ADVERTISEMENT

ಕರ್ನಾಟಕ ರಣಜಿ ತಂಡ: ಗೌತಮ್‌ಗೆ ಅರ್ಧಚಂದ್ರ; ನಿಶ್ಚಲ್ ಮರುಪ್ರವೇಶ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2023, 16:13 IST
Last Updated 27 ಡಿಸೆಂಬರ್ 2023, 16:13 IST
ಕೆ. ಗೌತಮ್
ಕೆ. ಗೌತಮ್    

ಬೆಂಗಳೂರು: ಮುಂಬರುವ ರಣಜಿ ಟ್ರೋಫಿ ಕ್ರಿಕೆಟ್ ಋತುವಿನಲ್ಲಿ ಕಣಕ್ಕಿಳಿಯಲಿರುವ ಕರ್ನಾಟಕ ತಂಡದ ಸ್ಪಿನ್ ವಿಭಾಗದಲ್ಲಿ ಹೊಸ ಮುಖಗಳಿಗೆ ಅವಕಾಶ ಲಭಿಸಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಆಯ್ಕೆ ಸಮಿತಿಯು ಬುಧವಾರ ಪ್ರಕಟಿಸಿರುವ ತಂಡದಲ್ಲಿ ಅನುಭವಿ ಆಫ್‌ಸ್ಪಿನ್ನರ್ ಕೃಷ್ಣಪ್ಪ ಗೌತಮ್ ಅವರನ್ನು ಕೈಬಿಡಲಾಗಿದೆ. ಮಯಂಕ್ ಅಗರವಾಲ್ ನಾಯಕತ್ವ ಮುಂದುವರಿದಿದೆ. ಯುವ ಆಟಗಾರ ನಿಕಿನ್ ಜೋಸ್ ಅವರು ಉಪನಾಯಕರಾಗಿದ್ದಾರೆ.

ಲೆಗ್‌ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರು ಈ ಋತುವಿನಿಂದ ಕೇರಳಕ್ಕೆ ವಲಸೆ ಹೋಗಿದ್ದಾರೆ. ಇದೀಗ ಗೌತಮ್ ಅವರು ಸ್ಥಾನ ಕಳೆದುಕೊಂಡಿದ್ದಾರೆ. ಇದರಿಂದಾಗಿ ಎಡಗೈ ಸ್ಪಿನ್ನರ್ ಶುಭಾಂಗ್ ಹೆಗಡೆ, ಆಫ್‌ಸ್ಪಿನ್ನರ್ ಕೆ. ಶಶಿಕುಮಾರ್ ಮತ್ತು ಎಡಗೈ ಸ್ಪಿನ್ನರ್ ಎ.ಸಿ. ರೋಹಿತ್ ಕುಮಾರ್ ಸ್ಥಾನ ಪಡೆದುಕೊಂಡಿದ್ದಾರೆ.

ADVERTISEMENT

ಗೌತಮ್ ಅವರು 59 ಪ್ರಥಮ ದರ್ಜೆ ಪಂದ್ಯಗಳಲ್ಲಿ 224 ವಿಕೆಟ್ ಗಳಿಸಿದ್ದಾರೆ. ಅದರಲ್ಲಿ 14 ಐದು ವಿಕೆಟ್ ಗೊಂಚಲುಗಳಿವೆ. ಎರಡು ಬಾರಿ ಹತ್ತು ವಿಕೆಟ್ (ಎರಡೂ ಇನಿಂಗ್ಸ್ ಸೇರಿ) ಗಳಿಸಿದ್ದಾರೆ.

35 ವರ್ಷದ ಗೌತಮ್ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಆಡಿದ್ದರು. ಇದೀಗ ಅವರಿಗೆ ಕೆಂಪು ಚೆಂಡಿನ ಕ್ರಿಕೆಟ್ ಮಾದರಿಯ ತಂಡದ ಬಾಗಿಲು ಮುಚ್ಚಿದಂತಾಗಿದೆ.

‘ಭಜ್ಜಿ (ಗೌತಮ್) ಅವರು ಕರ್ನಾಟಕ ಕ್ರಿಕೆಟ್‌ಗೆ ನೀಡಿರುವ ಅಮೋಘ ಸೇವೆಗೆ ಧನ್ಯವಾದಗಳು. ಆದರೆ ಯಾರೂ ಅನಿವಾರ್ಯವಲ್ಲ. ತಂಡದಲ್ಲಿ ಉತ್ತಮ ಬದಲಾವಣೆಯ ಪರ್ವವನ್ನು ನಿರಂತರವಾಗಿಡುವುದು ನಮ್ಮ ಉದ್ದೇಶ. ಬಹಳಷ್ಟು ಉತ್ತಮ, ಪ್ರತಿಭಾವಂತ ಯುವ ಬೌಲರ್‌ಗಳೂ ಮತ್ತು ಬ್ಯಾಟರ್‌ಗಳು ಅವಕಾಶಕ್ಕಾಗಿ ಕಾದಿದ್ದಾರೆ. ಅವರು ದೀರ್ಘ ಅವಧಿಗೆ ಕಾಯುವಂತೆ ಮಾಡುವುದು ಸರಿಯಲ್ಲ’ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಜೆ. ಅಭಿರಾಮ್ ತಿಳಿಸಿದ್ದಾರೆ.

