ಬೆಂಗಳೂರು: ‘ನಾನು ಉತ್ತಮ ಲಯದಲ್ಲಿ ಆಡುವಾಗಲೇ ದೊಡ್ಡ ಗಾಯವಾಯಿತು. ಈಗ ಅದು ಗುಣಮುಖವೂ ಆಗಿದೆ. ಆದರೆ ಆ ನೋವು ಮರೆಯಲು ದೊಡ್ಡ ಸಾಧನೆ ಮಾಡುವ ಛಲವಿದೆ. ಅದಕ್ಕಾಗಿ ಒಂದು ಅವಕಾಶ ಕಾಯುತ್ತಿರುವೆ’–
ಕರ್ನಾಟಕ ಕ್ರಿಕೆಟ್ ತಂಡದ ಭರವಸೆಯ ಬೌಲರ್ ಎಂ. ವೆಂಕಟೇಶ್ ಅವರ ವಿಶ್ವಾಸದ ನುಡಿಗಳಿವು. 2023ರ ರಣಜಿ ಋತುವಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪದಾರ್ಪಣೆ ಮಾಡಿದ್ದ ಮಧ್ಯಮವೇಗಿ ವೆಂಕಟೇಶ್ ಅವರು ಐದು ವಿಕೆಟ್ ಗೊಂಚಲು ಗಳಿಸಿದ್ದರು. ವಿದ್ವತ್ ಕಾವೇರಪ್ಪ, ವೈಶಾಖ ವಿಜಯಕುಮಾರ್, ವಿ. ಕೌಶಿಕ್ ಅವರೊಂದಿಗೆ ಕರ್ನಾಟಕದ ವೇಗದ ವಿಭಾಗದ ಶಕ್ತಿಯನ್ನು ದುಪ್ಟಟ್ಟು ಮಾಡುವ ಭರವಸೆ ಮೂಡಿಸಿದ್ದರು. ನಂತರದ ಕೆಲವು ಲೀಗ್ ಟೂರ್ನಿಗಳಲ್ಲಿಯೂ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿಯೂ ಮಿಂಚಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನೆಟ್ ಬೌಲರ್ ಆಗಿಯೂ ಕಾರ್ಯನಿರ್ವಹಿಸಿ ಬಂದರು.
ಅವರ ಬೆಳವಣಿಗೆ ಏರುಮುಖವಾಗಿದ್ದ ಸಂದರ್ಭದಲ್ಲಿಯೇ ದುರಾದೃಷ್ಟ ಕಾಡಿತು. ಕಳೆದ ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವಾಗ ಅವರ ಮುಖಕ್ಕೆ ಚೆಂಡು ಅಪ್ಪಳಿಸಿ ಗಾಯಗೊಂಡರು. ಪ್ಲಾಸ್ಟಿಕ್ ಸರ್ಜರಿ ಕೂಡ ಆಯಿತು. ಆಗ ಆದ ದೈಹಿಕ ಮತ್ತು ಮಾನಸಿಕ ಆಘಾತದಿಂದ ಚೇತರಿಸಿಕೊಂಡಿರುವ ಅವರು ಈಗ ಪ್ರಸ್ತುತ ರಣಜಿ ಋತುವಿನಲ್ಲಿ ಕರ್ನಾಟಕ ಬಳಗದಲ್ಲಿದ್ದಾರೆ. ತಮ್ಮ ದೈಹಿಕ ಸಾಮರ್ಥ್ಯದ ‘ಪರೀಕ್ಷೆ’ ಮಾಡಿಕೊಳ್ಳುತ್ತಿದ್ದಾರೆ. ಹಾಗೆಯೇ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಅವರು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡ ಮನದ ಮಾತುಗಳ ಸಾರಾಂಶ ಇಲ್ಲಿದೆ.
