ನವದೆಹಲಿ:ದಕ್ಷಿಣ ಆಫ್ರಿಕಾದ ತಂಡದ ಸ್ಟಾರ್ ಆಟಗಾರರು ಭಾಗಿಯಾಗಿದ್ದ 2000ರ ಮ್ಯಾಚ್ ಫಿಕ್ಸಿಂಗ್ ಹಗರಣದ ಪ್ರಮುಖ ಬುಕ್ಕಿ ಸಂಜೀವ್ ಚಾವ್ಲಾ ಅವರನ್ನು ಇಂಗ್ಲೆಂಡ್‌ನಿಂದ ಹಸ್ತಾಂತರಿಸಲಾಗಿದೆ. ಚಾವ್ಲಾರನ್ನು ದೆಹಲಿ ಪೊಲೀಸರು ಗುರುವಾರ ಬೆಳಗ್ಗೆ ಭಾರತಕ್ಕೆ ಕರೆತಂದಿದ್ದಾರೆ.
ವಿಮಾನ ನಿಗದಿತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿಯೇ ದೆಹಲಿಗೆ ತಲುಪಿದೆ. ಈ ಮೊದಲು ಸ್ಕಾಟ್ಲೆಂಡ್ ಅಧಿಕಾರಿಗಳೇ ಸಂಜೀವ್ ಚಾವ್ಲಾ ಅವರನ್ನು ಭಾರತಕ್ಕೆ ಕರೆತಂದು ದೆಹಲಿ ಪೊಲೀಸರಿಗೆ ಒಪ್ಪಿಸಲಿದ್ದಾರೆ ಎನ್ನಲಾಗಿತ್ತು.
2000ರ ಫೆಬ್ರುವರಿ–ಮಾರ್ಚ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವುಭಾರತ ಪ್ರವಾಸ ಕೈಗೊಂಡಿತ್ತು. ಈ ವೇಳೆ ನಡೆದ ಫಿಕ್ಸಿಂಗ್ ಪ್ರಕರಣದಲ್ಲಿ ಆಫ್ರಿಕಾ ತಂಡದ ಮಾಜಿ ನಾಯಕ ಹ್ಯಾನ್ಸಿ ಕ್ರೊಂಜೆ ಭಾಗಿಯಾಗಿದ್ದರು. ಹಗರಣವನ್ನು ರೂಪಿಸಿದ ಆರೋಪಿಗಳಲ್ಲಿಸಂಜೀವ್ ಪ್ರಮುಖರು.
ಲಂಡನ್‌ನಲ್ಲಿರುವ ಹೀಥ್ರೋ ವಿಮಾನ ನಿಲ್ದಾಣದಲ್ಲಿಹಸ್ತಾಂತರಕ್ಕೆ ಸಂಬಂಧಿಸಿದ ಎಲ್ಲ ರೀತಿಯ ಕಾನೂನು ಪ್ರಕ್ರಿಯೆಗಳನ್ನು ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಜೀವ್ ಅವರನ್ನು ತಿಹಾರ್ ಜೈಲಿಗೆ ಕರೆದೊಯ್ಯಲಾಗಿದ್ದು, ಅದಕ್ಕೂ ಮೊದಲು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದೆ. ಲಂಡನ್ ನ್ಯಾಯಾಲಯಕ್ಕೆ ಭಾರತ ಸರ್ಕಾರ ನೀಡಿರುವ ಆಶ್ವಾಸನೆಗಳಿಗೆ ಅನುಗುಣವಾಗಿ ಬಂಧನದಲ್ಲಿ ಇರಿಸಲಾಗುತ್ತಿದೆ.
1992ರ ಭಾರತ–ಇಂಗ್ಲೆಂಡ್ ಹಸ್ತಾಂತರ ಒಪ್ಪಂದದ ಪ್ರಕಾರ ಹಸ್ತಾಂತರಿಸಲಾದ ಮೊದಲ ಹೈ–ಪ್ರೊಫೈಲ್ ಪ್ರಕರಣ ಇದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.