ಮೈಸೂರು: ಪ್ರಸಕ್ತ ರಣಜಿ ಕ್ರಿಕೆಟ್ ಋತುವಿನಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿರುವ ಕರ್ನಾಟಕ ತಂಡ ಇಲ್ಲಿನ ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ಬುಧವಾರದಿಂದ ನಡೆಯಲಿರುವ ಪಂದ್ಯದಲ್ಲಿ ಮಹಾರಾಷ್ಟ್ರ ತಂಡವನ್ನು ಎದುರಿಸಲಿದೆ.
ಕರ್ನಾಟಕ ತಂಡ ನಾಗಪುರದಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ವಿದರ್ಭ ವಿರುದ್ಧ ಮತ್ತು ಬೆಳಗಾವಿಯಲ್ಲಿ ನಡೆದಿದ್ದ ಎರಡನೇ ಪಂದ್ಯದಲ್ಲಿ ಮುಂಬೈ ಎದುರು ಡ್ರಾ ಸಾಧಿಸಿತ್ತು. ಆದರೆ ಎರಡೂ ಪಂದ್ಯಗಳಲ್ಲಿ ಮೊದಲ ಇನಿಂಗ್ಸ್ ಮುನ್ನಡೆ ಪಡೆದಿದ್ದರಿಂದ ಒಟ್ಟು ಆರು ಪಾಯಿಂಟ್ ಕಲೆಹಾಕಿದೆ.
ಮತ್ತೊಂದೆಡೆ ಮಹಾರಾಷ್ಟ್ರ ತಂಡ ಕೂಡಾ ತಾನಾಡಿದ ಎರಡೂ ಪಂದ್ಯಗಳನ್ನು ಡ್ರಾ ಮಾಡಿಕೊಂಡು ಮೈಸೂರಿಗೆ ಬಂದಿದೆ. ಉಭಯ ತಂಡಗಳು ಮೊದಲ ಗೆಲುವಿಗಾಗಿ ಪೂರ್ಣ ಸಾಮರ್ಥ್ಯದೊಂದಿಗೆ ಹೋರಾಡಲಿದ್ದು, ಗ್ಲೇಡ್ಸ್ ಕ್ರೀಡಾಂಗಣದಲ್ಲಿ ತುರುಸಿನ ಪೈಪೋಟಿ ನಿರೀಕ್ಷಿಸಲಾಗಿದೆ.
ಬದಲಾವಣೆ ಸಾಧ್ಯತೆ: ರಾಜ್ಯ ತಂಡ ಅಂತಿಮ ಇಲೆವೆನ್‌ನಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡು ಕಣಕ್ಕಿಳಿಯಲಿದೆ. ಮುಂಬೈ ಎದುರಿನ ಪಂದ್ಯದಲ್ಲಿ ಬೆನ್ನುನೋವಿನ ಕಾರಣ ಹೊರಗುಳಿದಿದ್ದ ನಾಯಕ ಆರ್.ವಿನಯ್ ಕುಮಾರ್ ಅವರು ಫಿಟ್‌ನೆಸ್ ಮರಳಿ ಪಡೆದುಕೊಂಡಿದ್ದು, ಕಣಕ್ಕಿಳಿಯಲಿದ್ದಾರೆ.
ವಿನಯ್ ಆಡಲಿರುವುದರಿಂದ ರೋನಿತ್ ಮೋರೆ ಅಥವಾ ಪ್ರಸಿದ್ಧ ಕೃಷ್ಣ ಅವರಿಗೆ ಆಡುವ ಅವಕಾಶ ಕೈತಪ್ಪಲಿದೆ. ವಿನಯ್ ಅನುಪಸ್ಥಿತಿಯಲ್ಲಿ ಮುಂಬೈ ವಿರುದ್ಧ ಆಡಿದ್ದ ರೋನಿತ್ ಐದು ವಿಕೆಟ್ ಪಡೆದು ಮಿಂಚಿದ್ದರು.
