ಬೆಂಗಳೂರು: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ವೇಳಾಪಟ್ಟಿ ಈಗಾಗಲೇ ಬಿಡುಗಡೆಗೊಂಡಿದೆ. ಆದರೆ ಟೀಮ್ ಇಂಡಿಯಾದ ಸ್ಪೀಡ್ ಸ್ಟಾರ್ ಜಸ್‌ಪ್ರೀತ್ ಬೂಮ್ರಾ ಯಾವಾಗ ತಂಡಕ್ಕೆ ಮರಳಲಿದ್ದಾರೆ ಎಂಬುದು ಇನ್ನೂ ತಿಳಿದು ಬಂದಿಲ್ಲ.
ಈ ನಡುವೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಚೇತರಿಕೆ ಹಂತದಲ್ಲಿರುವ ಬೂಮ್ರಾ, ಏಳು ಓವರ್ ಬೌಲಿಂಗ್ ಅಭ್ಯಾಸ ನಡೆಸಿದ್ದಾರೆ ಎಂಬುದು ಅಭಿಮಾನಿಗಳಲ್ಲಿ ಸಂತಸಕ್ಕೆ ಕಾರಣವಾಗಿದೆ.
ಕಳೆದ ವರ್ಷ ಸೆಪ್ಟೆಂಬರ್ 25ರಂದು ಆಸ್ಟ್ರೇಲಿಯಾ ವಿರುದ್ಧ ಬೂಮ್ರಾ ಕೊನೆಯದಾಗಿ ಟಿ20 ಪಂದ್ಯ ಆಡಿದ್ದರು. ಮಾರ್ಚ್ ತಿಂಗಳಲ್ಲಿ ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ನಲ್ಲಿ ಬೆನ್ನಿನ ಗಾಯಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ ವಿಶ್ರಾಂತಿಯಲ್ಲಿದ್ದರು.
ಇಂತಹ ಗಾಯ ಆದಾಗ ಸಹಜವಾಗಿ ಯಾವಾಗ ಫಿಟ್ ಆಗಲಿದ್ದಾರೆ ಎಂದು ಸಮಯ ನಿಗದಿ ಮಾಡುವುದು ಸಮಂಜಸವಲ್ಲ. ಬೂಮ್ರಾ ಅವರ ಮೇಲೆ ಸೂಕ್ಷ್ಮ ನಿಗಾ ಇಡಲಾಗಿದೆ. ಬುಮ್ರಾ ಚೇತರಿಕೆ ಹೊಂದುತ್ತಿದ್ದು, ನೆಟ್ಸ್‌ನಲ್ಲಿ ಏಳು ಓವರ್ ಬೌಲಿಂಗ್ ಮಾಡಿದ್ದಾರೆ. ಹಗುರವಾದ ಅಭ್ಯಾಸ, ಬೌಲಿಂಗ್ ಸೆಷನ್‌ನೊಂದಿಗೆ ನಿಧಾನವಾಗಿ ಕೆಲಸದ ಹೊರೆ ಹೆಚ್ಚಿಸಲಾಗುವುದು. ಮುಂದಿನ ತಿಂಗಳಲ್ಲಿ ಬೂಮ್ರಾ ಅಭ್ಯಾಸ ಪಂದ್ಯ ಆಡುವ ನಿರೀಕ್ಷೆಯಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಬೆನ್ನು ನೋವಿನಿಂದಾಗಿ ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನಿಂದಲೂ ಬೂಮ್ರಾ ಹಿಂದೆ ಸರಿದಿದ್ದರು. ಬಳಿಕ ಪ್ರಸಕ್ತ ಸಾಲಿನ ಐಪಿಎಲ್‌ನಲ್ಲೂ ಭಾಗವಹಿಸಿರಲಿಲ್ಲ. ಏಕದಿನ ವಿಶ್ವಕಪ್‌ಗೂ ಮೊದಲು ನಡೆಯಲಿರುವ ಏಷ್ಯಾ ಕಪ್‌ನಲ್ಲೂ ಆಡುವುದು ಅನುಮಾನವೆನಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.