ಬೆಂಗಳೂರು: ಮನೀಷ್ ಪಾಂಡೆ ನಾಯಕತ್ವದ ಕರ್ನಾಟಕ ತಂಡವು ಶುಕ್ರವಾರ ವಿಜಯ್ ಹಜಾರೆ ಟ್ರೋಫಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿತು.
ಮಧ್ಯಾಹ್ನ ಮಳೆ ಬರುವ ಮುನ್ನ ಅಮೋಘ ಬ್ಯಾಟಿಂಗ್ ಮಾಡಿದ ಮಯಂಕ್ ಅಗರವಾಲ್ ಮತ್ತು ಕೆ.ಎಲ್. ರಾಹುಲ್ ಕರ್ನಾಟಕದ ಗೆಲುವನ್ನು ಖಚಿತಪಡಿಸಿದರು. ಆತಿಥೇಯ ತಂಡವು 60 ರನ್‌ಗಳಿಂದ(ವಿಜೆಡಿ ನಿಯಮ) ವಿಜಯ ಸಾಧಿಸಿತು. ಕರ್ನಾಟಕವು ನಾಲ್ಕನೇ ಸಲ ಟ್ರೋಫಿಯನ್ನು ಎತ್ತಿ ಹಿಡಿಯಿತು.
2013–14, 2014–15 ಮತ್ತು 2017–18ರಲ್ಲಿ ಕರ್ನಾಟಕ ಟ್ರೋಫಿ ಗೆದ್ದಿತ್ತು. ಮೊದಲ ಎರಡು ಸಲ ಆರ್. ವಿನಯಕುಮಾರ್ ತಂಡದ ನಾಯಕತ್ವ ವಹಿಸಿದ್ದರು. ಮೂರನೇ ಬಾರಿ ಕರುಣ್ ನಾಯರ್ ಮುಂದಾಳತ್ವ ವಹಿಸಿದ್ದರು. ಈ ಬಾರಿ ಮನೀಷ್ ಪಾಂಡೆ ನಾಯಕರಾಗಿದ್ದರು.
ಫೈನಲ್ ಪಂದ್ಯದಲ್ಲಿ ತಮಿಳುನಾಡು ತಂಡವು ನೀಡಿದ್ದ 252 ರನ್‌ಗಳ ಗುರಿ ಬೆನ್ನಟ್ಟಿದ ಕರ್ನಾಟಕ ತಂಡವು 23 ಓವರ್‌ಗಳಲ್ಲಿ 1 ವಿಕೆಟ್‌ಗೆ 146 ರನ್ ಗಳಿಸಿದ್ದಾ ಮಳೆ ಆರಂಭವಾಯಿತು.
ವಿಜೆಡಿ ಪದ್ಧತಿಯ ಅನ್ವಯಕರ್ನಾಟಕ ತಂಡವು ಮಳೆ ಬಂದ ಹೊತ್ತಿಗೆ ಅಪೇಕ್ಷಿತ ಮೊತ್ತಕ್ಕಿಂತ 63 ರನ್‌ಗಳ ಮುನ್ನಡೆ ಸಾಧಿಸಿದೆ. ನಿಯಮದ ಪ್ರಕಾರ 23 ಓವರ್‌ಗಳಲ್ಲಿ 1 ವಿಕೆಟ್‌ಗೆ 86 ರನ್ ಗಳಿಸಬೇಕಿತ್ತು. ಆದರೆ, ಮಯಂಕ್ ಅಗರವಾಲ್ (ಬ್ಯಾಟಿಂಗ್ 69; 55ಎಸೆತ, 7ಬೌಂಡರಿ, 3 ಸಿಕ್ಸರ್) ಅವರ ಮಿಂಚಿನ ಬ್ಯಾಟಿಂಗ್‌ನಿಂದಾಗಿ ತಂಡವು 6.34ರ ಸರಾಸರಿಯಲ್ಲಿ ರನ್ ಗಳಿಸಿತು. ಕೆ.ಎಲ್. ರಾಹುಲ್ (ಬ್ಯಾಟಿಂಗ್ 52) ತಾಳ್ಮೆಯ ಅರ್ಧಶತಕ ಗಳಿಸಿದರು.
‘ಬರ್ತಡೆ ಬಾಯ್’ ಮಿಥುನ್ ಹ್ಯಾಟ್ರಿಕ್
ಹ್ಯಾಟ್ರಿಕ್ ಸಾಧನೆ ಮತ್ತು ಐದು ವಿಕೆಟ್‌ಗಳ ಗೊಂಚಲು ಗಳಿಸಿದ ‘ಪಿಣ್ಯ ಎಕ್ಸ್‌ಪ್ರೆಸ್’ ಅಭಿಮನ್ಯು ಮಿಥುನ್ ತಮಿಳುನಾಡು ತಂಡವನ್ನು ದೂಳೀಪಟ ಮಾಡಿದರು.
