ADVERTISEMENT

ICC Test Rankings:ಬೂಮ್ರಾ ನಂ.1; ಅಗ್ರಸ್ಥಾನಕ್ಕೇರಿದ ಭಾರತದ ಮೊದಲ ವೇಗದ ಬೌಲರ್

ಪಿಟಿಐ
Published 7 ಫೆಬ್ರುವರಿ 2024, 9:19 IST
Last Updated 7 ಫೆಬ್ರುವರಿ 2024, 9:19 IST
<div class="paragraphs"><p>ಜಸ್‌ಪ್ರೀತ್ ಬೂಮ್ರಾ</p></div>

ಜಸ್‌ಪ್ರೀತ್ ಬೂಮ್ರಾ

   

(ಪಿಟಿಐ ಚಿತ್ರ)

ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ತಾಜಾ ಟೆಸ್ಟ್ ಬೌಲಿಂಗ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಜಸ್‌ಪ್ರೀತ್ ಬೂಮ್ರಾ ಅಗ್ರಸ್ಥಾನಕ್ಕೇರಿದ್ದಾರೆ.

ADVERTISEMENT

ಈ ಸ್ಥಾನ ಪಡೆದ ಭಾರತದ ಮೊದಲ ವೇಗದ ಬೌಲರ್ ಎಂಬ ಖ್ಯಾತಿಗೆ ಬೂಮ್ರಾ ಭಾಜನರಾಗಿದ್ದಾರೆ. ಅಲ್ಲದೆ ಒಟ್ಟಾರೆಯಾಗಿ ನಂ.1 ಸ್ಥಾನಕ್ಕೇರಿದ ಭಾರತದ ನಾಲ್ಕನೇ ಬೌಲರ್ ಎನಿಸಿದ್ದಾರೆ.

ಈ ಹಿಂದೆ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ ಹಾಗೂ ಬಿಷನ್ ಸಿಂಗ್ ಬೇಡಿ, ಟೆಸ್ಟ್ ಬೌಲಿಂಗ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ್ದರು.

30 ವರ್ಷದ ಬೂಮ್ರಾ, ಮೂರು ಸ್ಥಾನಗಳ ಬಡ್ತಿ ಪಡೆದಿದ್ದಾರೆ. ಭಾರತದವರೇ ಆದ ರವಿಚಂದ್ರನ್ ಅಶ್ವಿನ್, ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಮತ್ತು ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ. ಅಶ್ವಿನ್ ಎರಡು ಸ್ಥಾನ ಕುಸಿತ ಕಂಡು ಮೂರನೇ ಸ್ಥಾನಕ್ಕೆ ತಲುಪಿದ್ದಾರೆ.

ವಿಶಾಖಪಟ್ಟಣದಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆರು ಸೇರಿದಂತೆ ಪಂದ್ಯದಲ್ಲಿ ಒಟ್ಟು ಒಂಬತ್ತು ವಿಕೆಟ್‌ಗಳನ್ನು ಬೂಮ್ರಾ ಕಬಳಿಸಿದ್ದರು. ಅಲ್ಲದೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಆ ಮೂಲಕ ಟೀಮ್ ಇಂಡಿಯಾ, ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1ರ ಅಂತರದಲ್ಲಿ ಸಮಬಲ ಸಾಧಿಸಿತ್ತು. ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಸೋಲಿಗೆ ಶರಣಾಗಿತ್ತು.

ಐಸಿಸಿ ಟೆಸ್ಟ್ ಬೌಲಿಂಗ್ ರ‍್ಯಾಂಕಿಂಗ್ ಪಟ್ಟಿ ಇಂತಿದೆ:

1. ಜಸ್‌ಪ್ರೀತ್ ಬೂಮ್ರಾ (881)

2. ಕಗಿಸೊ ರಬಾಡ (851)

3. ರವಿಚಂದ್ರನ್ ಅಶ್ವಿನ್ (841)

4. ಪ್ಯಾಟ್ ಕಮಿನ್ಸ್ (828)

5. ಜೋಶ್ ಹ್ಯಾಜಲ್‌ವುಡ್ (818)

6. ಪ್ರಭಾತ್ ಜಯಸೂರ್ಯ (783)

7. ಜೇಮ್ಸ್ ಆ್ಯಂಡರ್ಸನ್ (780)

8. ನಥನ್ ಲಯಾನ್ (746)

9. ರವೀಂದ್ರ ಜಡೇಜ (746)

9. ಒಲ್ಲಿ ರಾಬಿನ್ಸನ್ (746)

ಟೆಸ್ಟ್ ಬ್ಯಾಟಿಂಗ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಚೊಚ್ಚಲ ದ್ವಿಶತಕ ಗಳಿಸಿರುವ ಯುವ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್, 37 ಸ್ಥಾನಗಳ ಬಡ್ತಿ ಪಡೆದು 29ನೇ ಸ್ಥಾನಕ್ಕೆ ತಲುಪಿದ್ದಾರೆ. ವಿಶಾಖಪಟ್ಟಣ ಪಂದ್ಯದಲ್ಲಿ ಶತಕ ಗಳಿಸಿರುವ ಶುಭಮನ್ ಗಿಲ್ ಜೀವನಶ್ರೇಷ್ಠ 38ನೇ ಸ್ಥಾನ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.