ಅಹಮದಾಬಾದ್: ಭಾರತ ವಿರುದ್ಧ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಬೃಹತ್ ಮೊತ್ತ ಪೇರಿಸಿದೆ.
ಎರಡನೇ ದಿನದಾಟದಲ್ಲಿ ಉಸ್ಮಾನ್ ಖ್ವಾಜಾ (180) ಹಾಗೂ ಕ್ಯಾಮರೂನ್ ಗ್ರೀನ್ (114) ಶತಕಗಳ ನೆರವಿನಿಂದ 167.2 ಓವರ್‌ಗಳಲ್ಲಿ 480 ರನ್‌ಗಳಿಗೆ ಆಲೌಟ್ ಆಗಿದೆ.
ಈ ನಡುವೆಯೂ ಪ್ರಭಾವಿ ಎನಿಸಿಕೊಂಡ ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 91 ರನ್ ನೀಡಿ ಆರು ವಿಕೆಟ್ ಕಬಳಿಸಿದರು.
ಖ್ವಾಜಾ-ಗ್ರೀನ್ ದ್ವಿಶತಕದ ಜೊತೆಯಾಟ...
ಐದನೇ ವಿಕೆಟ್‌ಗೆ 208 ರನ್‌ಗಳ ಜೊತೆಯಾಟ ಕಟ್ಟಿದ ಖ್ವಾಜಾ ಹಾಗೂ ಗ್ರೀನ್ ಭಾರತೀಯ ಬೌಲರ್‌ಗಳನ್ನು ಕಾಡಿದರು.
ಖ್ವಾಜಾ ಕೇವಲ 20 ರನ್ ಅಂತರದಲ್ಲಿ ದ್ವಿಶತಕ ವಂಚಿತರಾದರು. 422 ಎಸೆತಗಳನ್ನು ಎದುರಿಸಿದ ಅವರು 21 ಬೌಂಡರಿಗಳ ನೆರವಿನಿಂದ 180 ರನ್ ಗಳಿಸಿದರು.
ಗ್ರೀನ್ ಚೊಚ್ಚಲ ಶತಕ...
ಮತ್ತೊಂಡೆದೆ ಟೆಸ್ಟ್ ಕ್ರಿಕೆಟ್‌ನಲ್ಲಿ ಕ್ಯಾಮರೂನ್ ಗ್ರೀನ್ ಚೊಚ್ಚಲ ಶತಕ ದಾಖಲಿಸಿದರು. 170 ಎಸೆತಗಳನ್ನು ಎದುರಿಸಿದ ಗ್ರೀನ್ 114 ರನ್ (18 ಬೌಂಡರಿ) ಗಳಿಸಿ ಔಟ್ ಆದರು.
ಗಾಯದ ಮೇಲೆ ಬರೆ ಎಳೆದ ಮರ್ಫಿ-ಲಯನ್...
ಟಾಡ್ ಮರ್ಫಿ ಮತ್ತು ನೇಥನ್ ಲಯನ್ ಒಂಬತ್ತನೇ ವಿಕೆಟ್‌ಗೆ 70 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಈ ಮೂಲಕ ಗಾಯದ ಮೇಲೆ ಬರೆ ಎಳೆದರು.
61 ಎಸೆತಗಳನ್ನು ಎದುರಿಸಿದ ಮರ್ಫಿ 41 ರನ್ (5 ಬೌಂಡರಿ) ಗಳಿಸಿದರು. ನೇಥನ್ ಲಯನ್ 34 ರನ್ ಗಳಿಸಿದರು.
ಭಾರತದ ಪರ ಅಶ್ವಿನ್ ಆರು ಮತ್ತು ಮೊಹಮ್ಮದ್ ಶಮಿ ಎರಡು ವಿಕೆಟ್ ಕಬಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.