ಲಂಡನ್: ಭಾರತ ಸೇರಿದಂತೆ ಏಷ್ಯಾ ಉಪಖಂಡದ ಪಿಚ್‌ನಲ್ಲಿ ಸ್ಪಿನ್ನರ್‌ಗಳನ್ನು ಹೇಗೆ ಪರಿಣಾಮಕಾರಿಯಾಗಿ ಎದುರಿಸಬಹುದು ಎಂಬುದಕ್ಕೆ ಸಂಬಂಧಿಸಿದಂತೆ ಭಾರತದ ಮಾಜಿ ಬ್ಯಾಟಿಂಗ್ ದಿಗ್ಗಜರಾಹುಲ್ ದ್ರಾವಿಡ್ ಅವರು ಕಳುಹಿಸಿರುವ ಇ-ಮೇಲ್ ಸಂದೇಶವನ್ನು ಇಂಗ್ಲೆಂಡ್‌ನ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಬಹಿರಂಗಪಡಿಸಿದ್ದಾರೆ.
ಪ್ರಸ್ತುತ ಶ್ರೀಲಂಕಾ ವಿರುದ್ಧ ಸಾಗುತ್ತಿರುವ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ಯುವ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಕಾಣುತ್ತಿರುವ ಹಿನ್ನೆಲೆಯಲ್ಲಿ ಪೀಟರ್ಸನ್, ಭಾರತೀಯ ದಿಗ್ಗಜ ನೀಡಿರುವ ಸಲಹೆಯನ್ನು ನೆನಪಿಸಿಕೊಂಡಿದ್ದಾರೆ.
ಕೆವಿನ್ ಪೀಟರ್ಸನ್ ತಮ್ಮ ಆಡುವ ಕಾಲಘಟ್ಟದಲ್ಲಿ ಸ್ಪಿನ್ ದಾಳಿಯನ್ನು ಎದುರಿಸುವಲ್ಲಿ ಪದೇ ಪದೇ ವಿಫಲವಾಗುತ್ತಿದ್ದರು. ಏನು ಮಾಡಬೇಕೆಂಬುದನ್ನು ತೋಚದೆ ಅಂತಿಮವಾಗಿ 'ದಿ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಮೊರೆ ಹೋಗಿದ್ದರು.
ಈ ಸಂದರ್ಭದಲ್ಲಿ ಸ್ಪಿನ್ ದಾಳಿಯನ್ನು ಯಶಸ್ವಿಯಾಗಿ ಎದುರಿಸಲು ಯಾವ ತಂತ್ರ ಅನುಸರಿಸಬೇಕು ಎಂಬುದಕ್ಕೆ ಸಂಬಂಧಪಟ್ಟಂತೆ ರಾಹುಲ್ ದ್ರಾವಿಡ್ ವಿವರವಾದ ಇ-ಮೇಲ್ ಕಳುಹಿಸಿದ್ದರು. ಇದನ್ನು ಅನುಸರಿಸಿದ್ದ ಪೀಟರ್‌ಸನ್ ಬಳಿಕ ಏಷ್ಯಾ ಉಪಖಂಡದ ಪಿಚ್‌ನಲ್ಲೂ ಸ್ಪಿನ್ನರ್‌ಗಳ ವಿರುದ್ಧ ಯಶ ಗಳಿಸಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ಪೀಟರ್ಸನ್, ರಾಹುಲ್ ಇಮೇಲ್ ಸಂದೇಶವನ್ನು ಲಗತ್ತಿಸಿದ್ದಾರೆ. ಅಲ್ಲದೆ ಇದರ ಪ್ರಿಂಟ್ ತೆಗೆದುಕೊಂಡು ಇಂಗ್ಲೆಂಡ್ ಆಟಗಾರರಾದ ಸಿಬ್ಲಿ ಹಾಗೂ ಕ್ರಾವ್ಲಿಗೆ ನೀಡಲು ಮನವಿ ಮಾಡಿದ್ದಾರೆ. ಏನೇ ಹೆಚ್ಚಿನ ಮಾಹಿತಿ ಬೇಕಾದರೂ ನನ್ನನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.
ಸ್ಪಿನ್ನರ್‌ಗಳನ್ನು ಯಶಸ್ವಿಯಾಗಿ ಎದುರಿಸಲು ನೆಟ್ಸ್‌ನಲ್ಲಿ ಕಾಲಿಗೆ ಫ್ರಂಟ್ ಪ್ಯಾಡ್ ಕಟ್ಟಿಕೊಳ್ಳದೇ ಅಭ್ಯಾಸಿಸುವಂತೆ ರಾಹುಲ್ ದ್ರಾವಿಡ್ ಸಲಹೆ ಮಾಡಿದ್ದರು. ಇದರಿಂದ ಚೆಂಡು ಕಾಲಿಗೆಅಪ್ಪಳಿಸುವಭಯದಲ್ಲಿ ಬ್ಯಾಟ್ ಮುಂದಕ್ಕೆ ಬಾಗಿಸಿ ಚೆಂಡನ್ನು ಡಿಫೆನ್ಸ್ ಮಾಡುವಂತೆ ಬಲವಂತ ಮಾಡಲಿದೆ. ಇದರಿಂದ ಚೆಂಡನ್ನು ಚೆನ್ನಾಗಿ ಗ್ರಹಿಸಲು ಸಾಧ್ಯವಾಗಲಿದೆ ಎಂದು ಹೇಳಿದ್ದರು.
ಸ್ಪಿನ್ನರ್‌ಗಳ ಕೈಯಿಂದಲೇ ಲೆಂಥ್ ಗ್ರಹಿಸಬೇಕು. ಇದನ್ನು ನೆಟ್ಸ್‌ನಲ್ಲಿ ಅಭ್ಯಾಸಿಸುವಂತೆ ಸಲಹೆ ಮಾಡಿದ್ದರು. ಸಂದೇಶದ ಅಂತಿಮದಲ್ಲಿಪೀಟರ್ಸನ್ ಅತ್ಯುತ್ತಮ ಆಟಗಾರ ಎಂದು ರಾಹುಲ್ ದ್ರಾವಿಡ್ ಗುಣಗಾನ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.