ADVERTISEMENT

Kerala vs Karnataka ರಣಜಿ: ಕರ್ನಾಟಕಕ್ಕೆ ಮತ್ತೆ ಒಂದು ಅಂಕ, ಆತಂಕ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 15:44 IST
Last Updated 21 ಅಕ್ಟೋಬರ್ 2024, 15:44 IST
<div class="paragraphs"><p>ಕ್ರಿಕೆಟ್‌ (ಪ್ರಾತಿನಿಧಿಕ ಚಿತ್ರ)</p></div>

ಕ್ರಿಕೆಟ್‌ (ಪ್ರಾತಿನಿಧಿಕ ಚಿತ್ರ)

   

ಬೆಂಗಳೂರು: ಸತತ ಎರಡನೇ ಬಾರಿ ಕರ್ನಾಟಕ ಈ ಋತುವಿನ ರಣಜಿ ಟ್ರೋಫಿ ಪಂದ್ಯದಲ್ಲಿ ಒಂದು ಪಾಯಿಂಟ್‌ ಪಡೆಯಬೇಕಾಯಿತು. ಕರ್ನಾಟಕ ಮತ್ತು ಕೇರಳ ನಡುವಣ ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ರಣಜಿ ಟ್ರೋಫಿ ‘ಸಿ’ ಗುಂಪಿನ ಪಂದ್ಯದ ನಾಲ್ಕನೇ ದಿನವಾದ ಸೋಮವಾರ ಸಹ ಒಂದೂ ಎಸೆತದ ಆಟ ಸಾಧ್ಯವಾಗಲಿಲ್ಲ. ಒಂದೂ ಇನಿಂಗ್ಸ್ ಪೂರ್ಣವಾಗದೇ ಉಭಯ ತಂಡಗಳು ತಲಾ ಒಂದು ಪಾಯಿಂಟ್ ಪಡೆದವು.

ಭಾನುವಾರದ ಮಳೆಯಿಂದಾಗಿ ಕ್ರೀಡಾಂಗಣ ಆಡಲು ಯೋಗ್ಯವಾಗಿರಲಿಲ್ಲ. ಸೋಮವಾರವೂ ಬಿಟ್ಟುಬಿಟ್ಟು ಮಳೆಯಾಯಿತು.

ADVERTISEMENT

ಇಂದೋರ್‌ನಲ್ಲಿ ಹಾಲಿ ಋತುವಿನ ಮೊದಲ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧವೂ ಪ್ರತಿಕೂಲ ಹವಾಮಾನದಿಂದಾಗಿ ಪಂದ್ಯ ಅಪೂರ್ಣಗೊಂಡು ಕರ್ನಾಟಕ ಒಂದು ಪಾಯಿಂಟ್ ಪಡೆದಿತ್ತು. ತಂಡದ ಕೋಚ್‌ ಯರೇ ಗೌಡ ಮತ್ತು ನಾಯಕ ಮಯಂಕ್ ಅಗರವಾಲ್‌ ನೇರವಾಗಿ ನಿರಾಸೆಯನ್ನು ವ್ಯಕ್ತಪಡಿಸದಿದ್ದರೂ ಅವರ ಮಾತುಗಳಲ್ಲಿ ಆತಂಕ ಕಾಣಿಸಿತು.

ನಾಲ್ಕು ದಿನಗಳ ಆಟದಲ್ಲಿ ಸಾಧ್ಯವಾಗಿದ್ದು 50 ಓವರುಗಳ ಆಟವಷ್ಟೇ. ಬ್ಯಾಟಿಂಗಿಗೆ ಇಳಿಸಲ್ಪಟ್ಟ ಕೇರಳ ಮೊದಲ ದಿನ 23 ಓವರ್ ಮತ್ತು ಎರಡನೇ ದಿನ 27 ಓವರ್ ಆಡಿದ್ದು 3 ವಿಕೆಟ್‌ಗೆ 162 ರನ್ ಗಳಿಸಿತ್ತು. ಎರಡು ಪಂದ್ಯಗಳಲ್ಲಿ ಎರಡು ಪಾಯಿಂಟ್ ಮಾತ್ರ ಗಳಿಸಿರುವುದು ಕರ್ನಾಟಕ ಪಾಳೆಯದಲ್ಲಿ ಆತಂಕ ಮೂಡಿಸಿದೆ.

‘ನಾವು ಬಯಸಿದಂತೆ ಆಗಿಲ್ಲ. ಏನು ಮಾಡಲು ಸಾಧ್ಯ’ ಎಂದು ಯರೇ ಗೌಡ ಪ್ರತಿಕ್ರಿಯಿಸಿದರು. ‘ಪರಿಸ್ಥಿತಿ ನಮ್ಮ ಕೈಲಿದ್ದರೆ ನಿಭಾಯಿಸಬಹುದು. ಪೂರ್ಣ ಗೆಲುವು ಸಾಧಿಸುವ ಗುರಿಯೊಡನೆ ನಾವು ಈ ಟೂರ್ನಿಗೆ ಆಡಲು ಇಳಿದಿದ್ದೆವು. ಮುಂದೆಯೂ ನಮ್ಮ ಗುರಿ ಅದೇ’ ಎಂದು ಕೋಚ್‌ ಹೇಳಿದರು.

