ADVERTISEMENT

ಐಪಿಎಲ್‌ ಬಯೊಬಬಲ್‌ನಲ್ಲಿ ಕೋವಿಡ್ ಆತಂಕ

ವರುಣ್‌, ಸಂದೀಪ್‌ಗೆ ಸೋಂಕು; ಸಿಎಸ್‌ಕೆಯಲ್ಲಿ ‘ಪರೀಕ್ಷೆ‘ ಗೊಂದಲ; ದೆಹಲಿಯಲ್ಲೂ ಭಯ

ಪಿಟಿಐ
Published 3 ಮೇ 2021, 11:49 IST
Last Updated 3 ಮೇ 2021, 11:49 IST
ನಾಯಕ ಏಯಾನ್ ಮಾರ್ಗನ್ (ಎಡ) ಜೊತೆ ವರುಣ್ ಚಕ್ರವರ್ತಿ –ಪಿಟಿಐ ಚಿತ್ರ
ನಾಯಕ ಏಯಾನ್ ಮಾರ್ಗನ್ (ಎಡ) ಜೊತೆ ವರುಣ್ ಚಕ್ರವರ್ತಿ –ಪಿಟಿಐ ಚಿತ್ರ   

ನವದೆಹಲಿ: ಇಬ್ಬರು ಆಟಗಾರರು ಸೋಂಕಿಗೆ ಒಳಗಾದ ಹಿನ್ನೆಲೆಯಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಮತ್ತು ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ಪಂದ್ಯ ರದ್ದಾದ ಬೆನ್ನಲ್ಲೇ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್‌ ಟೂರ್ನಿಯ ಬಯೊಬಬಲ್‌ನಲ್ಲಿ ಕೋವಿಡ್‌ ಆತಂಕ ಮೂಡಿದೆ.

ಗಾಯಕ್ಕೆ ಚಿಕಿತ್ಸೆ ಪಡೆಯಲು ಬಯೊಬಬಲ್‌ನಿಂದ ಹೊರಗೆ ಹೋಗಿದ್ದರು ಎನ್ನಲಾದ ಕೆಕೆಆರ್ ತಂಡದ ಸ್ಪಿನ್ನರ್ ವರುಣ್ ಚಕ್ರವರ್ತಿ ಮತ್ತು ಮಧ್ಯಮ ವೇಗಿ ಸಂದೀಪ್ ವಾರಿಯರ್‌ಗೆ ಕೋವಿಡ್ ಇರುವುದು ಸೋಮವಾರ ದೃಢಪಟ್ಟಿತ್ತು. ಹೀಗಾಗಿ ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯವನ್ನು ಮುಂದೂಡಲಾಗಿತ್ತು. ಈ ಪಂದ್ಯವನ್ನು ಟೂರ್ನಿಯ ಕೊನೆಯ ಘಟ್ಟದಲ್ಲಿ ಆಯೋಜಿಸುವ ಸಾಧ್ಯತೆ ಇದೆ.

‘ನಾಲ್ಕು ದಿನಗಳಲ್ಲಿ ನಡೆದ ಮೂರನೇ ಸುತ್ತಿನ ಪರೀಕ್ಷೆಯಲ್ಲಿ ವರುಣ್ ಮತ್ತು ಸಂದೀಪ್‌ ಅವರಿಗೆ ಸೋಂಕು ಇರುವುದು ದೃಢಪಟ್ಟಿತ್ತು. ಉಳಿದ ಎಲ್ಲ ಆಟಗಾರರ ವರದಿ ನೆಗೆಟಿವ್ ಬಂದಿದೆ. ಸಂದೀಪ್ ಮತ್ತು ವರುಣ್ ಅವರನ್ನು ಪ್ರತ್ಯೇಕವಾಸದಲ್ಲಿ ಇರಿಸಲಾಗಿದೆ’ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಇದೇ ವೇಳೆ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಶಿ ವಿಶ್ವನಾಥನ್, ಬೌಲಿಂಗ್ ಕೊಚ್ ಎಲ್‌.ಬಾಲಾಜಿ ಮತ್ತು ಸಿಬ್ಬಂದಿಯೊಬ್ಬರಿಗೆ ಸೋಂಕು ಇರುವುದು ಭಾನುವಾರ ದೃಢಪಟ್ಟಿದ್ದು ಸೋಮವಾರ ನೆಗೆಟಿವ್ ವರದಿ ಬಂದಿದೆ ಎಂದು ತಿಳಿಸಲಾಗಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮೂಲವೊಂದು ಇದನ್ನು ‘ತಪ್ಪು ಪರೀಕ್ಷಾ ವರದಿ’ ಎಂದು ವ್ಯಾಖ್ಯಾನಿಸಿದೆ.

