ಬೆಂಗಳೂರು: ಕರ್ನಾಟಕ ಕ್ರಿಕೆಟ್ ತಂಡದ ಮೂವರು ಪ್ರಮುಖ ಆಟಗಾರರು ನೆರೆರಾಜ್ಯಗಳ ತಂಡಗಳಿಗೆ ವಲಸೆ ಹೋಗಲಿದ್ದಾರೆ.
ಲೆಗ್‌ಸ್ಪಿನ್ ಆಲ್‌ರೌಂಡರ್ ಶ್ರೇಯಸ್ ಗೋಪಾಲ್, ಬ್ಯಾಟರ್‌ಗಳಾದ ಕೆ.ವಿ. ಸಿದ್ಧಾರ್ಥ್ ಮತ್ತು ರೋಹನ್ ಕದಂ ಅವರು ತವರು ತಂಡವನ್ನು ತೊರೆಯಲಿದ್ದಾರೆ. ಅವರಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ನಿರಾಕ್ಷೇಪಣ ಪತ್ರವನ್ನೂ ನೀಡಿದೆ ಎಂದು ವಿಶ್ವಸನೀಯ ಮೂಲಗಳು ’ಪ್ರಜಾವಾಣಿ‘ಗೆ ಖಚಿತಪಡಿಸಿವೆ.
ಶ್ರೇಯಸ್ ಗೋಪಾಲ್ ಅವರು ಕೇರಳ ತಂಡಕ್ಕೆ ಸೇರ್ಪಡೆಯಾಗಲಿದ್ದು ಒಪ್ಪಂದ ಮಾಡಿಕೊಂಡಿದ್ದಾರೆನ್ನಲಾಗಿದೆ. ಸಿದ್ಧಾರ್ಥ್ ಮತ್ತು ರೋಹನ್ ಅವರು ಗೋವಾ ತಂಡವನ್ನು ಸೇರಿಕೊಳ್ಳುವರು. ಇದೇ ದೇಶಿ ಋತುವಿನಿಂದ ಅವರು ಆ ತಂಡಗಳಲ್ಲಿ ಆಡಲಿದ್ದಾರೆಂದು ಮೂಲಗಳು ಸ್ಪಷ್ಟಪಡಿಸಿವೆ.
ರಾಜ್ಯದ ಇನ್ನೊಬ್ಬ ಪ್ರಮುಖ ಬ್ಯಾಟರ್ ಕೂಡ ವಿದರ್ಭ ತಂಡಕ್ಕೆ ವಲಸೆ ಹೋಗಲು ಎನ್‌ಒಸಿಗಾಗಿ ಕಾಯುತ್ತಿದ್ದಾರೆಂದೂ ತಿಳಿದುಬಂದಿದೆ.
ಕಳೆದ ರಣಜಿ ಋತುವಿನಲ್ಲಿ ಒಂಬತ್ತು ಪಂದ್ಯಗಳಲ್ಲಿಯೂ ಆಡುವ ಅವಕಾಶವನ್ನು ಶ್ರೇಯಸ್ ಪಡೆದಿದ್ದರು. ಆದರೆ, ಅವರಿಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಎಂಟು ಪಂದ್ಯಗಳ ಪೈಕಿ ಕೇವಲ ನಾಲ್ಕು ಪಂದ್ಯಗಳಲ್ಲಿ ಆಡಿಸಲಾಗಿತ್ತು. ರಣಜಿ ಟ್ರೋಫಿ ಟೂರ್ನಿಯಲ್ಲಿ ಹೆಚ್ಚು ಓವರ್‌ಗಳ ಬೌಲಿಂಗ್ ಮಾಡಲೂ ಅವಕಾಶ ಲಭಿಸಿರಲಿಲ್ಲ.