ಕರ್ನಾಟಕ ತಂಡವು ಮುಂದಿನ ಪಂದ್ಯವನ್ನು ಅಕ್ಟೋಬರ್‌ 26 ರಿಂದ 29ವರೆಗೆ ಪಟ್ನಾದಲ್ಲಿ ಬಿಹಾರ ವಿರುದ್ಧ ಆಡಲಿದೆ. ನವೆಂಬರ್‌ 6 ರಿಂದ 9ರ ವರೆಗೆ ಬೆಂಗಳೂರಿನಲ್ಲಿ ಬಂಗಾಳ ವಿರುದ್ಧ ಪಂದ್ಯ ನಿಗದಿಯಾಗಿದೆ. ನಂತರ ಲಖನೌದಲ್ಲಿ ಉತ್ತರ ಪ್ರದೇಶ ತಂಡವನ್ನು ನವೆಂಬರ್‌ 13 ರಿಂದ 16ರವರೆಗೆ ಎದುರಿಸಲಿದೆ.  ಕೊನೆಯ ಎರಡು ಪಂದ್ಯಗಳಿಗೆ ಮೊದಲು (ಪಂಜಾಬ್ ಮತ್ತು ಹರಿಯಾಣ ವಿರುದ್ಧ) ಸ್ವಲ್ಪ ವಿರಾಮ ಸಿಗಲಿದೆ. ಆ ಪಂದ್ಯಗಳು 2025ರ ಜನವರಿ, ಫೆಬ್ರುವರಿ ತಿಂಗಳಲ್ಲಿ ನಡೆಯಲಿವೆ.

‘ನಾವು ಈಗ ಕಷ್ಟದ ಪರಿಸ್ಥಿತಿಯಲ್ಲಿದ್ದೇವೆ’ ಎಂದು ಮಯಂಕ್ ಅಗರವಾಲ್ ಹೇಳಿದರು. ಪಂದ್ಯ ಗೆಲ್ಲಬೇಕೆಂಬ ಉದ್ದೇಶದಿಂದ ನಾವು ಎರಡೂ ಪಂದ್ಯಗಳಲ್ಲಿ ಟಾಸ್‌ ಗೆದ್ದು ಬೌಲಿಂಗ್ ಆಯ್ಕೆಮಾಡಿಕೊಂಡೆವು. ಈಗಿನ ಸ್ಥಿತಿ ಹತಾಶೆ ಮೂಡಿಸಿದೆ. ಆದರೆ ಇಂಥದ್ದನ್ನು ನಿಭಾಯಿಸಬೇಕಾಗುತ್ತದೆ’ ಎಂದರು.

ಪಂದ್ಯಕ್ಕೆ ಪ್ರತಿಕೂಲ ಹವಾಮಾನ ಅಡ್ಡಿಯಾಗುವುದರಿಂದ ಹೊಸಬರ ಸಾಮರ್ಥ್ಯ ಅಳೆಯಲೂ ಆಗುತ್ತಿಲ್ಲ. ‘ನಿಜ. ಈ ಆಟಗಾರರು ಕ್ರೀಡಾಂಗಣದಲ್ಲಿ ಸಾಕಷ್ಟು ಹೊತ್ತು ಕಳೆಯದೇ ಹೋದಲ್ಲಿ ಅವರ ಸಾಮರ್ಥ್ಯ ತಿಳಿಯಲು ಆಗುವುದಿಲ್ಲ’ ಎಂದು ಹೇಳಿದರು.

ಸಂಕ್ಷಿಪ್ತ ಸ್ಕೋರು: ಕೇರಳ: 50 ಓವರುಗಳಲ್ಲಿ 3 ವಿಕೆಟ್‌ಗೆ 161. ಪಂದ್ಯ ಡ್ರಾ. ಕೇರಳ: 1 ಪಾಯಿಂಟ್, ಕರ್ನಾಟಕ: 1 ಪಾಯಿಂಟ್‌

ಕೋಲ್ಕತ್ತ: ಬಂಗಾಳ ಮತ್ತು ಬಿಹಾರ ನಡುವಣ ಪಂದ್ಯ ಡ್ರಾ. ಬಂಗಾಳ 1 ಪಾಯಿಂಟ್‌. ಬಿಹಾರ: 1 ಪಾಯಿಂಟ್

ಲಖನೌ: ಹರಿಯಾಣ: 453 ಮತ್ತು 25 ಓವರುಗಳಲ್ಲಿ 3 ವಿಕೆಟ್‌ಗೆ 72 (ಮಯಂಕ್ ಶಾಂಡಿಲ್ಯ 31, ಶಿವಂ ಶರ್ಮಾ 22ಕ್ಕೆ2), ಉತ್ತರ ಪ್ರದೇಶ: (ಭಾನುವಾರ; 6 ವಿಕೆಟ್‌ಗೆ 267) 93.2 ಓವರುಗಳಲ್ಲಿ 364 (ಆರ್ಯನ್ ಜುಯಲ್ 119, ರಿಂಕು ಸಿಂಗ್‌ 89, ಯಶ್‌ ದಯಾಳ್‌ 41, ಅಂಕಿತ್ ರಜಪೂತ್‌ ಔಟಾಗದೇ 40; ಜಯಂತ್ ಯಾದವ್‌ 102ಕ್ಕೆ4). ಫಲಿತಾಂಶ: ಡ್ರಾ, ಹರಿಯಾಣ 3, ಉತ್ತರ ಪ್ರದೇಶ 1.

