ADVERTISEMENT

ಆರ್.ಅಶ್ವಿನ್‌ಗೆ ಡಬಲ್ ಆಘಾತ: ದಂಡದ ಭೀತಿಯಲ್ಲಿ ತಮಿಳುನಾಡು ಕ್ರಿಕೆಟಿಗ

ವಿಜಯ್‌ ಹಜಾರೆ ಕ್ರಿಕೆಟ್‌ ಟ್ರೋಫಿ: ಫೈನಲ್‌ನಲ್ಲಿ ಕರ್ನಾಟಕಕ್ಕೆ ಗೆಲುವು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 13:41 IST
Last Updated 25 ಅಕ್ಟೋಬರ್ 2019, 13:41 IST
   

ಬೆಂಗಳೂರು: ವಿಜಯ್‌ ಹಜಾರೆ ಕ್ರಿಕೆಟ್‌ ಟ್ರೋಫಿಯ ಫೈನಲ್‌ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಲಿಳಿದು ಅಚ್ಚರಿ ಮೂಡಿಸಿದ ತಮಿಳುನಾಡು ಕ್ರಿಕೆಟಿಗ ಆರ್‌.ಅಶ್ವಿನ್‌ ಅವರಿಗೆ ಪಂದ್ಯದ ರೆಫ್ರಿ ದಂಡ ವಿಧಿಸುವ ಸಾಧ್ಯತೆ ಇದೆ.

ಕರ್ನಾಟಕ ತಂಡದ ಎದುರು ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಆರಂಭಿಕ ಆಟಗಾರ ಮುರುಳಿ ವಿಜಯ್‌ ಔಟಾಗುತ್ತಿದ್ದಂತೆ ತಮಿಳುನಾಡು ತಂಡ ಅಶ್ವಿನ್‌ ಅವರನ್ನು ಬ್ಯಾಟಿಂಗ್‌ಗೆ ಕಳುಹಿಸಿತು. ಈ ನಿರ್ಧಾರ ಅಚ್ಚರಿಗೆ ಕಾರಣವಾಯಿತು. ಆದರೆ, ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ವಿಫಲವಾದ ಅವರು ಕೇವಲ 8 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು.

ಬ್ಯಾಟಿಂಗ್‌ ವೇಳೆ ಆಟದ ನಿಯಮ ಉಲ್ಲಂಘಿಸಿರುವಅಶ್ವಿನ್‌, ಬಿಸಿಸಿಐ ಲೋಗೊ(ಚಿಹ್ನೆ) ಇದ್ದ ಹೆಲ್ಮೆಟ್‌ ಧರಿಸಿ ಆಡಿದ್ದಾರೆ. ಹೀಗಾಗಿ ಅವರು ಕ್ರಿಕೆಟ್‌ ಮಂಡಳಿಯ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಅಧಿಕಾರಿಗಳು, ಅಶ್ವಿನ್‌ಗೆ ದಂಡ ವಿಧಿಸುವುದು ರೆಫ್ರಿಯ ವಿವೇಚನೆಗೆ ಬಿಟ್ಟದ್ದು. ಆದರೆ, ವಸ್ತ್ರ ಸಂಹಿತೆ ಉಲ್ಲಂಘಿಸುವ ಆಟಗಾರರಿಗೆ ದಂಡ ವಿಧಿಸಬೇಕು ಎಂಬುದನ್ನು ನಿಯಮದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

