ADVERTISEMENT

ಏಳೇ ನಿಮಿಷದಲ್ಲಿ ಭಾರತದ ಕೋಚ್‌ ಹುದ್ದೆಗೇರಿದ್ದ ಕರ್ಸ್ಟನ್‌

ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಗ್ಯಾರಿ

ಪಿಟಿಐ
Published 15 ಜೂನ್ 2020, 14:17 IST
Last Updated 15 ಜೂನ್ 2020, 14:17 IST
ಗ್ಯಾರಿ ಕರ್ಸ್ಟನ್‌
ಗ್ಯಾರಿ ಕರ್ಸ್ಟನ್‌   

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಅತ್ಯಂತ ಯಶಸ್ವಿ ಕೋಚ್‌ ಆಗಿದ್ದ ಗ್ಯಾರಿ ಕರ್ಸ್ಟನ್‌ ಅವರು ಕೇವಲ ಏಳೇ ನಿಮಿಷಗಳಲ್ಲಿ ಈ ಹುದ್ದೆಗೇರಿದ್ದರಂತೆ!

ಕಾರ್ಯಕ್ರಮವೊಂದರಲ್ಲಿ ಅವರು ಈ ಕುರಿತ ಸ್ವಾರಸ್ಯಕರ ಸಂಗತಿಗಳನ್ನು ಮೆಲುಕು ಹಾಕಿದ್ದಾರೆ.

‘ಅದೊಂದು ದಿನ ಭಾರತದ ಹಿರಿಯ ಕ್ರಿಕೆಟಿಗ ಸುನಿಲ್‌ ಗಾವಸ್ಕರ್ (ಆಗ ಕೋಚ್‌ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು) ಅವರು ಇ ಮೇಲ್‌ವೊಂದನ್ನು ಕಳುಹಿಸಿದ್ದರು. ನಿಮ್ಮನ್ನು ಭಾರತ ತಂಡದ ಕೋಚ್‌ ಹುದ್ದೆಗೆ ಪರಿಗಣಿಸಬಹುದೇ ಎಂದು ಅದರಲ್ಲಿ ಬರೆದಿತ್ತು. ಯಾರೊ ಆನ್‌ಲೈನ್‌ ವಂಚಕರು ಆ ರೀತಿ ಮೇಲ್‌ ಕಳಿಸಿರಬಹುದೆಂದು ಭಾವಿಸಿ ಸುಮ್ಮನಾಗಿದ್ದೆ. ಬಳಿಕ ಗಾವಸ್ಕರ್‌ ಅವರಿಂದ ಮತ್ತೊಂದು ಮೇಲ್‌ ಬಂತು. ನೀವು ಸಂದರ್ಶನಕ್ಕೆ ಬರುತ್ತೀರೇ ಎಂದು ಅದರಲ್ಲಿ ಉಲ್ಲೇಖಿಸಿದ್ದರು. ಅದನ್ನು ನನ್ನ ಪತ್ನಿಗೆ ತೋರಿಸಿದೆ. ಅದಕ್ಕವಳು, ಅವರು ತಪ್ಪಾದ ವ್ಯಕ್ತಿಗೆ ಆಹ್ವಾನ ನೀಡಿದ್ದಾರೆ ಎಂದು ಛೇಡಿಸಿದ್ದಳು’ ಎಂದು ಕರ್ಸ್ಟನ್‌ ಹೇಳಿದ್ದಾರೆ.

ADVERTISEMENT

‘ಆಗ ನನಗೆ ಕೋಚ್‌ ಆಗಿ ಕೆಲಸ ಮಾಡಿದ ಅನುಭವ ಇರಲಿಲ್ಲ. ಆಸಕ್ತಿಯೂ ಇರಲಿಲ್ಲ. ಸರಿ ಏನಾಗಲಿದೆಯೋ ನೋಡೇ ಬಿಡೋಣ ಎಂದು ಸಂದರ್ಶನಕ್ಕೆ ಹಾಜರಾಗಲು ಹೋದೆ. ಅಲ್ಲಿ ಅನಿಲ್‌ ಕುಂಬ್ಳೆ ಎದುರಾದರು. ಆಗ ಭಾರತ ತಂಡದ ನಾಯಕರಾಗಿದ್ದ ಅವರು ನನ್ನನ್ನು ಕಂಡು ನೀವು ಇಲ್ಲೇನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಕೋಚ್‌ ಹುದ್ದೆಯ ಸಂದರ್ಶನಕ್ಕೆ ಹಾಜರಾಗಲು ಬಂದಿದ್ದೇನೆ. ಮುಂದೆ ನಿಮಗೆ ನಾನೇ ಮಾರ್ಗದರ್ಶನ ನೀಡಬೇಕು ಎಂದಾಕ್ಷಣವೇ ಅವರು ನಕ್ಕರು. ನನಗೂ ನಗು ತಡೆಯಲು ಆಗಿರಲಿಲ್ಲ’ ಎಂದು ತಿಳಿಸಿದ್ದಾರೆ.

