ಮೆಲ್ಬರ್ನ್: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರನ ಹುದ್ದೆಗೆ ಜಸ್ಟಿನ್ ಲ್ಯಾಂಗರ್ ಶನಿವಾರ ರಾಜೀನಾಮೆ ನೀಡಿದ್ದಾರೆ.
ಆಸ್ಟ್ರೇಲಿಯಾಗೆ ಟ್ವೆಂಟಿ-20 ವಿಶ್ವಕಪ್ ಹಾಗೂ ಪ್ರತಿಷ್ಠಿತ ಆ್ಯಷಸ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ 4-0 ಅಂತರದ ಗೆಲುವಿನಲ್ಲಿ ಲ್ಯಾಂಗರ್ ಮಹತ್ವದ ಪಾತ್ರ ವಹಿಸಿದ್ದರು.
ಲ್ಯಾಂಗರ್ ಅವರ ಒಪ್ಪಂದವನ್ನು ಅಲ್ಪಾವಧಿಗೆ ವಿಸ್ತರಿಸಲು ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧರಿಸಿತ್ತು. ಆದರೆ ಆಫರ್ ತಿರಸ್ಕರಿಸಿರುವ ಲ್ಯಾಂಗರ್ ದಿಢೀರ್ ಆಗಿ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.
ಈ ಕುರಿತು ಕ್ರಿಕೆಟ್ ಆಸ್ಟ್ರೇಲಿಯಾ ಸ್ಪಷ್ಟನೆಯನ್ನು ನೀಡಿದೆ. ಲ್ಯಾಂಗರ್ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ಅಲ್ಪಾವಧಿಗೆ ಲ್ಯಾಂಗರ್ ಒಪ್ಪಂದ ವಿಸ್ತರಿಸಲಾಗಿತ್ತು. ಆದರೆ ಈ ಪ್ರಸ್ತಾಪವನ್ನು ಲ್ಯಾಂಗರ್ ನಿರಾಕರಿಸಿದ್ದಾರೆ ಎಂದು ಹೇಳಿದೆ.
ಲ್ಯಾಂಗರ್ ಅವರಿಂದ ತೆರವಾಗಿರುವ ಹುದ್ದೆಗೆ ಸಹಾಯಕ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ಅವರು ತಾತ್ಕಾಲಿಕವಾಗಿ ನೇಮಕಗೊಂಡಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮುಂಬರುವ ಟ್ವೆಂಟಿ-20 ವಿಶ್ವಕಪ್ ವರೆಗೂ ಲ್ಯಾಂಗರ್ ಒಪ್ಪಂದವನ್ನು ನವೀಕರಿಸಲು ಉದ್ದೇಶವಿರಿಸಲಾಗಿತ್ತು. ಆದರೆ ಲ್ಯಾಂಗರ್ ರಾಜೀನಾಮೆಯೊಂದಿಗೆ ಆಸ್ಟ್ರೇಲಿಯಾ ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿದೆ.
2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ನಡೆದ ಬಾಲ್ ಟ್ಯಾಂಪರಿಂಗ್ ವಿವಾದದ ಬಳಿಕ ಲ್ಯಾಂಗರ್ ಕೋಚ್ ಹುದ್ದೆಯನ್ನು ವಹಿಸಿದ್ದರು. ಯುವ ಆಟಗಾರರಿಗೆ ಮಾರ್ಗದರ್ಶನ ನೀಡುವಲ್ಲಿ ಹಾಗೂ ಪ್ರಬಲ ತಂಡವನ್ನು ಕಟ್ಟಿ ಬೆಳೆಸುವಲ್ಲಿ ಲ್ಯಾಂಗರ್ ಪಾತ್ರ ನಿರ್ಣಾಯಕವೆನಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.