಲ್ಲ. ಎರಡನೇ ಪಂದ್ಯದ ವೇಳೆ ಭುಜದ ಕೀಲುತಪ್ಪಿರುವ ಕಾರಣ, ಪೋಪ್ ಅವರು ಸರಣಿಯ ಉಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ವಿಕೆಟ್ ಪಡೆದ ವೇಗದ ಬೌಲರ್ (688 ವಿಕೆಟ್) ಎನಿಸಿಕೊಂಡಿರುವ ಆ್ಯಂಡರ್‌ಸನ್ ಅವರು ಈ ಸರಣಿಯಲ್ಲಿ ಪರಿಣಾಮಕಾರಿ ಎನಿಸಿಲ್ಲ. ಎರಡು ಪಂದ್ಯಗಳಿಂದ ಮೂರು ವಿಕೆಟ್ ಮಾತ್ರ ಪಡೆದಿದ್ದಾರೆ.
ಇಂಗ್ಲೆಂಡ್ ತಂಡ: ಬೆನ್ ಡಕೆಟ್, ಜಾಕ್ ಕ್ರಾಲಿ, ಹ್ಯಾರಿ ಬ್ರೂಕ್, ಜೋ ರೂಟ್, ಜಾನಿ ಬೆಸ್ಟೋ, ಬೆನ್ ಸ್ಟೋಕ್ಸ್, ಮೊಯೀನ್ ಅಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಒಲಿ ರಾಬಿನ್ಸನ್, ಸ್ಟುವರ್ಟ್ ಬ್ರಾಡ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.