ಕ್ರೈಸ್ಟ್‌ಚರ್ಚ್ (ನ್ಯೂಜಿಲೆಂಡ್): ಟೆಸ್ಟ್ ಕ್ರಿಕೆಟ್‌ನಲ್ಲಿ ನೂರನೇ ಪಂದ್ಯವಾಡಲು ಸಜ್ಜಾಗಿರುವ ನ್ಯೂಜಿಲೆಂಡ್ ತಂಡದ ಸ್ಟಾರ್ ಆಟಗಾರ ಕೇನ್ ವಿಲಿಯಮ್ಸನ್, 2010ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಅವರಂತಹ ದಿಗ್ಗಜರ ಎದುರು ಪದಾರ್ಪಣೆ ಮಾಡಿದ್ದೆ. ಆಗ ಮೂಡಿದ್ದಂತಹ ವಿಶೇಷ ಭಾವನೆಯೇ ಈಗಲೂ ಮೂಡುತ್ತಿದೆ ಎಂದು ಹೇಳಿಕೊಂಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯವು ಕ್ರೈಸ್ಟ್‌ಚರ್ಚ್‌ನಲ್ಲಿ ಶುಕ್ರವಾರದಿಂದ ಆರಂಭವಾಗಲಿದೆ. ಈ ಪಂದ್ಯವು ಕೇನ್ ಪಾಲಿಗೆ 100ನೇಯದ್ದು. ವೆಲ್ಲಿಂಗ್ಟ್‌ನಲ್ಲಿ ನಡೆದಿದ್ದ ಮೊದಲ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಸೊನ್ನೆ ಸುತ್ತಿದ್ದ ಅವರು, ಎರಡನೇ ಇನಿಂಗ್ಸ್‌ನಲ್ಲಿ ಕೇವಲ 9 ರನ್ ಗಳಿಸಿದ್ದರು.
33 ವರ್ಷದ ಕೇನ್, ತಮ್ಮ ಪದಾರ್ಪಣೆ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿ ಗಮನ ಸೆಳೆದಿದ್ದರು. ಅಂತಹದೇ ಪ್ರದರ್ಶನವನ್ನು 100ನೇ ಪಂದ್ಯದಲ್ಲೂ ನೀಡುವರೇ ಎಂಬುದನ್ನು ಕಾದು ನೋಡಬೇಕು.
ಮಹತ್ವದ ಪಂದ್ಯಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿರುವ ಕೇನ್, 'ಕ್ರೀಡಾಂಗಣದತ್ತ ನಡೆದುಕೊಂಡು ಹೋಗುತ್ತಾ, ಸುತ್ತಲೂ ನೋಡಿದ್ದೆ. ನನ್ನ ಹೀರೋಗಳನ್ನು ಅಲ್ಲಿ ನೋಡಿದ್ದು ಈಗಲೂ ನೆನಪಿದೆ. ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್, ರಾಹುಲ್ ದ್ರಾವಿಡ್ ಅವರು ಅಲ್ಲಿದ್ದರು. 'ನಾನು ಹೇಗೆ ಇಲ್ಲಿಗೆ ಬಂದೆ?' ಎನಿಸಿತ್ತು. ಅವಾಸ್ತವಿಕವಾದ ಭಾವ ನನ್ನನ್ನು ಆವರಿಸಿತ್ತು. ಸಾಧ್ಯವಾದರೆ ಎದುರಾಳಿ ತಂಡದ ಡ್ರೆಸ್ಸಿಂಗ್ ಕೊಠಡಿಗೆ ಹೋಗಬೇಕು ಮತ್ತು ಅವರೊಂದಿಗೆ ಮಾತನಾಡಬೇಕು ಎಂದು ತುಡಿಯುತ್ತಿದ್ದೆ' ಎಂದು ನೆನಪಿಸಿಕೊಂಡಿದ್ದಾರೆ.
ಆ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ವೀರೇಂದ್ರ ಸೆಹ್ವಾಗ್ (173 ರನ್) ಹಾಗೂ ದ್ರಾವಿಡ್ (104 ರನ್) ಶತಕ ಬಾರಿಸಿದ್ದರು. ತೆಂಡೂಲ್ಕರ್ 40 ರನ್ ಗಳಿಸಿದ್ದರು. ಭಾರತ ತಂಡದ ಮೊತ್ತ 487 ರನ್ ಆಗಿತ್ತು.
ಇದಕ್ಕುತ್ತರವಾಗಿ ದಿಟ್ಟ ಆಟವಾಡಿದ್ದ ನ್ಯೂಜಿಲೆಂಡ್ 459 ರನ್ ಗಳಿಸಿ ಆಲೌಟ್ ಆಗಿತ್ತು. ಜೆಸ್ಸಿ ರೈಡರ್ (103 ರನ್) ಹಾಗೂ ಕೇನ್ ವಿಲಿಯಮ್ಸನ್ (131 ರನ್) ಶತಕ ಸಿಡಿಸಿ ನೆರವಾಗಿದ್ದರು. ಈ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತ್ತು.
ಇದುವರೆಗೆ 99 ಟೆಸ್ಟ್ ಆಡಿರುವ ಕೇನ್, ಈಗಲೂ ಕಲಿಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
174 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿರುವ ಅವರು 32 ಶತಕ, 6 ದ್ವಿಶತಕ ಸಹಿತ 8,675 ರನ್ ಗಳಿಸಿದ್ದಾರೆ. ಟೆಸ್ಟ್ ಮಾದರಿಯಲ್ಲಿ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನದಲ್ಲಿರುವ ಅವರ ಬ್ಯಾಟಿಂಗ್ ಸರಾಸರಿ 55.25.
ಕೇನ್ ನಾಯಕತ್ವದಲ್ಲಿ ನ್ಯೂಜಿಲೆಂಡ್ ತಂಡವು 2021ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಗೆದ್ದ ಸಾಧನೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.