ಕೊಲಂಬೊ: ದೇಶದಲ್ಲಿ ಬೃಹತ್ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಚಿಂತನೆ ನಡೆಸಿರುವ ಶ್ರೀಲಂಕಾ ಸರ್ಕಾರದ ಕ್ರಮವನ್ನು ಹಿರಿಯ ಕ್ರಿಕೆಟಿಗ ಮಹೇಲಾ ಜಯವರ್ಧನೆ ವಿರೋಧಿಸಿದ್ದಾರೆ. ‘ಈಗಿರುವ ಅಂಗಣಗಳೇ ಸೂಕ್ತವಾಗಿ ಬಳಕೆಯಾಗುತ್ತಿಲ್ಲ’ ಎಂದು ಅವರು ಕಿಡಿ ಕಾರಿದ್ದಾರೆ.
‘ಶ್ರೀಲಂಕಾ ಕ್ರಿಕೆಟ್ ಮಂಡಳಿಯ (ಎಸ್‌ಎಲ್‌ಸಿ) ಸಹಯೋಗದೊಂದಿಗೆ ಹೋಮಗಾಮ ಪಟ್ಟಣದ ದಿಯಾಗಮ ಎಂಬಲ್ಲಿ 26 ಎಕರೆ ಪ್ರದೇಶದಲ್ಲಿ 60,000 ಆಸನ ಸಾಮರ್ಥ್ಯದ ಕ್ರೀಡಾಂಗಣ ನಿರ್ಮಿಸುವ ಯೋಜನೆಯನ್ನು ಶ್ರೀಲಂಕಾ ಸರ್ಕಾರ ಭಾನುವಾರ ಪ್ರಕಟಿಸಿತ್ತು.
‘ನಮ್ಮಲ್ಲಿ ಈಗ ಇರುವ ಕ್ರೀಡಾಂಗಣಗಳಲ್ಲೇ ಸಾಕಷ್ಟು ಅಂತರರಾಷ್ಟ್ರೀಯ ಹಾಗೂ ಪ್ರಥಮದರ್ಜೆ ಪಂದ್ಯಗಳು ನಡೆಯುತ್ತಿಲ್ಲ. ಮತ್ತೊಂದು ಅಂಗಣ ಬೇಕಾ?’ ಎಂದು ಜಯವರ್ಧನೆ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಎಸ್‌ಎಲ್‌ಸಿ ಅಧ್ಯಕ್ಷ ಶಮ್ಮಿ ಸಿಲ್ವಾ ಹಾಗೂ ಸರ್ಕಾರದ ಮಾಹಿತಿ ಸಂವಹನ ತಂತ್ರಜ್ಞಾನ ಸಚಿವ ಬಂಡುಲಾ ಗುಣವರ್ಧನೆ ಅವರ ನೇತೃತ್ವದ ಸಮಿತಿಯು ಕ್ರೀಡಾಂಗಣ ನಿರ್ಮಾಣದ ಸ್ಥಳ ಪರಿಶೀಲನೆ ನಡೆಸಿತು.
ಲಂಕಾದಲ್ಲಿ ಸದ್ಯ ಎಂಟು ಅಂತರರಾಷ್ಟ್ರೀಯ ಕ್ರೀಡಾಂಗಣಗಳಿವೆ. ಕ್ಯಾಂಡಿ, ಗಾಲೆ, ಕೊಲಂಬೊ, ಹಂಬಟೋಟ, ಡಂಬುಲಾ, ಪಲ್ಲೆಕೆಲೆ ಹಾಗೂ ಮೊರಾಟುವಾದಲ್ಲಿ ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.