ADVERTISEMENT

ವಿಶ್ವಕಪ್‌ಗೆ ಕೇದಾರ್‌ ಜಾಧವ್‌ ಲಭ್ಯ

​ಪ್ರಜಾವಾಣಿ ವಾರ್ತೆ
Published 18 ಮೇ 2019, 20:00 IST
Last Updated 18 ಮೇ 2019, 20:00 IST
ಕೇದಾರ್‌ ಜಾಧವ್‌
ಕೇದಾರ್‌ ಜಾಧವ್‌   

ನವದೆಹಲಿ: ಆಲ್‌ರೌಂಡರ್‌ ಕೇದಾರ್‌ ಜಾಧವ್ ಈ ಬಾರಿಯ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಆಡುವುದು ಖಚಿತವಾಗಿದೆ.

ಗಾಯದಿಂದ ಸಂಪೂರ್ಣವಾಗಿ ಗುಣಮುಖರಾಗಿರುವ ಅವರು ಫಿಟ್‌ನೆಸ್‌ ಪರೀಕ್ಷೆಯಲ್ಲೂ ಪಾಸಾಗಿದ್ದಾರೆ. ಈ ಮೊದಲು ತಂಡಕ್ಕೆ ಆಯ್ಕೆ ಮಾಡಿದ್ದ ಇತರೆ 14 ಮಂದಿಯ ಜೊತೆ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದ್ದಾರೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಐಪಿಎಲ್‌) ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪರ ಆಡುವ 34 ವರ್ಷದ ಜಾಧವ್‌, ಮೇ 5ರಂದು ನಡೆದಿದ್ದ ಕಿಂಗ್ಸ್‌ ಇಲೆವನ್‌ ಪಂಜಾಬ್‌ ಎದುರಿನ ಪಂದ್ಯದ ವೇಳೆ ಗಾಯಗೊಂಡಿದ್ದರು.

ADVERTISEMENT

ಫೀಲ್ಡಿಂಗ್‌ ಮಾಡುವಾಗ ಅವರ ಎಡ ಭುಜಕ್ಕೆ ಬಲವಾದ ಪೆಟ್ಟು ಬಿದ್ದಿತ್ತು. ಎರಡು ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದರಿಂದ ಐಪಿಎಲ್‌ನ ಕೊನೆಯ ಹಂತದ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಅವರು ವಿಶ್ವಕಪ್‌ನಲ್ಲಿ ಕಣಕ್ಕಿಳಿಯುವುದೂ ಅನುಮಾನ ಎನಿಸಿತ್ತು.

‘ಕೇದಾರ್‌ ಅವರಿಗೆ ಆಗಿರುವ ಗಾಯವು ಗಂಭೀರ ಸ್ವರೂಪದ್ದಾಗಿರಲಿಲ್ಲ. ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದು ನಿಗದಿತ ದಿನದಂದೇ ತಂಡದೊಂದಿಗೆ ಇಂಗ್ಲೆಂಡ್‌ಗೆ ಹೋಗಲಿದ್ದಾರೆ’ ಎಂದು ಭಾರತ ತಂಡದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮುಂಬೈಯಲ್ಲಿ ಗುರುವಾರ ನಡೆದಿದ್ದ ಫಿಟ್‌ನೆಸ್‌ ಪರೀಕ್ಷೆಯಲ್ಲಿ ಜಾಧವ್‌ ಭಾಗವಹಿಸಿದ್ದರು. ಭಾರತ ತಂಡದ ಫಿಸಿಯೊ ಪ್ಯಾಟ್ರಿಕ್‌ ಫರ್ಹಾರ್ತ್‌, ಜಾಧವ್‌ ಅವರ ಫಿಟ್‌ನೆಸ್‌ ವರದಿಯನ್ನು ಬಿಸಿಸಿಐಗೆ ಸಲ್ಲಿಸಿದ್ದರು.

ಒಂದು ವೇಳೆ ಜಾಧವ್‌, ಗಾಯದಿಂದ ಚೇತರಿಸಿಕೊಳ್ಳದೇ ಹೋದರೆ ಅವರ ಬದಲು ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಅವರಿಗೆ 15 ಸದಸ್ಯರ ತಂಡದಲ್ಲಿ ಸ್ಥಾನ ನೀಡಲಾಗುತ್ತದೆ ಎಂದೂ ಹೇಳಲಾಗಿತ್ತು.

2014ರಲ್ಲಿ ನಡೆದಿದ್ದ ಶ್ರೀಲಂಕಾ ಎದುರಿನ ಪಂದ್ಯದ ಮೂಲಕ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಜಾಧವ್‌ ಈ ಮಾದರಿಯಲ್ಲಿ 59 ಪಂದ್ಯಗಳನ್ನು ಆಡಿದ್ದು 1,174ರನ್‌ ಗಳಿಸಿದ್ದಾರೆ. 102.53 ಸ್ಟ್ರೈಕ್‌ರೇಟ್‌ ಹೊಂದಿದ್ದಾರೆ.

ಈ ಸಲದ ವಿಶ್ವಕಪ್‌ ಮೇ 30ರಿಂದ ಇಂಗ್ಲೆಂಡ್‌ ಮತ್ತು ವೇಲ್ಸ್‌ನಲ್ಲಿ ನಡೆಯಲಿದೆ. ಜೂನ್ 5ರಂದು ಸೌಥಾಂಪ್ಟನ್‌ನಲ್ಲಿ ನಡೆಯುವ ತನ್ನ ಮೊದಲ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಪಡೆಯು ದಕ್ಷಿಣ ಆಫ್ರಿಕಾ ಸವಾಲು ಎದುರಿಸಲಿದೆ.

ಅದಕ್ಕೂ ಮುನ್ನ ಭಾರತವು ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಮೇ 25ರಂದು ನ್ಯೂಜಿಲೆಂಡ್‌ ಎದುರೂ, ಮೇ 28ರಂದು ಬಾಂಗ್ಲಾದೇಶ ವಿರುದ್ಧವೂ ಸೆಣಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.