ಬೆಂಗಳೂರು: ಏಷ್ಯಾ ಕಪ್ ಪ್ರಯುಕ್ತ ಭಾನುವಾರ ದುಬೈನಲ್ಲಿ ನಡೆದ ಭಾರತ–ಪಾಕ್ ಟ್ವೆಂಟಿ–ಟ್ವೆಂಟಿ ಕ್ರಿಕೆಟ್ ಮ್ಯಾಚ್‌ನಲ್ಲಿ ಬಿಸಿಸಿಐ ಕಾರ್ಯದರ್ಶಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಮಗ ಜಯ್ ಶಾ ಅವರು ತಿರಂಗಾ ಬಾವುಟ ಹಿಡಿಯಲು ನಿರಾಕರಿಸಿದ್ದು ಟೀಕೆಗೆ ಒಳಗಾಗಿದೆ.
ರೋಚಕ ಹಣಾಹಣಿಯ ಪಂದ್ಯದಲ್ಲಿ ಪಾಕಿಸ್ತಾನವನ್ನು, ಭಾರತ ಸೋಲಿಸಿತು. ಈ ವೇಳೆ ವಿಐಪಿ ಲಾಂಜ್‌ನಲ್ಲಿದ್ದ ಜಯ್ ಶಾ ಹಾಗೂ ಇತರರೂ ಕೂಡ ಭಾರತ ತಂಡ ಬೆಂಬಲಿಸಿ ಸಂಭ್ರಮಾಚರಣೆ ನಡೆಸುತ್ತಿದ್ದರು. ಇದೇ ವೇಳೆ ಶಾ ಆಪ್ತರೊಬ್ಬರು ಭಾರತದ ಬಾವುಟವನ್ನು ಶಾ ಕೈಗೆ ಕೊಡಲು ಮುಂದಾದರು.ಆದರೆ, ಅದನ್ನು ಶಾ ನಿರಾಕರಿಸಿದರು.
ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಡಿಯೊವನ್ನು ಶಾ ಬಗ್ಗೆ ಟೀಕೆಗೆ ಅನೇಕರು ಬಳಸಿಕೊಳ್ಳುತ್ತಿದ್ದಾರೆ.
ಈ ಕುರಿತು ಶಾ ಅವರು ಸ್ಪಷ್ಟನೆ ನೀಡಿಲ್ಲ. ಶಾ ಬಿಸಿಸಿಐ ಸೆಕ್ರೆಟರಿ ಜೊತೆ ಏಷಿಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರಾಗಿರುವುದರಿಂದ ಬಾವುಟ ಹಿಡಿಯಲು ನಿರಾಕರಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ನಿಯಮಾವಳಿಗಳ ಪ್ರಕಾರ ಎಸಿಸಿ ಅಧ್ಯಕ್ಷರಾದವರು ಅಂತರರಾಷ್ಟ್ರೀಯ ಪಂದ್ಯದಲ್ಲಿ ಯಾವುದೇ ತಂಡವನ್ನು ಬಹಿರಂಗವಾಗಿ ಬೆಂಬಲಿಸಲು ಬರುವುದಿಲ್ಲ. ಇದನ್ನು ಅರಿತಿದ್ದ ಶಾ ಅವರು ಸ್ಟೇಡಿಯಂನಲ್ಲಿ ಬಾವುಟವನ್ನು ಹಿಡಿಯಲು ನಿರಾಕರಿಸಿದರು ಎನ್ನಲಾಗಿದೆ.
ಕಾಂಗ್ರೆಸ್ ಸೇರಿದಂತೆ ಶಾ ಅವರ ವಿರೋಧಿಗಳು ಇದೇ ವಿಡಿಯೊವನ್ನು ಮುಂದಿಟ್ಟುಕೊಂಡು ಅವರ ತೇಜೋವಧೆ ಮಾಡುತ್ತಿರುವುದರು ಸರಿಯಲ್ಲ ಎಂದು ಶಾ ಬೆಂಬಲಿಗರು ಟ್ವಿಟರ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.