ಶುಕ್ರವಾರ 30ನೇ ಜನ್ಮದಿನ ಆಚರಿಸಿಕೊಂಡ ಮಿಥುನ್ (34ಕ್ಕೆ5) ಪರಿಣಾಮಕಾರಿ ದಾಳಿಯಿಂದಾಗಿ ತಮಿಳುನಾಡು ತಂಡವು 49.5 ಓವರ್‌ಗಳಲ್ಲಿ252 ರನ್ ಗಳಿಸಿ ಆಲೌಟ್ ಆಯಿತು.
ಟಾಸ್ ಗೆದ್ದ ಕರ್ನಾಟಕ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಓವರ್‌ನಲ್ಲಿ ಮಿಥುನ್ ಎಸೆತದಲ್ಲಿ ಮುರಳಿ ವಿಜಯ್ ವಿಕೆಟ್‌ಕೀಪರ್ ರಾಹುಲ್‌ಗೆ ಕ್ಯಾಚಿತ್ತರು. ಮಧ್ಯಮ ಕ್ರಮಾಂಕದಲ್ಲಿ ವಿಜಯಶಂಕರ್ (38 ರನ್) ಅವರ ವಿಕೆಟ್ ಅನ್ನೂ 46ನೇ ಓವರ್‌ನಲ್ಲಿ ಕಬಳಿಸಿದ ಮಿಥುನ್ ಕೊನೆಯ ಓವರ್‌ನಲ್ಲಿ ಮೊಹಮ್ಮದ್ ಸಲೀಂ, ಅಶ್ವಿನ್ ಮುರುಗನ್ ಮತ್ತು ಶಾರೂಕ್ ಖಾನ್ ವಿಕೆಟ್‌ಗಳನ್ನು ಗಳಿಸಿ ಹ್ಯಾಟ್ರಿಕ್ ಸಾಧಿಸಿದರು. ದೇವದತ್ತ ಪಡಿಕ್ಕಲ್, ಮನೀಷ್ ಪಾಂಡೆ ಮತ್ತು ಗೌತಮ್ ಅವರು ಪಡೆದ ಅದ್ಭುತ ಕ್ಯಾಚ್‌ಗಳಿಂದಾಗಿ ಮಿಥುನ್ ಹ್ಯಾಟ್ರಿಕ್ ಕನಸು ನನಸಾಯಿತು.
ಸಂಕ್ಷಿಪ್ತ ಸ್ಕೋರು
ತಮಿಳುನಾಡು:252 (49.5 ಓವರ್‌ಗಳಲ್ಲಿ)
ಅಭಿನವ್ ಮುಕುಂದ್85
ಬಾಬಾ ಅಪರಾಜಿತ್ 66
ವಿಜಯಶಂಕರ್ 38
ವಿಕೆಟ್ ಪತನ: 1–1 (ವಿಜಯ್;0.6), 2–24 (ಅಶ್ವಿನ್;7.6), 3–148 (ಮುಕುಂದ್; 30.6), 4–178 (ಬಾಬಾ; 37.2), 5–193 (ದಿನೇಶ್;41.4), 6–224 (ವಿಜಯಶಂಕರ್;45.4), 7–230 (ಸುಂದರ್; 46.6),
ಬೌಲಿಂಗ್:ಅಭಿಮನ್ಯು ಮಿಥುನ್ 9.5–0–34–5, ಕೌಶಿಕ್ ವಾಸುಕಿ 9–0–39–2, ಪ್ರತೀಕ್ ಜೈನ್ 9–0–55–1, ಗೌತಮ್ ಕೃಷ್ಣಪ್ಪ 10–0–48–1, ಪ್ರವೀಣ ದುಬೆ 6–0–47–0, ಕರುಣ ನಾಯರ್ 6–0–27–0
ಕರ್ನಾಟಕ: 1ವಿಕೆಟ್‌ಗೆ 146 (23 ಓವರ್‌ಗಳಲ್ಲಿ)
ಕೆ.ಎಲ್. ರಾಹುಲ್ 52 (ಔಟಾಗದೆ)
ಮಯಾಂಕ್ ಅಗರವಾಲ್ 69(ಔಟಾಗದೆ)
ದೇವದತ್ ಪಡಿಕಲ್ 11
ವಿಕೆಟ್ ಪತನ: 1–34(ದೇವದತ್ ಪಡಿಕಲ್; 4.3)
ಬೌಲಿಂಗ್: ವಾಷಿಂಗ್ಟನ್ ಸುಂದರ್ 6–0–51–1, ಆರ್.ಅಶ್ವಿನ್ 2–0–11–0, ಟಿ. ನಟರಾಜನ್ 3–0–1–7–0, ವಿಜಯ್ ಶಂಕರ್ 2–0–8–0, ಎಂ.ಅಶ್ವಿನ್ 6–0–34–0, ಎಂ. ಮೊಹಮದ್ 4–0–22–0
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.