ADVERTISEMENT

ಕರ್ನಾಟಕ ತಂಡದ ಬೆಂಬಿಡದ ಮಳೆರಾಯ

ಪಿಟಿಐ
Published 27 ಅಕ್ಟೋಬರ್ 2024, 19:58 IST
Last Updated 27 ಅಕ್ಟೋಬರ್ 2024, 19:58 IST
ನಿಕಿನ್ ಜೋಸ್
ನಿಕಿನ್ ಜೋಸ್   

ಪಟ್ನಾ: ಕರ್ನಾಟಕ ರಾಜ್ಯ ಕ್ರಿಕೆಟ್ ತಂಡಕ್ಕೆ ಈ ಋತುವಿನಲ್ಲಿ ಮಳೆಯು ಬೆನ್ನತ್ತಿ ಕಾಡುತ್ತಿದೆ. 

ಕರ್ನಾಟಕ ತಂಡವು ಆಡಿದ ಎಲೀಟ್  ಸಿ ಗುಂಪಿನ ಮೊದಲೆರಡೂ ಪಂದ್ಯಗಳಲ್ಲಿ ಮಳೆಯಿಂದಾಗಿ ಫಲಿತಾಂಶ ಹೊರಹೊಮ್ಮಲಿಲ್ಲ. ಅದರಿಂದಾಗಿ ಕೇವಲ ಎರಡು ಅಂಕಗಳು ಮಾತ್ರ ದೊರೆತಿವೆ. ಇದೀಗ ಬಿಹಾರ ವಿರುದ್ಧ ಪಟ್ನಾದಲ್ಲಿ ನಡೆಯುತ್ತಿರುವ ಪಂದ್ಯಕ್ಕೂ ಮಳೆ ಕಾಡಿದೆ. ಎರಡನೇ ದಿನದಾಟವು ಒಂದೂ ಎಸೆತ ಕಾಣಲಿಲ್ಲ. 

ಭಾನುವಾರ ಬೆಳಗಿನ ಜಾವ ಸುರಿದ ಮಳೆಯಿಂದಾಗಿ ಮೈದಾನ ತೇವವಾಗಿತ್ತು. ಬೆಳಿಗ್ಗೆ 9.30ಕ್ಕೆ ಸೂರ್ಯ ಬೆಳಗತೊಡಗಿದಾಗ, ಕ್ರೀಡಾಂಗಣ ಸಿಬ್ಬಂದಿಯು ಆಟದಂಕಣ ಸಿದ್ಧಗೊಳಿಸಲು ಬಹಳಷ್ಟು ಶ್ರಮಪಟ್ಟರು. ಆದರೂ ಇಡೀ ದಿನ ಆಟ ಆರಂಭ ಮಾಡಲಾಗಲಿಲ್ಲ.

ADVERTISEMENT

ಅಂಪೈರ್‌ಗಳಾದ ನಿತಿನ್ ಪಂಡಿತ್ ಮತ್ತು ಟೋನಿ ಎಮಾಟಿ ಅವರು ಹಲವು ಬಾರಿ ಪಿಚ್ ಮತ್ತು ಮೈದಾನದ ಪರಿಶೀಲನೆ ನಡೆಸಿದರು. 

ಮೊದಲ ದಿನ ಸಾಂಗವಾಗಿ ಆಟ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಬಿಹಾರ ತಂಡವನ್ನು ಕರ್ನಾಟಕವು 143 ರನ್‌ಗಳಿಗೆ ಆಲೌಟ್ ಮಾಡಿತ್ತು. ಮಯಂಕ್ ಅಗರವಾಲ್ ಪಡೆಯು ದಿನದಾಟದ ಕೊನೆಗೆ 3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 16 ರನ್ ಗಳಿಸಿತ್ತು. 

‘ಬೆಳಗಿನ ಜಾವ 3 ರಿಂದ 6ರವರೆಗೆ ಮಳೆಯಾಗಿದೆ. ನಾವು ಕ್ರೀಡಾಂಗಣಕ್ಕೆ ಬಂದ ನಂತರ ಮಳೆಯಾಗಿರಲಿಲ್ಲ. ಬಿಸಿಲು ಕೂಡ ಇತ್ತು. ಆದರೆ ಪಿಚ್‌ಗಳಿಗೆ ಹೊದಿಕೆಗಳನ್ನು ಹಾಕಿ ನಿರ್ವಹಿಸುವಲ್ಲಿ ವಿಫಲವಾಗಿರಬಹುದು’ ಎಂದು ಕರ್ನಾಟಕ ಮುಖ್ಯ ಕೋಚ್ ಯರೇಗೌಡ ಹೇಳಿದರು. 

ಉಳಿದಿರುವ ಇನ್ನೆರಡು ದಿನಗಳಲ್ಲಿ ಮಳೆಯಿಲ್ಲದಿದ್ದರೆ ಆಡಲು ಅವಕಾಶ ಸಿಕ್ಕರೆ ತಂಡವು ಉತ್ತಮ ಮುನ್ನಡೆ ಗಳಿಸಿ, ಗೆಲುವಿಗಾಗಿ ಪ್ರಯತ್ನಿಸುವ ಛಲದಲ್ಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.