29 ವರ್ಷದ ಶ್ರೇಯಸ್ ಕರ್ನಾಟಕದ ಉತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರು. 76 ಪ್ರಥಮದರ್ಜೆ ಪಂದ್ಯಗಳಿಂದ 3137 ರನ್ ಗಳಿಸಿದ್ದಾರೆ. ಅದರಲ್ಲಿ ಐದು ಶತಕ ಮತ್ತು 13 ಅರ್ಧಶತಕಗಳು ಇವೆ. 218 ವಿಕೆಟ್‌ಗಳನ್ನೂ ಗಳಿಸಿದ್ದಾರೆ. 108 ರನ್‌ಗಳಿಗೆ 9 ವಿಕೆಟ್ ಗಳಿಸಿದ್ದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.
ಭಾರತ ತಂಡವನ್ನು ಪ್ರತಿನಿಧಿಸಿರುವ ಮಯಂಕ್ ಅಗರವಾಲ್, ಮನೀಷ್ ಪಾಂಡೆ ಮತ್ತು ದೇವದತ್ತ ಪಡಿಕ್ಕಲ್ ಹಾಗೂ ಕೆಲವು ಯುವ ಬ್ಯಾಟರ್‌ಗಳಿಗೆ ಅವಕಾಶ ನೀಡಿದ್ದರಿಂದ ಸಿದ್ಧಾರ್ಥ್ ಅವರಿಗೆ ಕಳೆದ ಋತುವಿನಲ್ಲಿ ಆಡುವ ಅವಕಾಶ ದೊರೆತಿರಲಿಲ್ಲ. ರಣಜಿ ಟೂರ್ನಿಯಲ್ಲಿ ಅವರು ಬೆಂಚ್ ಕಾದಿದ್ದೇ ಹೆಚ್ಚು. ಆದ್ದರಿಂದ ಅವರು ಅವಕಾಶ ಹುಡುಕಿಕೊಂಡು ಗೋವಾದತ್ತ ಮುಖ ಮಾಡಿದ್ದಾರೆ.
ಈಚೆಗೆ ನಮಿಬಿಯಾ ಪ್ರವಾಸಕ್ಕೆ ತೆರಳಿದ್ದ ಕರ್ನಾಟಕ ತಂಡದಲ್ಲಿಯೂ 30 ವರ್ಷದ ಸಿದ್ಧಾರ್ಥ್ ಇದ್ದರು. ಕರ್ನಾಟಕ ತಂಡವನ್ನು 20 ಪ್ರಥಮ ದರ್ಜೆ ಪಂದ್ಯಗಳಲ್ಲಿ ಅವರು ಪ್ರತಿನಿಧಿಸಿದ್ದಾರೆ. 44.51ರ ಸರಾಸರಿಯಲ್ಲಿ 1449 ರನ್ ಸೇರಿಸಿದ್ದಾರೆ. 10 ಅರ್ಧಶತಕಗಳು ಅದರಲ್ಲಿ ಸೇರಿವೆ.
ಆಕ್ರಮಣ ಶೈಲಿಯ ಎಡಗೈ ಬ್ಯಾಟರ್ ರೋಹನ್ ಕದಂ 2021ರ ನವೆಂಬರ್‌ನಲ್ಲಿ ತಮಿಳುನಾಡು ವಿರುದ್ಧದ ಏಕದಿನ ಪಂದ್ಯದಲ್ಲಿ ಆಡಿದ್ದರು. ಅದರ ನಂತರ ಅವರಿಗೆ ಅವಕಾಶ ಲಭಿಸಿಲ್ಲ. 2017ರಲ್ಲಿ ಕದಂ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ನಾಲ್ಕು ಪಂದ್ಯಗಳನ್ನು ಆಡಿದ್ದಾರೆ. 13 ಲಿಸ್ಟ್ ಎ ಮತ್ತು 29 ಟ್ವೆಂಟಿ–20 ಪಂದ್ಯಗಳಲ್ಲಿ ಆಡಿದ್ದಾರೆ.
ಈ ಕುರಿತು ಮಾಹಿತಿಗಾಗಿ ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್ ಅವರನ್ನು ಸಂಪರ್ಕಿಸಲಾಯಿತು. ಆದರೆ ಅವರು ಕರೆಗೆ ಲಭ್ಯರಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.