‘ರಾಷ್ಟ್ರೀಯ ತಂಡದಲ್ಲಿ ಆಡುವಾಗ ಬಳಸುವ ಹೆಲ್ಮೆಟ್‌ಅನ್ನೇದೇಶೀ ಪಂದ್ಯಗಳಲ್ಲಿಯೂ ಬಳಸಲು ಬಯಸುವುದಾದರೆ, ಅದರ ಮೇಲಿರುವಚಿಹ್ನೆ ಕಾಣದ ಹಾಗೆ ಟೇಪ್‌ ಅಂಟಿಸಬೇಕು ಎಂಬುದನ್ನು ವಸ್ತ್ರ ಸಂಹಿತೆಯು ಸ್ಪಷ್ಟವಾಗಿ ಹೇಳುತ್ತದೆ. ಆದಾಗ್ಯೂ ಯಾವುದೇ ಆಟಗಾರರು ಈ ರೀತಿಯ ಪ್ರಮಾದ ಎಸಗಿದರೆ ಅವರಿಗೆ ಪಂದ್ಯದ ರೆಫ್ರಿ ದಂಡ ವಿಧಿಸಲು ಅವಕಾಶವಿದೆ’ ಎಂದಿದ್ದಾರೆ.

ವಿಶೇಷವೆಂದರೆ ಟೆಸ್ಟ್‌ ಕ್ರಿಕೆಟ್‌ನಲ್ಲಿಭಾರತ ತಂಡವನ್ನು ಪ್ರತಿನಿಧಿಸುವ ಕರ್ನಾಟಕ ಆಟಗಾರ ಮಯಂಕ್‌ ಅಗರವಾಲ್‌ ಅವರೂ ಬಿಸಿಸಿಐ ಲೋಗೊ ಇರುವ ಹೆಲ್ಮೆಟ್‌ ಧರಿಸಿಯೇ ಕಣಕ್ಕಿಳಿದಿದ್ದರು. ಆದರೆ ಅವರು ಹೆಲ್ಮೆಟ್‌ಗೆ ಟೇಪ್‌ ಅಂಟಿಸಿ, ಲೋಗೊ ಕಾಣದಂತೆ ಎಚ್ಚರ ವಹಿಸಿದ್ದರು. ಮತ್ತೊಬ್ಬ ಆಟಗಾರ ಕೆ.ಎಲ್‌.ರಾಹುಲ್‌ ಲೋಗೊ ಇಲ್ಲದ ಹೆಲ್ಮೆಟ್‌ ಬಳಸಿ ಆಡಿದ್ದರು.

ಮಯಂಕ್‌ ಅಗರವಾಲ್‌,ಕೆ.ಎಲ್‌.ರಾಹುಲ್‌

ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ತಮಿಳುನಾಡು ತಂಡ 252ರನ್‌ ಗಳಿಸಿ ಆಲೌಟ್‌ ಆಯಿತು. ಸಾಧಾರಣ ಗುರಿ ಬೆನ್ನತ್ತಿದ ಕರ್ನಾಟಕ ಪಡೆ 23 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 146ರನ್‌ ಗಳಿಸಿದ್ದಾಗ ಮಳೆ ಸುರಿಯಿತು. ಸುಮಾರು 40 ನಿಮಿಷ ಕಾಲ ಪಂದ್ಯಕ್ಕೆ ಅಡ್ಡಿಯಾದ ಕಾರಣ ವಿಜೆಡಿ ಪದ್ದತಿ ಅನುಸಾರ ಕರ್ನಾಟಕಕ್ಕೆ 60ರನ್‌ ಅಂತರದ ಗೆಲುವು ನೀಡಲಾಯಿತು.

ಈ ಪಂದ್ಯದಲ್ಲಿ ಕನ್ನಡಿಗ ಅಭಿಮನ್ಯ ಮಿಥುನ್‌ ಹ್ಯಾಟ್ರಿಕ್‌ ಸೇರಿ ಐದು ವಿಕೆಟ್‌ ಪಡೆದು ಮಿಂಚಿದರು. ಆ ಮೂಲಕ ವಿಜಯ್‌ ಹಜಾರೆ ಟ್ರೋಫಿ ಇತಿಹಾಸದಲ್ಲಿ ಫೈನಲ್‌ ಪಂದ್ಯದಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಕಬಳಿಸಿದ ಮೊದಲ ಬೌಲರ್‌ ಎನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.