ADVERTISEMENT

ಎರಡನೇ ಟೆಸ್ಟ್‌ ಪಂದ್ಯ: ಮತ್ತೆ ಬ್ಯಾಟಿಂಗ್ ವೈಫಲ್ಯ ಭಾರತ 'ಎ' ತಂಡ

ಪಿಟಿಐ
Published 7 ನವೆಂಬರ್ 2024, 13:50 IST
Last Updated 7 ನವೆಂಬರ್ 2024, 13:50 IST
<div class="paragraphs"><p>ಕ್ರಿಕೆಟ್‌ (ಪ್ರಾತಿನಿಧಿಕ ಚಿತ್ರ)</p></div>

ಕ್ರಿಕೆಟ್‌ (ಪ್ರಾತಿನಿಧಿಕ ಚಿತ್ರ)

   

ಮೆಲ್ಬರ್ನ್: ಒಂದೆಡೆ ವಿಕೆಟ್‌ಗಳು ಉರುಳುತ್ತಿದ್ದರೂ, ಇನ್ನೊಂದೆಡೆ ಕೌಶಲ ಮತ್ತು ಸಂಯಮದ ಆಟ ಪ್ರದರ್ಶಿಸಿದ ಧ್ರುವ್ ಜುರೇಲ್, ಭಾರತ ಎ ತಂಡದ ಕಳಪೆ ಬ್ಯಾಟಿಂಗ್ ನಡುವೆ ಬೆಳ್ಳಿರೇಖೆಯಂತೆ ಕಂಡರು. ಮೆಲ್ಬನ್‌ ಕ್ರಿಕೆಟ್‌ ಮೈದಾನದಲ್ಲಿ ಗುರುವಾರ ಆರಂಭವಾದ ಎರಡನೇ ‘ಟೆಸ್ಟ್‌’ ಪಂದ್ಯದಲ್ಲಿ ಭಾರತ ಎ 57.1 ಓವರುಗಳಲ್ಲಿ 161 ರನ್‌ಗಳಿಗೆ ಉರುಳಿತು.

ದಿನದಾಟದ ಕೊನೆಗೆ ಆಸ್ಟ್ರೇಲಿಯಾ 2 ವಿಕೆಟ್‌ಗೆ 52 ರನ್ ಗಳಿಸಿದೆ.

ADVERTISEMENT

ಮೂರನೇ ಓವರ್‌ನಲ್ಲಿ ಕ್ರೀಸಿಗಳಿದ ಜುರಲ್ (80, 161ಎ) ಅವರು ಭಾರತ ತಂಡದ ಅರ್ಧದಷ್ಟು ಮೊತ್ತ ಗಳಿಸಿದರು. ಅವರನ್ನು ಬಿಟ್ಟರೆ 20 ರನ್‌ಗಳಿಗಿಂತ ಹೆಚ್ಚು ಗಳಿಸಿದವರು ಕನ್ನಡಿಗ ದೇವದತ್ತ ಪಡಿಕ್ಕಲ್ ಮಾತ್ರ.

ಇನಿಂಗ್ಸ್ ಆರಂಭಿಸಿದ ಕೆ.ಎಲ್‌.ರಾಹುಲ್ (4), ಸ್ಕಾಟ್‌ ಬೋಲ್ಯಾಂಡ್‌ ಬೌಲಿಂಗ್‌ನಲ್ಲಿ ನೇರವಾಗಿ ಬಂದ ಎಸೆತವನ್ನು ವಿಕೆಟ್‌ ಕೀಪರ್‌ ಪಿಯರ್ಸನ್‌ಗೆ ಆಡಿದರು. ಅವಕಾಶವಂಚಿತ ಬೌಲರ್ ಮೈಕೆಲ್ ನೆಸೆರ್‌ (12.2 ಓವರುಗಳಲ್ಲಿ 27ಕ್ಕೆ4) ಆರಂಭದಲ್ಲೇ ನೀಡಿದ ಹೊಡೆತದಿಂದ ಭಾರತ ‘ಎ’ ಚೇತರಿಸಲಿಲ್ಲ. ಅವರು ಮೊದಲ ಐದು ವಿಕೆಟ್‌ಗಳಲ್ಲಿ ನಾಲ್ಕನ್ನು ಪಡೆದರು.

ಅಭಿಮನ್ಯು ಈಶ್ವರನ್ (0) ಮತ್ತೆ ವಿಫಲರಾದರು. ಶಾರ್ಟ್‌ಪಿಚ್‌ ಎಸೆತವನ್ನು ಆಡಲು ಹೋಗಿ ಗಲಿಯಲ್ಲಿ ಕ್ಯಾಚಿತ್ತರು. ಲಯದಲ್ಲಿದ್ದ ಸಾಯಿ ಸುದರ್ಶನ್ ಕೂಡ ಬೇಗ ನಿರ್ಗಮಿಸಿದ್ದರು. ನಾಯಕ ಋತುರಾಜ್ ಗಾಯಕವಾಡ್‌ ಸಹ, ಸುದರ್ಶನ್ ಅವರಂತೆ ನೇಸರ್‌ ಬೌಲಿಂಗ್‌ನಲ್ಲಿ ಸ್ಲಿಪ್‌ನಲ್ಲಿ ಕ್ಯಾಚ್‌ ನೀಡಿದರು.

ಶಾಂತಚಿತ್ತದಿಂದ ಆಡಿದ ಜುರೆಲ್‌ ವಿಕೆಟ್‌ ಕಾಪಾಡಿಕೊಂಡರು. ಬೌನ್ಸ್‌ ಆಗುತ್ತಿದ್ದ ಪಿಚ್‌ನಲ್ಲಿ ಚೆಂಡಿನ ಲೆಂತ್ ಗುರುತಿಸಿ ಆಡಿದರು. ರಿಷಭ್ ಪಂತ್ ನಂತರ ಎರಡನೇ ವಿಕೆಟ್ ಕೀಪರ್ ಆಗಿರುವ ಜುರೆಲ್‌, ಈಗ ಸರ್ಫರಾಜ್‌ ಅವರಿಗಿಂತ ಉಪಯುಕ್ತ ಎನಿಸುವ ಸೂಚನೆ ನೀಡಿದ್ದಾರೆ.

ಸ್ಕೋರುಗಳು: ಮೊದಲ ಇನಿಂಗ್ಸ್‌: ಭಾರತ ಎ: 57.1 ಓವರುಗಳಲ್ಲಿ 161 (ದೇವದತ್ತ ಪಡಿಕ್ಕಲ್ 26, ಧ್ರುವ್ ಜುರೇಲ್ 80; ಮೈಕೆಲ್ ನೆಸೆರ್‌ 27ಕ್ಕೆ4, ಬ್ಯೂ ವೆಬ್‌ಸ್ಟರ್‌ 19ಕ್ಕೆ3); ಆಸ್ಟ್ರೇಲಿಯಾ ಎ’ 17.1 ಓವರುಗಳಲ್ಲಿ 2 ವಿಕೆಟ್‌ಗೆ 53 (ಮಾರ್ಕಸ್ ಹ್ಯಾರಿಸ್ ಔಟಾಗದೇ 26; ಮುಕೇಶ್ ಕುಮಾರ್ 13ಕ್ಕೆ, ಖಲೀಲ್ ಅಹ್ಮದ್ 18ಕ್ಕೆ1).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.