‘ಸಂದರ್ಶನಕ್ಕೆ ಹೋಗುವ ಮುನ್ನ ಸರಿಯಾದ ಸಿದ್ಧತೆಯನ್ನೂ ಮಾಡಿಕೊಂಡಿರಲಿಲ್ಲ. ಆಗ ಕೋಚ್‌ ಆಯ್ಕೆ ಸಮಿತಿಯಲ್ಲಿದ್ದ ರವಿಶಾಸ್ತ್ರಿ ನನಗೆ ಪ್ರಶ್ನೆಯೊಂದನ್ನು ಕೇಳಿದ್ದರು. ದಕ್ಷಿಣ ಆಫ್ರಿಕಾ ತಂಡದವರು ಭಾರತವನ್ನು ಹೇಗೆ ಮಣಿಸುತ್ತೀರಿ ಎಂಬ ಪ್ರಶ್ನೆಗೆ, ನಮ್ಮ (ತಂಡದ) ತಂತ್ರಗಳನ್ನು ಹೇಳದೆಯೇ ಮೂರು ನಿಮಿಷಗಳಲ್ಲಿ ಜವಾಬು ಕೊಟ್ಟಿದ್ದೆ. ನನ್ನ ಉತ್ತರ ಕೇಳಿ ಎಲ್ಲರೂ ಖುಷಿಯಾದರು. ನಂತರದ ನಾಲ್ಕೇ ನಿಮಿಷದಲ್ಲಿ ಒಪ್ಪಂದದ ಪತ್ರ ನನ್ನ ಕೈಸೇರಿತ್ತು’ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

‘ಒಪ್ಪಂದದ ಪತ್ರ ಸಿಕ್ಕ ಕೂಡಲೇ ಕುತೂಹಲದಿಂದ ಅದನ್ನು ಓದಲು ಶುರುಮಾಡಿದೆ. ಮೊದಲ ಪುಟದಲ್ಲಿ ನನ್ನ ಹೆಸರೇ ಇರಲಿಲ್ಲ. ಬದಲಾಗಿ ನನಗೂ ಮುಂಚೆ ಕೋಚ್‌ ಹುದ್ದೆಯಲ್ಲಿದ್ದ ಗ್ರೇಗ್‌ ಚಾಪೆಲ್‌ ಅವರ ಹೆಸರನ್ನು ಅದರಲ್ಲಿ ಉಲ್ಲೇಖಿಸಲಾಗಿತ್ತು. ಕೂಡಲೇ ಆ ಪತ್ರವನ್ನು ಬಿಸಿಸಿಐ ಕಾರ್ಯದರ್ಶಿಗೆ ಹಿಂತಿರುಗಿಸಿ ಇದರಲ್ಲಿ ನನ್ನ ಹೆಸರೇ ಇಲ್ಲ, ನೀವು ಹಳೆಯ ಪತ್ರ ನೀಡಿದ್ದೀರಿ ಎಂದೆ. ಪತ್ರದ ಮೇಲೆ ಒಮ್ಮೆ ಕಣ್ಣಾಡಿಸಿದ ಅವರು ಚಾಪೆಲ್‌ ಅವರ ಹೆಸರನ್ನು ಅಳಿಸಿ ಆ ಜಾಗದಲ್ಲಿ ನನ್ನ ಹೆಸರು ಬರೆದು ಪತ್ರ ಹಿಂತಿರುಗಿಸಿದ್ದರು’ ಎಂದು ಸ್ಮರಿಸಿದ್ದಾರೆ.

ಕರ್ಸ್ಟನ್‌ ಅವರು 2008ರಲ್ಲಿ ಕೋಚ್‌ ಹುದ್ದೆ ಅಲಂಕರಿಸಿದ ಬಳಿಕ ಭಾರತ ತಂಡವು ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೆ (2009) ಏರಿತ್ತು. 2011ರಲ್ಲಿ ಭಾರತದಲ್ಲೇ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದು ಹೊಸ ಮೈಲುಗಲ್ಲು ಸ್ಥಾಪಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.