ಈ ನಡುವೆ ಮಂಗಳವಾರ ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯಕ್ಕೆ ಆತಿಥ್ಯ ವಹಿಸಬೇಕಾಗಿರುವ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಆದರೆ ಸೋಂಕು ಇರುವ ಯಾರೂ ಕೆಲಸದಲ್ಲಿ ತೊಡಗಿಸಿಕೊಂಡಿಲ್ಲ ಎಂದು ಡಿಡಿಸಿಎ ಮುಖ್ಯಸ್ಥ ರೋಹನ್ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.

ಆಸ್ಟ್ರೇಲಿಯಾದ ಮೂವರು ಆಟಗಾರರು ಬಯೊಬಬಲ್ ತೊರೆದು ತವರಿಗೆ ಮರಳಿದ ನಂತರವೂ ಟೂರ್ನಿಯನ್ನು ಮುಂದುವರಿಸಲಾಗುವುದು ಎಂದು ಬಿಸಿಸಿಐ ಹೇಳಿತ್ತು. ಆದರೆ ಸೋಮವಾರ ನಡೆದಿರುವ ಬೆಳವಣಿಗೆಯಿಂದಾಗಿ ಟೂರ್ನಿ ಮುಂದುವರಿಯುವುದರ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ.

‘ವೈದ್ಯಕೀಯ ತಂಡವು ಕೆಕೆಆರ್‌ ಆಟಗಾರರ ಆರೋಗ್ಯದ ಮೇಲೆ ನಿಗಾ ಇರಿಸಿದ್ದು ಸತತವಾಗಿ ಸಂಪರ್ಕದಲ್ಲಿದೆ. ಇಬ್ಬರಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಂಡವು ಪ್ರತಿದಿನ ಆಟಗಾರರನ್ನು ಪರೀಕ್ಷೆಗೆ ಒಳಪಡಿಸಲು ಮುಂದಾಗಿದೆ’ ಎಂದು ಐಪಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಪಾಳಯದಲ್ಲೂ ಆತಂಕ?

ಕೋಲ್ಕತ್ತ ನೈಟ್‌ ರೈಡರ್ಸ್‌ನ ಕೊನೆಯ ಪಂದ್ಯ ಏಪ್ರಿಲ್ 29ರಂದು ಅಹಮದಾಬಾದ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಡೆಲ್ಲಿ ಪಾಳಯದಲ್ಲೂ ಆತಂಕ ಮೂಡಿದೆ.

‘ಈಗ ಡೆಲ್ಲಿ ತಂಡದ ಆಟಗಾರರನ್ನೂ ಪರೀಕ್ಷೆಗೆ ಒಳಪಡಿಸಬೇಕಾಗಿದೆ. ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ ಅವರ ಸಂಪರ್ಕಕ್ಕೆ ಬಂದವರು ಯಾರಿದ್ದಾರೆ ಎಂಬುದನ್ನು ಪತ್ತೆ ಮಾಡಬೇಕಾಗಿದೆ. ಇದಕ್ಕಾಗಿ ಪ್ರತ್ಯೇಕ ಆ್ಯಪ್ ಇದೆ’ ಎಂದು ಬಿಸಿಸಿಐ ತಿಳಿಸಿದೆ.

ಐಪಿಎಲ್‌ ನಿಯಮಾವಳಿಗಳ ಪ್ರಕಾರ ಸೋಂಕಿತರ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಆರು ದಿನಗಳ ಕಾಲ ಪ್ರತ್ಯೇಕವಾಸದಲ್ಲಿ ಇರಿಸಬೇಕು. ಒಂದು, ಮೂರು ಮತ್ತು ಆರನೇ ದಿನ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ವರದಿ ಬಂದರೆ ಮಾತ್ರ ತಂಡದೊಂದಿಗೆ ಸೇರಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.