ಮುಲ್ಲನಪುರ: ಪಂಜಾಬ್‌: 277 ಮತ್ತು (ಭಾನುವಾರ; 3 ವಿಕೆಟ್‌ಗೆ 265) 6 ವಿಕೆಟ್‌ಗೆ 329 ಡಿಕ್ಲೇರ್ಡ್‌ (ಜಸ್ಕರಣವೀರ್‌ ಸಿಂಗ್‌ ಪಾಲ್‌ 116, ಅಭಯ್ ಚೌಧರಿ 46; ಅನ್ಮೋಲ್‌ಪ್ರೀತ್‌ ಸಿಂಗ್‌ 72); ಮಧ್ಯಪ್ರದೆಶ: 207 ಮತ್ತು 73 ಓವರುಗಳಲ್ಲಿ 8 ವಿಕೆಟ್‌ಗೆ 146 (ಹಿಮಾಂಶು ಮಂತ್ರಿ 41, ಹರ್‌ಪ್ರೀತ್‌ ಸಿಂಗ್‌ 35; ಅರ್ಷದೀಪ್ ಸಿಂಗ್‌ 28ಕ್ಕೆ2, ಗುರನೂರ್‌ ಬ್ರಾರ್‌ 60ಕ್ಕೆ3, ಸುಖ್ವಿಂದರ್ ಸಿಂಗ್ 19ಕ್ಕೆ2). ಪಂದ್ಯ ಡ್ರಾ. ಪಾಯಿಂಟ್ಸ್: ಪಂಜಾಬ್ 3, ಮಧ್ಯಪ್ರದೇಶ: 1

ಪಡಿಕ್ಕಲ್‌, ವಿದ್ವತ್‌ ಅಲಭ್ಯ: ಅಭಿನವ್‌, ಅನೀಶ್‌ಗೆ ಸ್ಥಾನ

ಪಟ್ನಾದಲ್ಲಿ ಇದೇ 25 ರಿಂದ 29ರವರೆಗೆ ಬಿಹಾರ ವಿರುದ್ಧ ನಡೆಯಲಿರುವ ರಣಜಿ ಟ್ರೋಫಿ ಪಂದ್ಯಕ್ಕೆ ಕರ್ನಾಟಕ ತಂಡವನ್ನು ಆಯ್ಕೆ ಮಾಡಲಾಗಿದೆ. ಆಸ್ಟ್ರೇಲಿಯಾ ವಿರುದ್ಧ ಭಾರತ ‘ಎ’ ತಂಡಕ್ಕೆ ದೇವದತ್ತ ಪಡಿಕ್ಕಲ್ ಮತ್ತು ವಿದ್ವತ್ ಕಾವೇರಪ್ಪ ಆಯ್ಕೆಯಾಗಿರುವ ಕಾರಣ, ಅವರ ಬದಲು ಅಭಿನವ್ ಮನೋಹರ್ ಮತ್ತು ಅನೀಶ್ ಕೆ.ವಿ. ಸ್ಥಾನ ಪಡೆದಿದ್ದಾರೆ.

ತಂಡ ಹೀಗಿದೆ: ಮಯಂಕ್ ಅಗರವಾಲ್ (ನಾಯಕ), ನಿಕಿನ್ ಜೋಸ್‌ ಎಸ್‌.ಜೆ., ಸ್ಮರಣ್ ಆರ್‌., ಮನೀಶ್‌ ಪಾಂಡೆ (ಉಪನಾಯಕ), ಶ್ರೇಯಸ್‌ ಗೋಪಾಲ್‌, ಸುಜಯ್ ಸಾತೇರಿ (ವಿಕೆಟ್‌ ಕೀಪರ್‌), ಹಾರ್ದಿಕ್ ರಾಜ್‌, ವೈಶಾಖ ವಿ., ವಾಸುಕಿ ಕೌಶಿಕ್‌, ವಿದ್ಯಾಧರ
ಪಾಟೀಲ, ಅಭಿನವ್ ಮನೋಹರ್‌,
ಲವನೀತ್ ಸಿಸೋಡಿಯಾ, ಕಿಶನ್‌ ಎಸ್‌.ಬೆದರೆ, ಅನೀಶ್‌ ಕೆ.ವಿ., ಮೊಹ್ಸಿನ್ ಖಾನ್‌ ಮತ್ತು ಅಭಿಲಾಷ್‌ ಶೆಟ್ಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.