‘ಕಳೆದ ಪಂದ್ಯದಲ್ಲಿ ರೋನಿತ್ ಉತ್ತಮವಾಗಿ ಆಡಿದ್ದರು. ಇಬ್ಬರಲ್ಲಿ ಒಬ್ಬರನ್ನು ಹೊರಗಿಡಬೇಕಾದ ಕಠಿಣ ಪರಿಸ್ಥಿತಿ ನಮ್ಮ ಮುಂದಿದೆ’ ಎಂದು ವಿನಯ್ ಪ್ರತಿಕ್ರಿಯಿಸಿದ್ದಾರೆ.
ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ ಅವರನ್ನು ತಂಡದಿಂದ ಕೈಬಿಡಲಾಗಿದೆ. ಅವರ ಬದಲು ತಂಡವನ್ನು ಸೇರಿಕೊಂಡಿರುವ ದೇವದತ್ತ ಪಡಿಕ್ಕಲ್ ಅಂತಿಮ ಇಲೆವನ್‌ನಲ್ಲಿ ಅವಕಾಶ ಗಿಟ್ಟಿಸುವರೇ ಎಂಬುದನ್ನು ನೋಡಬೇಕು.
ದೇವದತ್ತ, ಅಭಿಷೇಕ್ ರೆಡ್ಡಿ, ಲಿಯಾನ್ ಖಾನ್ ಮತ್ತು ಪವನ್ ದೇಶಪಾಂಡೆ ಅವರಲ್ಲಿ ಇಬ್ಬರಿಗೆ ಅವಕಾಶ ಲಭಿಸಲಿದೆ ಎಂದು ವಿನಯ್ ಮಂಗಳವಾರ ಹೇಳಿದರು.
ರಾಜ್ಯ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳು ರಾಷ್ಟ್ರೀಯ ತಂಡ ಮತ್ತು ಭಾರತ ‘ಎ’ ತಂಡಕ್ಕೆ ಆಡುತ್ತಿದ್ದಾರೆ. ಆದ್ದರಿಂದ ಈ ಬಾರಿ ಹೆಚ್ಚಿನ ಯುವ ಆಟಗಾರರಿಗೆ ಅವಕಾಶ ಲಭಿಸಿದೆ. ಕಳೆದ ಪಂದ್ಯಗಳಲ್ಲಿ ಶತಕ ಗಳಿಸಿದ್ದ ಕೆ.ವಿ.ಸಿದ್ದಾರ್ಥ್, ಡಿ.ನಿಶ್ಚಲ್ ಮತ್ತು ಬಿ.ಆರ್.ಶರತ್ ಅವರಿಂದ ತಂಡ ಉತ್ತಮ ಪ್ರದರ್ಶನ ನಿರೀಕ್ಷಿಸುತ್ತಿದೆ.
ವಿನಯ್, ಅಭಿಮನ್ಯು ಮಿಥುನ್, ಶ್ರೇಯಸ್ ಗೋಪಾಲ್ ಮತ್ತು ಜೆ.ಸುಚಿತ್ ಅವರನ್ನೊಳಗೊಂಡ ಬೌಲಿಂಗ್ ವಿಭಾಗ ಮಿಂಚಿದರೆ ಕರ್ನಾಟಕಕ್ಕೆ ಋತುವಿನ ಮೊದಲ ಗೆಲುವು ಪಡೆಯುವುದು ಕಷ್ಟವಾಗದು.
ಯುವ ಆಟಗಾರರು ಬಲ: ಮತ್ತೊಂದೆಡೆ ಯುವ ಆಟಗಾರರನ್ನು ಒಳಗೊಂಡಿರುವ ಮಹಾರಾಷ್ಟ್ರ ತಂಡ ಆತಿಥೇಯರಿಗೆ ತಕ್ಕ ಪೈಪೋಟಿ ನೀಡಲು ಸಜ್ಜಾಗಿದೆ. ಕಳೆದ ಎರಡು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದ ಅಂಕಿತ್ ಭಾವ್ನೆ ಈ ಪಂದ್ಯದಲ್ಲಿ ಆಡುತ್ತಿಲ್ಲ. ಅವರ ಬದಲು ರಾಹುಲ್ ತ್ರಿಪಾಠಿ ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳುವರು.
