ಲಂಡನ್: ಇಂಗ್ಲೆಂಡ್ ತಂಡದ ಖ್ಯಾತ ವೇಗದ ಬೌಲರ್ ಜೇಮ್ಸ್ ಆ್ಯಂಡರ್‌ಸನ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಶನಿವಾರ ನಿವೃತ್ತಿ ಘೋಷಿಸಿದ್ದಾರೆ.
ಜುಲೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯುವ ಟೆಸ್ಟ್ ಸರಣಿಯ ಮೊದಲನೇ ಪಂದ್ಯ ತಮ್ಮ ವೃತ್ತಿ ಜೀವನದ ಕೊನೆಯ ಪಂದ್ಯವಾಗಿರಲಿದೆ ಎಂದು ಅವರು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಆ ಮೂಲಕ 20 ವರ್ಷಗಳ ತಮ್ಮ ಸುದೀರ್ಘ ಕ್ರಿಕೆಟ್ ಬದುಕಿಗೆ ತೆರೆ ಎಳೆಯಲಿದ್ದಾರೆ.
ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ 41 ವರ್ಷದ ಆ್ಯಂಡರ್‌ಸನ್, ಇಂಗ್ಲೆಂಡ್ ಪರ ಅತಿ ಹೆಚ್ಚು ವಿಕೆಟ್ ಪಡೆದುಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 700ಕ್ಕೂ ಅಧಿಕ ವಿಕೆಟ್ ಪಡೆದ ಮೂವರು ಬೌಲರ್‌ಗಳ ಪೈಕಿ ಆ್ಯಂಡರ್‌ಸನ್ ಕೂಡ ಒಬ್ಬರು.
‘ಎಲ್ಲರಿಗೂ ನಮಸ್ಕಾರ, ಈ ಬೇಸಿಗೆಯಲ್ಲಿ ಲಾರ್ಡ್ಸ್‌ನಲ್ಲಿ ನಡೆಯುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ, ನನ್ನ ಕೊನೆಯ ಪಂದ್ಯವಾಗಿರಲಿದೆ. ಬಾಲ್ಯದಿಂದ ಇಷ್ಟಪಟ್ಟಿದ ಆಟವನ್ನು ಆಡಲು, ನನ್ನ ದೇಶವನ್ನು ಪ್ರತಿನಿಧಿಸಿದ 20 ಅದ್ಭುತ ವರ್ಷಗಳಿವು. ಇಂಗ್ಲೆಂಡ್ ತಂಡಕ್ಕಾಗಿ ಆಡುವುದನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
‘ನಿವೃತ್ತಿಗೆ ಇದು ಸರಿಯಾದ ಸಮಯ ಎಂದು ನಾನು ಬಲ್ಲೆ. ನನ್ನ ಹಾಗೆ ಇನ್ನೊಬ್ಬರು ಕೂಡ ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲಿ’ ಎಂದು ಹೇಳಿದ್ದಾರೆ.
2025–26ರಲ್ಲಿ ಆ್ಯಷಸ್ ಸರಣಿ ನಡೆಯಲಿರುವುದರಿಂದ, ತಂಡದ ಟೆಸ್ಟ್ ಕೋಚ್ ಬ್ರೆಂಡನ್ ಮೆಕಲಮ್ ಅವರಿಗೆ ಮಾಹಿತಿ ನೀಡಿಯೇ ಆ್ಯಂಡರ್‌ಸನ್ ನಿವೃತ್ತಿ ಘೋಷಿಸಿದ್ದಾರೆ ಎಂದು ಮಾಹಿತಿ ಲಭಿಸಿದೆ.
ಆದರೆ ಅವರು ಪ್ರತಿನಿಧಿಸುತ್ತಿರುವ ಲಂಕಾಶೈರ್ ಕೌಂಟಿ ಪರ ಆಡಲಿದ್ದಾರೆಯೇ ಎನ್ನುವುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
2003ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಆ್ಯಂಡರ್ಸನ್, ಈವರೆಗೂ 187 ಪಂದ್ಯಗಳಲ್ಲಿ 700 ವಿಕೆಟ್ ಗಳಿಸಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಹಾಗೂ ಆಸ್ಟ್ರೇಲಿಯಾದ ಶೇನ್ ವಾರ್ನ್ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಸ್ಥಾನದಲ್ಲಿ ಆ್ಯಂಡರ್‌ಸನ್ ಇದ್ದಾರೆ.
194 ಏಕದಿನ ಪಂದ್ಯಗಳನ್ನು ಆಡಿರುವ ಅವರು, 269 ವಿಕೆಟ್‌ಗಳನ್ನು ಪಡೆದಿದ್ದಾರೆ.
ಕುಟುಂಬದವರಿಗೆ, ಬೆಂಬಲಿಗರಿಗೆ, ಸಹ ಆಟಗಾರರಿಗೆ, ಕೋಚ್‌ಗಳಿಗೆ ಜಿಮ್ಮಿ ಧನ್ಯವಾದ ಅರ್ಪಿಸಿದ್ದಾರೆ.
ಜುಲೈ 10ರಿಂದ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.