‘ಆಗಿದ್ದು ಆಗಿಹೋಯಿತು. ಖಾಲಿ ಕೂತಾಗ ಆ ನೆನಪು ಕಾಡುತ್ತದೆ. ಆದ್ದರಿಂದ ನಮ್ಮನ್ನು ನಾವು ಹೆಚ್ಚು ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಉತ್ತಮವಾಗಿ ಆಡುವಾಗಲೇ ಗಾಯದಿಂದ ತಡೆಬಿದ್ದಾಗ ಬೇಸರವಾಯಿತು. ಈಗ ಚೇತರಿಸಿಕೊಂಡಿರುವೆ. ನಾನು ಗಾಯಗೊಂಡಾಗ ಮೈಸೂರು ವಾರಿಯರ್ಸ್ ತಂಡ ಮಾಲೀಕರು ಬಹಳ ಕಾಳಜಿಯಿಂದ ನೋಡಿಕೊಂಡರು. ಕೆಎಸ್‌ಸಿಎ ಬಹಳಷ್ಟು ಬೆಂಬಲಿಸಿತು. ನಾನು ಪಂದ್ಯದ ನಾಲ್ಕು ದಿನವೂ ಕಣದಲ್ಲಿರುವ ಸಾಮರ್ಥ್ಯ ಬೇಕು’ ಎಂದು ಹೇಳುತ್ತಾರೆ
‘19 ವರ್ಷದೊಳಗಿನವ ವಿಭಾಗದವರೆಗೂ ನಾನು ಆರಂಭಿಕ ಬ್ಯಾಟರ್ ಹಾಗೂ ಸಾಂದರ್ಭಿಕ ಬೌಲರ್ ಆಗಿದ್ದೆ. ಕೋಚ್ ಆಗಿದ್ದ ದೀಪಕ್ ಚೌಗುಲೆ, ಲಿಯಾನ್ ಖಾನ್ ಮತ್ತು ಶಾವೀರ್ ಅವರ ಮಾರ್ಗದರ್ಶನದಿಂದ ಫುಲ್ ಟೈಮ್ ಬೌಲರ್ ಆದೆ. ಪ್ರತಿ ಗಂಟೆಗೆ 143 ಕಿ.ಮೀ ವೇಗದಲ್ಲಿ ಎಸೆತಗಳನ್ನು ಹಾಕುತ್ತೇನೆ. ಬೆಂಗಳೂರಿಗೆ ಬಂದ ನಂತರ ನನ್ನ ಜೀವನ ಬದಲಾಯಿತು. ರಣಜಿ ಪದಾರ್ಪಣೆ ಪಂದ್ಯದಲ್ಲಿ 5 ವಿಕೆಟ್ ಗೊಂಚಲು ಗಳಿಸಿದ್ದು ಸ್ಮರಣೀಯ. ಪೇಸ್ ವೇರಿಯೇಷನ್ ನನ್ನ ನೈಜ ಸಾಮರ್ಥ್ಯ’ ಎಂದರು.
‘ನಮ್ಮದು ಮಧ್ಯಮವರ್ಗದ ಕುಟುಂಬ. ಅಪ್ಪ ಮುರಳೀಧರ್ ಅವರು ಎಂಜಿನಿಯರ್ ಆಗಿದ್ದಾರೆ. ಕುಟುಂಬದಲ್ಲಿ ಅಪ್ಪನಿಗೆ ಕ್ರಿಕೆಟ್ ಪ್ರೀತಿ ಅಪಾರ. ಅವರ ಆಸಕ್ತಿಯಿಂದಾಗಿ ನಾನು ಕ್ರಿಕೆಟಿಗನಾದೆ. ಅವರು ನೀಡಿದ ಪ್ರೋತ್ಸಾಹ ಅಮೂಲ್ಯವಾದದ್ದು. ನಮ್ಮ ತಾಯಿ ದ್ರಾಕ್ಷಾಯಿಣಿ ಅವರು ಶಾಸ್ತ್ರೀಯ ನೃತ್ಯ ಕಲಾವಿದೆ. ಅಜ್ಜಿ ಶಾಸ್ತ್ರೀಯ ಸಂಗೀತಗಾರರು. ನನ್ನ ತಮ್ಮ ಕೂಡ ಒಳ್ಳೆಯ ಗಾಯಕ. ಈಗಾಗಲೇ ಹಲವು ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದಾರೆ. ನನಗೂ ಸಂಗೀತ ಬರುತ್ತದೆ. ಅವರೆಲ್ಲರೂ ನಾನು ಕ್ರಿಕೆಟಿಗನಾಗಲು ಬೆಂಬಲವಾಗಿ ನಿಂತಿದ್ದಾರೆ’ ಎಂದು ಬಿ.ಕಾಂ ಓದುತ್ತಿರುವ ವೆಂಕಟೇಶ್ ಹೇಳಿದರು.
‘ನಾನು ಗಾಯಗೊಂಡು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯಾದಾಗ ಮೈಸೂರು ವಾರಿಯರ್ಸ್ ತಂಡದ ಮಾಲೀಕರಾದ ಅರ್ಜುನ್ ರಂಗಾ ಮತ್ತು ಅವರ ಪತ್ನಿಯು ಬಹಳ ಕಾಳಜಿಯಿಂದ ನೋಡಿಕೊಂಡರು. ಎಲ್ಲ ರೀತಿಯಿಂದಲೂ ನೆರವು ನೀಡಿದರು’ ಎಂದು ಸ್ಮರಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.