ನಾಯಕ ಮಯಂಕ್ ಬಿಟ್ಟರೆ ತಂಡದಲ್ಲಿ ಈಗ  ಆರ್. ಸಮರ್ಥ್ ಮತ್ತು ಮನೀಷ್ ಪಾಂಡೆ ಅವರಿಬ್ಬರೇ ಹೆಚ್ಚು ಅನುಭವಿ ಆಟಗಾರರಾಗಿದ್ದಾರೆ.

ಬ್ಯಾಟಿಂಗ್ ವಿಭಾಗದಲ್ಲಿ ಡಿ. ನಿಶ್ಚಲ್ ಮತ್ತೆ ತಂಡಕ್ಕೆ ಮರಳಿದ್ದಾರೆ. ಅಗ್ರಕ್ರಮಾಂಕದ ಬ್ಯಾಟರ್ ನಿಶ್ಚಲ್ ನಾಲ್ಕು ವರ್ಷಗಳಿಂದ ತಂಡದಲ್ಲಿ ಸ್ಥಾನ ಗಳಿಸಿರಲಿಲ್ಲ. ಈಚೆಗೆ ಅಭ್ಯಾಸ ಪಂದ್ಯದಲ್ಲಿ ಮುಂಬೈ ಎದುರು ಅವರು ಆಕರ್ಷಕ ಶತಕ ಗಳಿಸಿ ಆಯ್ಕೆದಾರರ ಗಮನ ಸೆಳೆದಿದ್ದಾರೆ. ಈ ಬಲಗೈ ಬ್ಯಾಟರ್ 16 ಪ್ರಥಮ ದರ್ಜೆ ಪಂದ್ಯಗಳಿಂದ 952 ರನ್‌ ಗಳಿಸಿದ್ದಾರೆ. ಅದರಲ್ಲಿ 4 ಶತಕಗಳಿವೆ. ಈ ಬಾರಿ ವಿಕೆಟ್‌ಕೀಪರ್ ಬಿ.ಆರ್. ಶರತ್ ಮತ್ತು ಎಡಗೈ ಸ್ಪಿನ್ನರ್ ಜೆ. ಸುಚಿತ್ ಸ್ಥಾನ ಪಡೆದಿಲ್ಲ.

ರಣಜಿ ಟೂರ್ನಿಯು ಜನವರಿ 5ರಿಂದ ಆರಂಭವಾಗಲಿದೆ. 

ತಂಡ: ಮಯಂಕ್ ಅಗರವಾಲ್ (ನಾಯಕ), ಆರ್. ಸಮರ್ಥ್, ದೇವದತ್ತ ಪಡಿಕ್ಕಲ್, ನಿಕಿನ್ ಜೋಸ್ ಎಸ್.ಜೆ (ಉಪನಾಯಕ), ಮನೀಷ್ ಪಾಂಡೆ, ಶುಭಾಂಗ್ ಹೆಗಡೆ, ಶರತ್ ಶ್ರೀನಿವಾಸ್ (ವಿಕೆಟ್‌ಕೀಪರ್), ವೈಶಾಖ ವಿಜಯಕುಮಾರ್, ವಿ. ಕೌಶಿಕ್, ವಿದ್ವತ್ ಕಾವೇರಪ್ಪ, ಕೆ. ಶಶಿಕುಮಾರ್, ಸುಜಯ್ ಸತೇರಿ (ವಿಕೆಟ್‌ಕೀಪರ್), ಡಿ. ನಿಶ್ಚಲ್, ಎಂ. ವೆಂಕಟೇಶ್, ಕಿಶನ್ ಎಸ್ ಬೆದರೆ, ಎ.ಸಿ. ರೋಹಿತ್ ಕುಮಾರ್.

ಕೋಚ್: ಪಿ.ವಿ. ಶಶಿಕಾಂತ್, ಬೌಲಿಂಗ್ ಕೋಚ್: ಮನ್ಸೂರ್ ಅಲಿ ಖಾನ್, ಫೀಲ್ಡಿಂಗ್ ಕೋಚ್: ಶಬರೀಶ್ ಪಿ ಮೋಹನ್, ಮ್ಯಾನೇಜರ್: ಆರ್. ರಮೇಶ್ ರಾವ್, ಫಿಸಿಯೊ: ಎ. ಜಾಬಪ್ರಭು, ಸ್ಟ್ರೆಂಥ್–ಕಂಡಿಷನಿಂಗ್ ಕೋಚ್: ಎ. ಕಿರಣ್. ಮಸಾಜ್ ಪರಿಣತ: ಸಿ.ಎಂ. ಸೋಮಸುಂದರ್, ವಿಡಿಯೊ ಅನಾಲಿಸ್ಟ್: ಗಿರಿಧರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.