ಬ್ಯಾಟಿಂಗ್‌ನಲ್ಲಿ ರುತುರಾಜ್ ಗಾಯಕ್ವಾಡ್, ಚಿರಾಗ್ ಖುರಾನಾ ಅವರನ್ನು ನೆಚ್ಚಿಕೊಂಡಿರುವ ಮಹಾರಾಷ್ಟ್ರ ತಂಡದವರು ಕರ್ನಾಟಕದ ಬೌಲಿಂಗ್ ದಾಳಿಯನ್ನು ಎಷ್ಟರಮಟ್ಟಿಗೆ ಎದುರಿಸಿ ನಿಲ್ಲುವರು ಎಂಬುದನ್ನು ನೋಡಬೇಕು.
**
ಮಹಾರಾಷ್ಟ್ರ ತಂಡ ಬಲಿಷ್ಠವಾಗಿದೆ. ನಮ್ಮ ವಿರುದ್ಧ ಪ್ರತಿ ಬಾರಿಯೂ ಅವರು ಉತ್ತಮವಾಗಿ ಆಡಿದ್ದಾರೆ. ಯಾವ ತಂಡವನ್ನೂ ಲಘುವಾಗಿ ತೆಗೆದುಕೊಂಡಿಲ್ಲ.
–ಆರ್.ವಿನಯ್ ಕುಮಾರ್ ,ಕರ್ನಾಟಕ ತಂಡದ ನಾಯಕ
**
ಪಂದ್ಯದ ಆರಂಭ: ಬೆಳಿಗ್ಗೆ 9.30ಕ್ಕೆ
**
ಸ್ಪೋರ್ಟಿಂಗ್ ಪಿಚ್ ಸಿದ್ಧ
ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ಸ್ಪೋರ್ಟಿಂಗ್ ಪಿಚ್ ಸಿದ್ಧಪಡಿಸಲಾಗಿದ್ದು, ಈ ಪಂದ್ಯದಲ್ಲಿ ಸ್ಪಷ್ಟ ಫಲಿತಾಂಶವನ್ನು ನಿರೀಕ್ಷಿಸಬಹುದು ಎಂಬುದು ಬಿಸಿಸಿಐ ಕ್ಯುರೇಟರ್ ವೆಂಕಟ್ ಮತ್ತು ಸ್ಥಳೀಯ ಕ್ಯುರೇಟರ್ ಎಸ್.ಚಂದ್ರಶೇಖರ್ ಅವರ ಹೇಳಿಕೆ.
ಪಿಚ್ ಮೊದಲ ಎರಡು ದಿನ ವೇಗಿಗಳು ಮತ್ತು ಬ್ಯಾಟ್ಸ್‌ಮನ್‌ಗಳಿಗೆ ಸಮಾನ ರೀತಿಯಲ್ಲಿ ನೆರವು ನೀಡುವ ಸಾಧ್ಯತೆಯಿದ್ದು, ಕೊನೆಯಲ್ಲಿ ಸ್ಪಿನ್ನರ್‌ಗಳು ಮೇಲುಗೈ ಸಾಧಿಸಬಹುದು.
ಕರ್ನಾಟಕ ತಂಡ ಕಳೆದ ಋತುವಿನಲ್ಲಿ ಇಲ್ಲಿ ನಡೆದಿದ್ದ ಪಂದ್ಯದಲ್ಲಿ ಅಸ್ಸಾಂ ವಿರುದ್ಧ ಇನಿಂಗ್ಸ್ ಹಾಗೂ 121 ರನ್‌ಗಳ ಜಯ ಸಾಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.