ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಗೆ ಇಂದು (ಶುಕ್ರವಾರ) ಅದ್ದೂರಿಯಾಗಿ ಚಾಲನೆ ಸಿಕ್ಕಿದೆ. ಇದೇ ಸಂದರ್ಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಅವರು 14 ತಿಂಗಳ ಬಳಿಕ ಮೈದಾನಕ್ಕೆ ಇಳಿಯಲು ತುದಿಗಾಲಲ್ಲಿ ನಿಂತಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಿಗುಪ್ಸೆ, ಉದ್ವೇಗ, ಉತ್ಸುಕತೆಯ ನಡುವೆ ವೃತ್ತಿಪರ ಕ್ರಿಕೆಟ್‌ಗೆ ಮರಳುತ್ತಿರುವ ಸಂತಸ ಮೂಡಿಸಿದೆ. ಐಪಿಎಲ್ ಟೂರ್ನಿಯ ನಾಳೆಯ ಪಂದ್ಯವನ್ನು ಆಡಲು ಎದುರು ನೋಡುತ್ತಿದ್ದೇನೆ’ ಎಂದು ಹೇಳಿದ್ದಾರೆ.
‘ನಾನು ಪ್ರತಿ ಬಾರಿ ಮೈದಾನಕ್ಕಿಳಿದಾಗ ಸಾಧ್ಯವಾದಷ್ಟು ಬ್ಯಾಟ್ ಬೀಸಲು ಮತ್ತು ಮತ್ತಷ್ಟು ಸುಧಾರಿಸಿಕೊಳ್ಳಲು ಶೇಕಡ 100ರಷ್ಟು ಪ್ರಯತ್ನಿಸುತ್ತೇನೆ. ನಾನು ಮುಂದೆ ನಡೆಯಬಹುದಾದ ಸಂಗತಿಗಳ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ’ ಎಂದು ತಿಳಿಸಿದ್ದಾರೆ.
2022ರ ಡಿಸೆಂಬರ್‌ನಲ್ಲಿ ಪಂತ್ ಅವರು ಕಾರು ಚಲಾಯಿಸುತ್ತಿದ್ದ ಸಂದರ್ಭದಲ್ಲಿ ಡೆಹ್ರಾಡೂನ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಬಳಿಕ 2023ರ ಏಕದಿನ ವಿಶ್ವಕಪ್ ಸೇರಿದಂತೆ ಹಲವು ಸರಣಿಗಳಿಂದ ಹೊರಗುಳಿದಿದ್ದರು.
ಡೆಲ್ಲಿ ಕ್ಯಾಪಿಟಲ್ಸ್‌ನ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಮಾತನಾಡಿ, ‘ಈ ಬಾರಿ ಯಾವುದೇ ತಪ್ಪು ಮಾಡುವುದಿಲ್ಲ. ಈ ವರ್ಷ ನಾವು ಉತ್ತಮ ತಂಡವನ್ನು ಹೊಂದಿದ್ದೇವೆ. ನಮ್ಮ ಸಿದ್ಧತೆಗಳು ಸಂಪೂರ್ಣವಾಗಿ ಪರಿಪೂರ್ಣವಾಗಿವೆ. ನಾವು ನಮ್ಮ ತಂಡವನ್ನು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರಿಸಲು ಬಯಸುತ್ತೇವೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ನಾಳಿನ ಪಂದ್ಯದಲ್ಲಿ ನಾವೇ ಗೆಲುವು ಸಾಧಿಸುತ್ತೇವೆ ಎಂಬ ವಿಶ್ವಾಸವೂ ನಮಗಿದೆ’ ಎಂದಿದ್ದಾರೆ.
ಪಂತ್ ಕುರಿತು ಮಾತನಾಡಿದ ಪಾಂಟಿಂಗ್, ‘ಇದು ನಿಜವಾಗಿಯೂ ವರ್ಷದ ರೋಚಕ ಸಮಯ ಎಂದೇ ಹೇಳಬಹುದು. ರಿಷಭ್ ಪಂತ್ ಅವರು ನಮ್ಮ ತಂಡದ ನಾಯಕರಾಗಿ ವಾಪಸ್ ಆಗಿರುವುದು ಸಂತಸ ಮೂಡಿಸಿದೆ. ರೋಮಾಂಚನಕಾರಿಯಾಗಿರುವ ಪಂತ್ ಅವರು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸ್‌ನ ಹೃದಯ ಬಡಿತವಾಗಿದ್ದಾರೆ. ಅವರ ಉಪಸ್ಥಿತಿಯಲ್ಲಿ ತಂಡ ಹೆಚ್ಚು ಬಲಿಷ್ಠವಾಗಿರಲಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೊಹಾಲಿಯಲ್ಲಿ ನಡೆಯಲಿರುವ ಐಪಿಎಲ್ ಟೂರ್ನಿಯ ಎರಡನೇ ಪಂದ್ಯದಲ್ಲಿ ನಾಳೆ (ಶನಿವಾರ) ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗಾಗಿ ಹೋರಾಟ ನಡೆಸಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.